ಪುತ್ತೂರು : ಬೆಳ್ಳಾರೆಯಲ್ಲಿ ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾದ ಪ್ರವೀಣ್ ನೆಟ್ಟಾರುರವರ ಮನೆಗೆ ಇಂದು ಮಾಜಿ ಶಾಸಕ  ಐವನ್ ಡಿ ಸೋಜರವರ ನೇತೃತ್ವದ ಕಾಂಗ್ರೆಸ್ ನಿಯೋಗ ಭೇಟಿ ಮಾಡಿ, ಮೃತ ಪ್ರವೀಣ್‍ರವರ ಹೆಂಡತಿ ಮತ್ತು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಐವನ್ ಡಿ ಸೋಜ ಇವರು, ರಾಜ್ಯ ಸರಕಾರ ಕೂಡಲೇ ತಪ್ಪಿಗಸ್ಥರನ್ನು ಪತ್ತೆ ಹಚ್ಚಿ ಶಿಕ್ಷಿಸುವ ಜೊತೆಗೆ ಇಂತಹ ಕ್ರಮ ನಡೆಯದಂತೆ ಕ್ರಮ ಕೈಗೊಳ್ಳಬೇಕು ಮತ್ತು ಮೃತ ಕುಟುಂಬಕ್ಕೆ ಆಧಾರವಾಗಿದ್ದ ಪ್ರವೀಣ್ ನೆಟ್ಟಾರುರವರ ಮರಣದಿಂದ ಉಂಟಾಗಿರುವ ನಷ್ಟವನ್ನು ಭರಿಸಲು ಕೂಡಲೇ ಪರಿಹಾರವನ್ನು ಒದಗಿಸಬೇಕು. ಅದೇ ರೀತಿ ಕಳೆದ ವಾರ ಮೃತರಾದ ಮಸೂದ್‍ರವರ ಕುಟುಂಬಕ್ಕೂ ಸರಕಾರದಿಂದ ಗರಿಷ್ಠ ಪ್ರಮಾಣದ ಪರಿಹಾರ ವನ್ನು ಒದಗಿಸಿಕೊಡಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿದರು. 

ಕೋಮು ಸಂಘರ್ಷವನ್ನು ಸೃಷ್ಟಿಸುವ ವ್ಯಕ್ತಿಗಳ ವಿರುದ್ಧ ನಿಗಾ ವಹಿಸಬೇಕು ಮತ್ತು ಯಾವುದೇ ಸಂಘಟನೆಗಳು ಇಂತಹ ಕೋಮು ಸಂಘರ್ಷವನ್ನು ಸೃಷ್ಟಿಸುದ್ದಲ್ಲಿ, ಅದರ ಬಗೆ ಯಾವುದೇ ಕಾರಣಕ್ಕೂ ಕ್ರಮ  ತೆಗೆದುಕೊಳ್ಳಲು ಹಿಂಜರಿಯಕೂಡದು. ಎಲ್ಲರನ್ನು ಸಮಾನ ಕಾಣುವ ಮತ್ತು ಎಲ್ಲರಿಗೂ ರಕ್ಷಣೆ ನೀಡಲು ಸರಕಾರ ಬಧ್ದರಾಗಬೇಕು. ಪ್ರಸ್ತುತ ಸರಕಾರದ ನೀತಿಯಲ್ಲಿ ಉಂಟಾದ ತಪ್ಪುಗಳಿಂದ ಈ ರೀತಿ  ಕೃತ್ಯ ನಡೆಯುತ್ತಿದ್ದು, ಇದರ ಪ್ರಯೋಜನ ಪಡೆಯುತ್ತಿರುವ ಕೋಮು ಭಾವನೆಗಳುಳ್ಳ ವ್ಯಕ್ತಿಗಳ ಮೇಲೆ ತೀವ್ರ ನಿಗಾ ವಹಿಸುವುದು ಅಗತ್ಯ ಎಂದು ಮಾಜಿ ಶಾಸಕ ಐವನ್ ಡಿ ಸೋಜರವರು ತಿಳಿಸಿದರು.

ಕಾಂಗ್ರೆಸ್ ನಿಯೋಗದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರಾದ ಅನಿಲ್ ರೈ ಬೆಳ್ಳಾರೆ, ಸಚಿನ್‍ರಾಜ್ ಶೆಟ್ಟಿ, ಬೆಳ್ಳಾರೆ, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ವಿಠಲ್ ದಾಸ್, ಆನಂದ್ ಬೆಳ್ಳಾರೆ, ವೆಂಕಪ್ಪ ಗೌಡ, ದೀಕ್ಷೀತ್ ಅತ್ತಾವರ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಪಿಯುಸ್ ಮೊಂತೆರೊ, ಆಲಿಸ್ಟನ್ ಡಿಕುನ್ಹಾ, ಮಿಲಾಜ್ ಅತ್ತಾವರ ಮುಂತಾದವರು ಉಪಸ್ಥಿತರಿದ್ದರು.