ಕಾರ್ಕಳ: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ, ವೀರ ಸಾಹಸವನ್ನು ಮೆರೆದ ಧೀರ ಯೋಧರ ಸಾಹಸಗಾಥೆಯ ಕಥೆಗಳನ್ನು ಕೇಳುವುದರ ಮೂಲಕ ವಿದ್ಯಾರ್ಥಿಗಳು ಬಾಲ್ಯದಿಂದಲೇ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಭಾರತೀಯ ಸೇನೆಯ ಮಾಜಿ ಯೋಧ ಹಾಗೂ ಕರ್ನಾಟಕ ವಿಧಾನ ಪರಿಷತ್ತುನ ನಿಕಟಪೂರ್ವ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ಅವರು ಎಸ್.ವಿ.ಟಿ ವನಿತಾ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ವಿಶೇಷ ಉಪನ್ಯಾಸವನ್ನು ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕಾರ್ಗಿಲ್ ಯುದ್ಧವು ಭಾರತದ ಇತಿಹಾಸದಲ್ಲಿ ಮರೆಯಲಾಗದ ಘಟನೆಯಾಗಿದೆ.
ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ದೇಶಭಕ್ತಿಯ ಭಾವನೆಗಳನ್ನು ತಂದ ಸಂದರ್ಭ ಇದಾಗಿದೆ . ಭಾರತೀಯ ಸೈನಿಕರ ಕೆಚ್ಚೆದೆಯ ಹೋರಾಟವು ಈ ದೇಶದ ಎಲ್ಲಾ ನಾಗರಿಕರಿಗೆ ಸ್ಫೂರ್ತಿಯಾಗಿ ಮುಂದುವರಿಯುತ್ತದೆ.
ಭಾರತೀಯರಾದ ನಾವು ರಾಷ್ಟ ಪ್ರೇಮವನ್ನು ಬೆಳೆಸಿಕೊಳ್ಳುವ ಮೂಲಕ ದೇಶಕ್ಕೆ ನಮ್ಮಿಂದಾದ ಕೊಡುಗೆಯನ್ನು ನೀಡುವ ಕಾರ್ಯವನ್ನು ಮಾಡಬೇಕು ಎಂದರು. ಎಸ್.ವಿ. ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಕೆ.ಪಿ.ಶೆಣೈ ಅಧ್ಯಕ್ಷತೆಯನ್ನು ವಹಿಸಿದರು.
ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾದ ಶ್ರೀ ರಾಮದಾಸ್ ಪ್ರಭು, ಪ್ರೌಢ ಶಾಲಾ ವಿಭಾಗದ ಹಿರಿಯ ಸಹ ಶಿಕ್ಷಕರಾದ ಯೋಗೇಂದ್ರ ನಾಯಕ್, ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲಿನಿ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕ ದೇವದಾಸ್ ಕೆರೆಮನೆ ಕಾರ್ಯಕ್ರಮವನ್ನು ನಿರೂಪಿಸಿದರು . ಉಪನ್ಯಾಸಕ ಪದ್ಮಪ್ರಭ ಇಂದ್ರ ಸ್ವಾಗತಿಸಿದರು. ಶಿಕ್ಷಕ ಸುನಿಲ್ ಎಸ್. ಶೆಟ್ಟಿ ವಂದಿಸಿದರು.