(ಜಯಾನಂದ ಪೆರಾಜೆ ಬಂಟ್ವಾಳ)
ಪಾಣೆಮಂಗಳೂರು ಜೈನರ ಪೇಟೆಯ ಪುರಾತನ ಭ.1008 ಶ್ರೀ ಅನಂತನಾಥ ತೀರ್ಥಂಕರ, ಭ.1008 ಶ್ರೀ ಚಂದ್ರನಾಥ ತೀರ್ಥಂಕರ, ಮಹಾ ಮಾತೆ ಪದ್ಮಾವತಿ ದೇವಿ ಜಿನ ಚೈತ್ಯಾಲಯದಲ್ಲಿ ಸುಮಾರು 2.5 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ತ್ಯಾಗಿ ನಿವಾಸ, ಸಭಾ ಭವನ, ಭೋಜನ ಶಾಲೆ ಮತ್ತು ತಡೆಗೋಡೆ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ಮೂಡುಬಿದಿರೆ ಜೈನ ಮಠದ ಪರಮ ಪೂಜ್ಯ ಭಾರತ ಭೂಷಣ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ, ವಾಸ್ತು ತಜ್ಞ ಶ್ರೀ ಸುದರ್ಶನ ಇಂದ್ರ ಮತ್ತು ಪುರೋಹಿತರ ನೇತೃತ್ವದಲ್ಲಿ ವಿಧಿ ಪ್ರಕಾರ ನಡೆಯಿತು.
ಸಭಾ ಕಾರ್ಯಕ್ರಮವನ್ನು ಪರಮ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ, ದಾನಿಗಳ ಸಮ್ಮುಖದಲ್ಲಿ ಸಹಕಾರ ರತ್ನ, SCDCC ಬ್ಯಾಂಕ್ ನ ಅಧ್ಯಕ್ಷ ಡಾ. M N ರಾಜೇಂದ್ರ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರಿನ ಶ್ರೀ ಬ್ರಹ್ಮದೇವಯ್ಯ ರವರು ವಹಿಸಿದ್ದರು.
ಕಟ್ಟಡದ ನಿರ್ಮಾಣ ಮಾಡಲು ದಾನ ನೀಡಿದ ಸಮಾಜದ ಮಹನೀಯರಿಗೆ ಸ್ವಾಗತಿಸಿ ಗೌರವಿಸಲಾಯಿತು.
ಡಾ. ಎಮ್ ಎನ್ ರಾಜೇಂದ್ರ ಕುಮಾರ್ ರವರಿಗೆ ಜೀರ್ಣೋದ್ಧಾರ ಸಮಿತಿಯ ಸರ್ವ ಸದಸ್ಯರು, ಉಪಸ್ಥಿತ ಗಣ್ಯರು ಸೇರಿ ಗೌರವಿಸಿದರು.
ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ನಾವೆಲ್ಲರೂ ನಮ್ಮ ದೈನಂದಿನ ಸಂಪಾದನೆಯಲ್ಲಿ ಒಂದು ಪಾಲು ದಾನಕ್ಕಾಗಿ ಮೀಸಲಿಟ್ಟು, ಅದನ್ನು ಇಂತಹ ಉತ್ತಮ ಕಾರ್ಯಗಳಿಗೆ ದಾನ ನೀಡಿದಲ್ಲಿ ಆ ಪುಣ್ಯ ನಮ್ಮನ್ನು ಕಾಪಾಡುತ್ತದೆ ಎಂದು ಹೇಳಿದರು.
ಅತಿಥಿಗಳಲ್ಲಿ ರತ್ನಾಕರ್ ಜೈನ್, ಮಂಗಳೂರು ಮಾತನಾಡಿ ಪಾಣೆಮಂಗಳೂರು ಬಸದಿಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.
ಮಂಗಳೂರಿನ ಖ್ಯಾತ ವಕೀಲರಾದ ಜಿನೇಂದ್ರ ಕುಮಾರ್ ದಾನದ ಮಹತ್ವವನ್ನು ಉಲ್ಲೇಖಿಸಿ ಮಾತನಾಡಿದರು.
ಸಭಾಧ್ಯಕ್ಷ ಬ್ರಹ್ಮದೇವಯ್ಯ ಬೆಂಗಳೂರು ಮಾತನಾಡಿ ತಮ್ಮ ಜೀವನದಲ್ಲಿ ಮುನಿಶ್ರೀ 108 ಚಂದ್ರಸಾಗರ ಮಹಾರಾಜರು ಬೀರಿದ ಸಂಸ್ಕಾರದ ಮಾತನಾಡಿ ಪಾಣೆಮಂಗಳೂರು ಬಸದಿಯ ಅಭಿವೃದ್ಧಿಗೆ ಎಲ್ಲರೂ ಸೇರಿ ಸಹಕರಿಸಲು ಮನವಿ ಮಾಡಿದರು.
ಹರ್ಷರಾಜ ಬಳ್ಳಾಲ್ ಸ್ವಾಗತಿಸಿದರು, ದೀಪಕ್ ಕುಮಾರ್ ಇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸುಭಾಸ್ ಚಂದ್ರ ಜೈನ್ ಕಾರ್ಯಕ್ರಮ ನಿರ್ವಹಣೆ ಮಾಡಿ ಧನ್ಯವಾದ ಸಮರ್ಪಿಸಿದರು.