ಮಂಗಳೂರು:  ಶಕ್ತಿ ವಿದ್ಯಾಸಂಸ್ಥೆ ಶಕ್ತಿನಗರ, ಮಂಗಳೂರು ಇಲ್ಲಿನ ರೇಷ್ಮಾ ಮೆಮೋರಿಯಲ್‍ ಆಡಿಟೋರಿಯಂನಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುಧಾಕರ್ ರಾವ್ ಪೇಜಾವರ ನಿವೃತ್ತ ಶಿಕ್ಷಕರು ಹಾಗೂ ಟ್ರಸ್ಟಿ ತುಳುನಾಡು ಎಜುಕೇಶನಲ್‍ ಟ್ರಸ್ಟ್, ಮಂಗಳೂರು ಇವರು ದೀಪವನ್ನು ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಕ್ತಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ಮಹತ್ವದ ಬಗ್ಗೆ ಕನ್ನಡ, ಆಂಗ್ಲ, ಹಿಂದಿ ಹಾಗೂ ಸಂಸ್ಕೃತ ಭಾಷೆಯಲ್ಲಿ ವ್ಯಕ್ತಪಡಿಸಿದರು. ಪ್ರತಿ ವರ್ಷವೂ ಓರ್ವ ಸಾಧಕ ಶಿಕ್ಷಕನನ್ನು ಗುರುತಿಸಿ ಸನ್ಮಾನಿಸುವ ಸಂಪ್ರದಾಯ ಹೊಂದಿರುವ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಈ ವರ್ಷವೂ ಸಾಧಕ ಶಿಕ್ಷಕನಾದ  ಸುಧಾಕರ್ ರಾವ್  ಪೇಜಾವರ ಇವರಿಗೆ ಸನ್ಮಾನಿಸಲಾಯಿತು. 

ವೇದಿಕೆಯಲ್ಲಿ ಎಲ್ಲಾ ಗಣ್ಯರು ಈ ಸನ್ಮಾನ ಕಾರ್ಯಕ್ರಮದಲ್ಲಿ ಜೊತೆಗೂಡಿದರು. ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ಬಬಿತಾ ಸೂರಜ್ ಸನ್ಮಾನ ಪತ್ರವನ್ನು ವಾಚಿಸಿದರು. ಬಳಿಕ ಮಾತನಾಡಿದ  ಸುಧಾಕರ್ ರಾವ್ ಪೇಜಾವರ ಅವರು ದೇಶಕ್ಕೆಇಂದು ಸತ್ಪ್ರಜೆಗಳು ಬೇಕಾಗಿದ್ದಾರೆ. ಅದನ್ನು ನೀಡುವತಾ ಕತ್ತು ಇರುವುದು ಶಿಕ್ಷಕರಿಗೆ ಮಾತ್ರ. ಅರ್ಥಪೂರ್ಣವಾದ ಸಮಾಜಕ್ಕೆ ಬೇಕಾದ ಒಂದು ಶಕ್ತಿಯುತವಾದ ಪ್ರಜಾ ಸಂಪತ್ತನ್ನು ನೀಡುವವರು. ನಮ್ಮ ಶಿಕ್ಷಕರು. ಅತಿಯಾದ ವಾತ್ಸಲ್ಯವನ್ನು ತೋರುವ ಅಮ್ಮ ಒಂದೆಡೆಯಾದರೆ, ಇನ್ನೊಂದೆಡೆ ಮಿತಿಯಾದ ವಾತ್ಸಲ್ಯವನ್ನು ತೋರಿ ಮಕ್ಕಳನ್ನು ತಿದ್ದಿ ತೀಡುವ ತಾಯಿ ಶಿಕ್ಷಕಿ. ಇಂತಹ ಶಿಕ್ಷಕರು ಒಂದು ಮಗುವಿನ ಉತ್ತಮ ಭವಿಷ್ಯಕ್ಕೆ ಬಹಳ ಮುಖ್ಯವಾಗಿದೆ. ಇಂದು ಶಿಕ್ಷಣ ವ್ಯವಸ್ಥೆ ಬದಲಾಗಿರಬಹುದು, ಆದರೆ ಹೃದಯದ ಭಾವನೆ ಬದಲಾವಣೆ ಆಗಬಾರದು. ಗುರು ಮತ್ತು ಶಿಷ್ಯರ ನಡುವಿನ ಬಾಂಧವ್ಯದ ಬೆಸುಗೆ ಇನ್ನಷ್ಟು ಗಟ್ಟಿಯಾಗಬೇಕು ಎಂದರು. ಯಾರು ತನ್ನ ಹೆತ್ತವರಿಗೆ ಗುರುಹಿರಿಯರಿಗೆ ಗೌರವವನ್ನು ಕೊಡುತ್ತಾನೋ ಅಂತಹ ವ್ಯಕ್ತಿ ತನ್ನ ಭವಿಷ್ಯದಲ್ಲಿ ಜೀವನ ಪರ್ಯಂತ ಎಲ್ಲರಿಂದ ಗೌರವವನ್ನು ಪಡೆಯುವ ಮಟ್ಟಕ್ಕೆ ಮುಟ್ಟಬಹುದು. ಕಷ್ಟದಲ್ಲಿ ಇದ್ದಾಗ ಸತತ ಪ್ರಯತ್ನ ಮಾಡಿದರೆ ದೇವರು ಅಶಿರ್ವಾದಿಸುತ್ತಾರೆ. ಪ್ರಯತ್ನ ಮಾಡದವ ನೀರಿನಲ್ಲಿ ಮುಳುಗುತ್ತಾನೆ, ಪ್ರಯತ್ನ ಮಾಡುತ್ತಾ ಇರುವವ ನೀರಿನಿಂದ ಮೇಲೆ ಬರುತ್ತಾನೆ. ದೇವರು ಎಲ್ಲರಿಗೂ ಸಮಾನವಾದ ಪ್ರತಿಭೆಯನ್ನು ಗುಣಗಳನ್ನು ಜಾಣ್ಮೆಯನ್ನು ಕೊಟ್ಟಿದ್ದಾನೆ. ಆದರೆ ಅದನ್ನು ಬಳಸಿಕೊಳ್ಳುವುದು ವಿದ್ಯಾರ್ಥಿಯ ಜವಾಬ್ದಾರಿ. ಭಗವಂತ ಕೆಟ್ಟಗುಣಗಳನ್ನು ಹೊರಗಿಟ್ಟು ಒಳ್ಳೆಯ ಗುಣಗಳನ್ನು ಒಳಗೆ ಇಟ್ಟಿದ್ದಾನೆ. ಒಳಗಿನ ಗುಣಗಳನ್ನು ಹೊರಗೆ ಬಿಡದೆ, ಹೊರಗಿನ ಗುಣಗಳನ್ನು ಒಳಗೆ ಬಿಡದೆ ಕಾಪಾಡಿಕೊಳ್ಳಿ ಎಂದು ಹರಸಿದರು. ವಿದ್ಯಾರ್ಥಿಗಳು ತಮ್ಮಲ್ಲಿ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಆ ಮೂಲಕ ಒಳ್ಳೆಯ ಸಂಸ್ಕಾರಭರಿತ ಶಕ್ತಿಯುತವಾದ ಪ್ರಜೆಗಳಾಗಿ ಹೊರ ಹೊಮ್ಮುವಂತಾಗಬೇಕು ಎಂದು ತಮ್ಮಆಶಯವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಮನೊರಂಜನೆಯ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಈ ಸಮಯದಲ್ಲಿ ವೇದಿಕೆಯಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿಯಾಗಿರುವ ಡಾ ಕೆ.ಸಿ. ನಾಯ್ಕ್, ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ  ವೆಂಕಟೇಶ್ ಮೂರ್ತಿ ಹಾಗೂ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ  ಬಬಿತಾ ಸೂರಜ್‍ ಉಪಸ್ಥಿತರಿದ್ದರು. 

ಶಕ್ತಿ ವಸತಿ ಶಾಲೆಯ ಶಿಕ್ಷಕ ಶರಣಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು.