ಮುಂಬಯಿ: ತುಳುನಾಡಿನ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಸಾಹಿತಿಕವಾಗಿ ತುಳುವರನ್ನು ಸಂಘಟಿಸಿದ ಕವಯಿತ್ರಿ ಸಂಘಟಕಿ ಗೀತಾ ಲಕ್ಷ್ಮೀಶ್ ಅವರ ನೇತೃತ್ವದಲ್ಲಿ ಸ್ಥಾಪನೆಗೊಂಡಿರುವ ತುಲುವೆರ ಕಲ ಟ್ರಸ್ಟ್ (ರಿ.) ಎಂಬ ಸಂಸ್ಥೆಯು ಮುಂಬೈಯಲ್ಲಿ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಸಿಗಬೇಕು ಎನ್ನುವ ಸದುದ್ದೇಶದಿಂದ ಮಹತ್ತರವಾದ ಯೋಜನೆಯನ್ನು ರೂಪಿಸಿ ಊರು ಹಾಗೂ ಮುಂಬೈನ ಜಂಟಿ ಆಶ್ರಯದಲ್ಲಿ ತುಲುವೆರೆ ಮಿನದನ ಎಂಬ ತುಳು ಕಾರ್ಯಕ್ರಮವು ಆಗಸ್ಟ್ 23 ಶನಿವಾರದಂದು ಬಂಟರ ಭವನ ಕುರ್ಲಾ ಇದರ ಎನೆಕ್ಸ್ ಹಾಲ್‌ನಲ್ಲಿ ವಿಜೃಂಭಣೆಯಿಂದ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ತುಲುವೆರೆ ಕಲ ಟ್ರಸ್ಟ್‌ನ ಸಂಸ್ಥಾಪಕಿ, ತುಳು ಲಿಪಿ ಶಿಕ್ಷಕಿ ಗೀತಾ ಲಕ್ಷ್ಮೀಶ್ ವಹಿಸಿದ್ದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ಸ್, ನಿರ್ದೇಶಕ ಉದಯ ಸುಂದರ್ ಶೆಟ್ಟಿ ಮಾತನಾಡಿ ಊರಿನವರು ಮತ್ತು ಮುಂಬೈಯವರು ಒಗ್ಗಟ್ಟಾಗಿ ಈ ಕಾರ್ಯಕ್ರಮವನ್ನು ಬಹಳ ಅರ್ಥಪೂರ್ಣವಾಗಿ ನಡೆಸಿದ್ದಾರೆ. ಮುಂಬೈ ನಗರದಲ್ಲಿ ತುಳು ಮಾತನಾಡುವವರು ಕಡಿಮೆಯಾಗುತ್ತಿದ್ದಾರೆ. ನಾವು ಮನೆಯಲ್ಲಿ ತುಳುವಲ್ಲೇ ಮಾತನಾಡುತ್ತೇವೆ, ನಮ್ಮ ಹೊಟೇಲಿನಲ್ಲಿ ಪ್ರಥಮ ಸಂವಹನ ಭಾಷೆಯಾಗಿ ತುಳುವನ್ನೇ ಬಳಸುತ್ತೇವೆ. ಅನ್ಯ ರಾಜ್ಯದಿಂದ ಬಂದ ಕಾರ್ಮಿಕರಿಗೂ ತುಳು ಭಾಷೆಯನ್ನು ಕಲಿಯುವಂತೆ ಪ್ರೇರಣೆ ನೀಡುತ್ತೇವೆ ಅಂದರು. ತುಳುವರೆಂದರೆ ನನಗೆ ಬಹಳ ಅಭಿಮಾನ. ಈ ಅಭಿಮಾನ ಎಲ್ಲರಿಗೂ ಇರಬೇಕು, ಮಕ್ಕಳಲ್ಲಿ ತುಳು ಭಾಷೆಯಲ್ಲೇ ಮಾತನಾಡಿ ಮುಂದೆ ಅವರು ಕೂಡ ತುಳುವಿನಲ್ಲಿ ಮಾತನಾಡುತ್ತಾರೆ, ತುಳುವರು ಯಾವುದೇ ದೇಶದಲ್ಲಿದ್ದರೂ ಕೂಡ ಯಶಸ್ವಿಯಾಗಿ ಬದುಕು ಕಟ್ಟುತ್ತಾರೆ ಅನ್ನುತ್ತಾ ಕಾರ್ಯಕ್ರಮಕ್ಕೆ ಯಶಸ್ಸನ್ನು ಕೋರಿದರು.
ದೇವಾಡಿಗ ವಿಶ್ವ ಮಹಾಮಂಡಲ ಅಧ್ಯಕ್ಷ ಧರ್ಮಪಾಲ ದೇವಾಡಿಗ ಮಾತನಾಡಿ ತುಳುಭಾಷೆ ಆಚಾರ ವಿಚಾರ ಸದೃಡ ಗೊಳಿಸಬೇಕು, ತುಳು ಭಾಷೆಯಲ್ಲಿ ಕಲಿಯಲು ಬೇಕಾದಷ್ಟು ವಿಷಯಗಳಿವೆ. ತುಳುವಿಗಾಗಿ ಹೋರಾಟ ಮಾಡಿದ್ದೇವೆ ಮುಂದೆಯೂ ಮಾಡುತ್ತಿರುತ್ತೇವೆ. ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಗೂ ಅಧಿಕೃತ ಸ್ಥಾನಮಾನ ದೊರೆಯಬೇಕು, ಈ ಹಿಂದೆಯೇ ಹಲವಾರು ನಾಯಕರು ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ ಗೊಳಿಸಲು ಪ್ರಯತ್ನಿಸಿದ್ದಾರೆ. ಈ ನಿಟ್ಟಿನಲ್ಲಿ ಕಠಿಣ ನಿರ್ಧಾರ ಮಾಡಲೇ ಬೇಕು, ಮುಂದೆ ತುಳುನಾಡು ಆಗಲೇಬೇಕು ಎಂಬುವುದು ಹಲವಾರು ವರುಷಗಳಿಂದ ನಮ್ಮೆಲ್ಲರ ಕೂಗಾಗಿದೆ ಎಂದರು.
ಬಂಟರ ಸಂಘ ಮುಂಬೈ, ಮಧ್ಯವಲದ ಸಮನ್ವಯಕರು, ವೆಲ್ಕಮ್ ಪ್ಯಾಕೇಜಿಂಗ್ ಅಂಡ್ ಇಂಡಸ್ಟ್ರೀಸ್ ನ ಆಡಳಿತ ನಿರ್ದೇಶಕ ರವೀಂದ್ರನಾಥ ಭಂಡಾರಿಯವರು ಮಾತನಾಡುತ್ತಾ ಪಂಚದ್ರಾವಿಡ ಭಾಷೆಗಳಲ್ಲಿ ತುಳುವಿಗೆ ಸ್ವತಂತ್ರವಾದ ಲಿಪಿ ಇದೆ. ತುಳು ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕು, ಮುಂಬಯಿ ನಗರಿಯಲ್ಲಿ ಎಲ್ಲಾ ಕಾರ್ಯಕ್ರಮಗಳು ತುಳುವಿನಲ್ಲೇ ನಡೆಯುತ್ತಿದೆ. ತುಳುವನ್ನು ಪ್ರೋತ್ಸಾಹಿಸುವ ಕೆಲಸ ಮುಂಬಯಿಯಲ್ಲಿ ನಡೆಯುತ್ತಿದೆ. ಊರಲ್ಲಿ ನೋಡಿದರೆ ಆಟೋ ರಿಕ್ಷಾದವರು ಕೂಡಾ ಕನ್ನಡದಲ್ಲೇ ಮಾತನಾಡುವ ದುರಂತ ಪರಿಸ್ಥಿತಿ ಬಂದಿದೆ. ನಡೆದ ತುಲುವೆರೆ ಕಲ ಟ್ರಸ್ಟ್ (ರಿ.) ತುಲುವೆರೆ ಮಿನದನದಲ್ಲಿ ನಡೆದ ತುಳು ಚಿಟ್ಕಾ - ತಡ್ಕಾ ಹಾಸ್ಯ ಕವಿಕೂಟ ತುಂಬಾ ಚೆನ್ನಾಗಿ ನಡೆಯಿತು. ಇಂತಹ ಕಾರ್ಯಕ್ರಮಗಳು ಸಂಘ ಸಂಸ್ಥೆಯಿಂದ ನಿರಂತರ ನಡೆಯುತ್ತಿರಲಿ ಎಂದರು.
ನಮ್ಮವರ ಸಹಕಾರ ಸಾಮಾಜಿಕ ಸೇವೆ ಮಾಡುವುದಕ್ಕೆ ಸಾಧ್ಯವಾಯಿತು : ಪ್ರಪುಲ್ಲ ಡಿ. ಶೆಟ್ಟಿ ಪಡುಕುಡೂರ್
ಕಲತ ಬೊಲ್ಲಿ ಗೌರವ ಸ್ವೀಕರಿಸಿದ ಪ್ರಫುಲ್ಲ ದಿನೇಶ್ ಶೆಟ್ಟಿ, ಪಡುಕುಡೂರ್, ಡೊಂಬಿವಿಲಿ ಅವರು ಮಾತನಾಡಿ ನಾನು ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯುವುದಕ್ಕೆ ನನ್ನ ಪತಿ ಮಕ್ಕಳು ಕುಟುಂಬದವರ ಕಾರಣ. ಅವರ ಸದಾ ಬೆಂಬಲದಿಂದಾಗಿ ಸಾಮಾಜಿಕ ಸೇವೆ ಮಾಡುವುದಕ್ಕೆ ಸಾಧ್ಯವಾಯಿತು, ತುಲುವೆರೆ ಕಲ ಎಂದರೆ ದೊಡ್ಡ ಸಾಹಿತಿಗಳ ತಂಡ -ಅದರಲ್ಲಿ ನನ್ನಂತಹ ಕಿರಿಯ ಸಾಹಿತಿಯನ್ನು ಗುರುತಿಸಿ ಗೌರವಿಸಿದ್ದಕ್ಕೆ ಕೃತಜ್ಞತೆಗಳು ಎಂದರು.
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಜಿಲ್ಲೆಯಾಗಬೇಕು : ಗೀತಾ ಲಕ್ಷ್ಮೀಶ್
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತುಲುವೆರೆ ಕಲದ ಅಧ್ಯಕ್ಷೆ ಗೀತಾ ಲಕ್ಷ್ಮೀಶ್, ಅವರು ಮಾತನಾಡಿ ಮುಂಬೈ, ಕಾಸರಗೋಡು ಹಾಗೂ ಮಂಗಳೂರಿನ ಹೊರ ಭಾಗದ ಸಾಹಿತಿಗಳು ತುಂಬಾ ಆಸ್ಥೆಯಿಂದ ತುಳು ಭಾಷೆಯಲ್ಲಿ ಸಾಹಿತ್ಯ ರಚನೆಯನ್ನು ಮಾಡುತ್ತಾರೆ. ತುಳುನಾಡಿನ ಎಲ್ಲಾ ಬರಹಗಾರರು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ತುಳು ಭಾಷೆಗೆ ಉನ್ನತ ಸ್ಥಾನಮಾನ ಸಿಗಬೇಕು ಅನ್ನುವ ನಿಟ್ಟಿನಲ್ಲಿ ಸಾಹಿತಿಕವಾಗಿ ತುಳುವರನ್ನು ಒಗ್ಗೂಡಿಸಲು ಹುಟ್ಟಿಕೊಂಡ ಸಂಘಟನೆಯಿದು ಆ ನೆಲೆಯಲ್ಲಿ ಸ್ಪಷ್ಟವಾದ ಹೆಜ್ಜೆಯನ್ನು ಇಡುತ್ತಿದೆ. ರಾಮನಗರ, ಬಾಗೇಪಲ್ಲಿ ಮೊದಲಾದ ಜಿಲ್ಲೆಗಳು ಮರುಣಾಮಕರಣಗೊಂಡ ಹಿನ್ನಲೆಯಲ್ಲಿ 1931 ರಲ್ಲಿ ಎಸ್. ಯು. ಪಣಿಯಾಡಿ ಹಾಗೂ ಅವರ ಸಂಗಡಿಗರು ಹುಟ್ಟು ಹಾಕಿದ ಜಿಲ್ಲೆಯ ಮರುನಾಮಕರಣದ ಬೇಡಿಕೆಯನ್ನು ಮತ್ತೆ ಮುನ್ನೆಲೆಗೆ ತರಲಾಗಿದೆ. ಪುರಾತನ ಐತಿಹ್ಯವಿರುವ ಮಂಗಳೂರು ಹೆಸರು ಈಗಿನ ದಕ್ಷಿಣ ಕನ್ನಡ ಜಿಲ್ಲೆಗೆ ಮರುನಾಮಕರಣವಾಗ ಬೇಕು, ಇದು ನಮ್ಮ ಆಶಯ, ಇದಕ್ಕೆ ಮುಂಬೈ ತುಳುವರು ಸಹಕಾರ ನೀಡಬೇಕು ಬೆಂಬಲ ವ್ಯಕ್ತಪಡಿಸಬೇಕು. ಮುಂಬೈ ನಗರದಲ್ಲಿ ಈ ಒಂದು ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯುವಲ್ಲಿ ಇಲ್ಲಿಯ ಎಲ್ಲ ಜನರ ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ನುಡಿದರು.
ತುಲುವೆರೆ ಕಲದ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಸಂಗ್ರಹಿಸಿದ ಕಲದ ಸುಮಾರು ಐವತ್ತು ಸಾಹಿತಿಗಳು ತುಳುವಿನಲ್ಲಿ ರಚಿಸಿದ ಹಾಯ್ಕು, ಟಂಕಾ ಚುಂಗುಡಿ ಬರಹದ ಸಂಕಲನ ಸಿರಿ ಕುರಲ್ ಪುಸ್ತಕವನ್ನು ಹಿರಿಯರಾದ ಡಿ. ಕೆ. ಶೆಟ್ಟಿ ಯವರು ಬಿಡುಗಡೆಗೊಳಿಸಿ ಮಾತನಾಡುತ್ತಾ ತುಳು ಲಿಪಿಯಲ್ಲೂ ಮುದ್ರಿತವಾದ ಈ ಪುಸ್ತಕದ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು. ಭಾಷೆಯ ಕಲಿಕೆಯಲ್ಲಿ ಲಿಪಿಯನ್ನು ಕಲಿಯುವುದು ಕೂಡ ಪ್ರಮುಖವಾಗಿದೆ. ಆಸಕ್ತರಿಗೆ ಉಚಿತವಾಗಿ ತುಳು ಲಿಪಿ ಶಿಕ್ಷಣ ನೀಡುತ್ತೇನೆ ಹಾಗೆ ಮುಂಬೈನಲ್ಲಿ ವಾಸಿಸುವವರು ಆಮಂತ್ರಣಗಳಲ್ಲಿ ಕೇವಲ ಕನ್ನಡಿಗರು ಅಂತ ಮಾತ್ರ ಸೇರಿಸುವುದಲ್ಲ ತುಳು ಕನ್ನಡಿಗರು ಎಂಬುದಾಗಿ ಬರೆಯಬೇಕು. ನಮಗೆ ನಮ್ಮ ಭಾಷೆಯ ಬಗ್ಗೆ ಅಭಿಮಾನ ಇರಬೇಕು ಅಂದರು.
ಹಿರಿಯ ಸಾಹಿತಿ ಡಾ. ಸುನೀತಾ ಎಮ್ ಶೆಟ್ಟಿ ಅವರು ಹರಿಣಿ ಎಂ. ಶೆಟ್ಟಿಯವರ ಮುತ್ತುದಾ ಪನಿ ಪುಸ್ತಕ ಬಿಡುಗಡೆಗೊಳಿಸಿ ಸಾಹಿತಿಯಾಗಬೇಕಾದರೆ ಅವರ ಪುಸ್ತಕ ಬಿಡುಗಡೆಯಾಗಬೇಕು. ಅದರಿಂದ ಅವರು ಸಾಹಿತಿಗಳೆಂದು ಲೆಕ್ಕಕ್ಕೆ ಸಿಗುತ್ತಾರೆ. ಬಹಳ ಅರ್ಥಪೂರ್ಣವಾದ ಕವಿಗೋಷ್ಠಿಯನ್ನು ಆಯೋಜಿಸಿಕೊಂಡಿದ್ದಾರೆ, ತುಳು ಸಾಹಿತ್ಯದಲ್ಲಿ ನಾಲ್ಕು ಶಬ್ದಗಳಲ್ಲಿ ಕಥೆಯಿರುತ್ತದೆ. ಇಂಥ ಅರ್ಥಪೂರ್ಣ ಕಾರ್ಯಕ್ರಮ ಮುಂಬೈ ನಗರದ ವಿವಿಧ ಉಪನಗರಗಳಲ್ಲಿ ನಡೆಯಬೇಕು, ಸಮಾಜದಲ್ಲಿ ಉಳಿಯುವಂತ ಒಳ್ಳೆಯ ಮಾತುಗಳು ನಮ್ಮದಾಗಬೇಕು ಎಂದರು. ಚಿತ್ರಾ ಆರ್. ಶೆಟ್ಟಿಯವರು ಮಾತನಾಡುತ್ತಾ ತುಲುವೆರೆ ಕಲ ಇಂತಹ ಕಾರ್ಯಕ್ರಮದ ಆಯೋಜನೆ ಮಾಡಿರುವುದು ಅಭಿನಂದನಾರ್ಹ. ಇನ್ನು ಮುಂದೆಯೂ ನಾವು ಪ್ರೋತ್ಸಾಹ ನೀಡುವ ಎಂದು ಭರವಸೆ ನೀಡಿದರು.
ತುಲುವೆರ ಕಲದ ಮಹಾರಾಷ್ಟ್ರದ ಸಂಚಾಲಕಿಯಾಗಿ ಹರಿಣಿ ಎಂ.ಶೆಟ್ಟಿ ಕಾಪು ಇವರು ವೇದಿಕೆಯಲ್ಲಿದ್ದ ಗಣ್ಯರನ್ನು ಹಾಗೂ ತುಳುನಾಡಿನ ಸಮಸ್ತ ತುಳುವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ನಮ್ಮ ಮನೆಯವರು ನೀಡಿದ ಪ್ರೋತ್ಸಾಹವೇ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸುವಂತಾಯ್ತು : ಹರಿಣಿ ಎಮ್ ಶೆಟ್ಟಿ
ಮಹಾರಾಷ್ಟ್ರದ ಸಂಚಾಲಕಿ ಹರಿಣಿ ಶೆಟ್ಟಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ ಮಹಾರಾಷ್ಟ್ರ ಮತ್ತು ನಮ್ಮ ಊರನ್ನು ಸಮಾನ ರೀತಿಯಲ್ಲಿ ನಾವು ನೋಡುತ್ತಾ ಬಂದಿದ್ದೇವೆ, ತುಲುವೆರ ಕಲ ಎಂದರೆ ಅದರಲ್ಲಿ ಆಕರ್ಷಣೆ ಇದೆ, ಈ ಸಂಸ್ಥೆಯ ಪ್ರಾರಂಭ ದಿನಗಳಿಂದಲೇ ನನ್ನನ್ನು ತೊಡಗಿಸಿಕೊಂಡಿದ್ದೇನೆ. ನನಗೆ ನೀಡಿದ ಸನ್ಮಾನ ತುಳುನಾಡಿನ ಭೂಮಿಗೆ ಸಮರ್ಪಿಸುತ್ತೇನೆ, ಇಲ್ಲಿ ಬೆಳೆಯಲು ನನಗೆ ನಮ್ಮ ಮನೆಯವರೇ ಪ್ರೋತ್ಸಾಹ ಎಂದು ನುಡಿದರು.
ವೇದಿಕೆಯಲ್ಲಿ ಹಿರಿಯ ಸಾಹಿತಿ ಡಾ. ಸುನೀತ ಎಂ ಶೆಟ್ಟಿ, ಬಂಟರ ಸಂಘ ಮುಂಬೈ, ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್,ಬಂಟರ ಸಂಘ ಮುಂಬೈ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರ ರವಿರಾಜ್ ಶೆಟ್ಟಿ, ಆನಂದ್ ಡಿ.ಶೆಟ್ಟಿ ಎಕ್ಕಾರು, ಕಾರ್ಯಾಧ್ಯಕ್ಷರು, ಬಂಟರ ಸಂಘ ಮುಂಬೈ ಡೊಂಬಿವಿಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಆನಂದ್ ಡಿ.ಶೆಟ್ಟಿ ಎಕ್ಕಾರು, ಉದ್ಯಮಿ ಡಿ.ಕೆ ಶೆಟ್ಟಿ ಪೂವಾಯಿ, ಹೋಟೆಲ್ ಉದ್ಯಮಿ ಹರೀಶ್ ಎಸ್.ಶೆಟ್ಟಿ ಪಡುಕುಡೂರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಲತ ಬೊಲ್ಲಿ ಪ್ರಶಸ್ತಿಯನ್ನು ಪ್ರಪುಲ್ಲ ದಿನೇಶ್ ಶೆಟ್ಟಿ ಪಡುಕುಡೂರ್, ಡೊಂಬಿವಿಲಿ ಇವರಿಗೆ ಹಾಗೂ ತನ್ನ ಇಳಿ ವಯಸ್ಸಿನಲ್ಲಿ ವಿಶೇಷ ಅಭಿಮಾನದಿಂದ ತುಳು ಲಿಪಿಯನ್ನು ಕಲಿತು ಇತರರಿಗೆ ಕಲಿಸುತ್ತಾ ಸಮಾಜಕ್ಕೆ ಮಾದರಿಯಾದ 75ರ ಅರೆಯದ ಡಿ. ಕೆ. ಶೆಟ್ಟಿ ಇವರಿಗೆ ತುಲುವೆರೆ ಕಲದ ವತಿಯಿಂದ ವಿಶೇಷವಾಗಿ ಸನ್ಮಾನಿಲಾಯಿತು. ಕಾರ್ಯಕ್ರಮದಲ್ಲಿ ತುಲುವೆರೆ ಕಲ ಟ್ರಸ್ಟ್‌ನ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಅವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಪ್ರಾರಂಭದಲ್ಲಿ ತುಳು ಕವನಗಳಿಗೆ ಆದ್ಯತೆ ನೀಡುವ ಸಲುವಾಗಿ ತುಳು ಹಾಸ್ಯ ಚುಟುಕು ಕವಿಗೋಷ್ಠಿಯು ಸಾಹಿತಿ, ನಿರೂಪಕರಾದ ಅಶೋಕ್ ಪಕ್ಕಳ ಅಧ್ಯಕ್ಷತೆಯಲ್ಲಿ ನಡೆಯಿತು. ಊರು ಮತ್ತು ಮಹಾರಾಷ್ಟ್ರದ ಕವಿಗಳಾದ ನಂದಳಿಕೆ ನಾರಾಯಣ ಶೆಟ್ಟಿ, ಲಕ್ಷ್ಮೀನಾರಾಯಣ ರೈ ಹರೇಕಳ, ಸೋಮನಾಥ ಕರ್ಕೇರ, ಪ್ರಪುಲ್ಲ ದಿನೇಶ್ ಶೆಟ್ಟಿ, , ಕುಮುದ ಡಿ. ಶೆಟ್ಟಿ, ಶೋಭಾ ಎಸ್.ಶೆಟ್ಟಿ ನೆಲ್ಲಿ ದಡಿ ಗುತ್ತು, ಮೈನಾ ಪಿ.ಶೆಟ್ಟಿ,, ಲತಾ ಎಸ್.ಶೆಟ್ಟಿ ಮುದ್ದು ಮನೆ, ಸರ್ವಮಂಗಳ ಶೆಟ್ಟಿ, ಭೂಮಿಕಾ ಎಂ ಶೆಟ್ಟಿ, ದೀಪಾ ಎಚ್. ಶೆಟ್ಟಿ, ಉಷಾ ಶೆಟ್ಟಿ, ಸೂರಿ ಮಾರ್ನಾಡ್, ಪ್ರಮೋದಾ ಮಾಡಾ, ಸವಿತಾ ಸಾಲ್ಯಾನ್, ರೇಮಂಡ್ ಡಿಕೋನಾ ತಾಕೊಡೆ, ಶ್ಯಾಮ್ ಪ್ರಸಾದ್ ಭಟ್, ಅನುರಾಧ ರಾಜೀವ್ ಸುರತ್ಕಲ್, ನಳಿನಿ ಭಾಸ್ಕರ್ ಶೆಟ್ಟಿ, ಚಂದ್ರಹಾಸ ಕುಂಬಾರ ಬಂದಾರು, ಮುರಳೀಧರ ಆಚಾರ್ಯ, ಪದ್ಮನಾಭ ಪೂಜಾರಿ ಬಂಟ್ವಾಳ, ಸೌಮ್ಮ ಆರ್.ಶೆಟ್ಟಿ, ಸವಿತಾ ಕರ್ಕೇರ ಕಾವೂರು, ಪ್ರಶಾಂತ್ ಎನ್.ಆಚಾರ್ಯ, ಪದ್ಮನಾಭಮಿಜಾರ್, ಜಯರಾಮ ಪಡ್ರೆ, ಅಶ್ವಿನಿ ತೆಕ್ಕುಂಜ ಕುರ್ನಾಡ್, ಇವರೆಲ್ಲರೂ ಪಾಲ್ಗೊಂಡಿದ್ದರು. ತುಳುನಾಡಿನ ಶಾಲು, ಸ್ಮರಣಿಕೆ ನೀಡಿ ಸಾಹಿತಿಗಳನ್ನು ಗೌರವಿಸಲಾಯಿತು.
ಇಡೀ ಕಾರ್ಯಕ್ರಮದ ನಿರೂಪಣೆಯನ್ನು ರೇಣುಕಾ ಕಣಿಯೂರು ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪೊಲ್ಲಕ್ಕೆ ದುಬೈಡ್' ಎಂಬ ತುಳು ಹಾಸ್ಯ ಕಿರು ಪ್ರಹಸನ ಮತ್ತು ನೃತ್ಯ ಕಾರ್ಯಕ್ರಮಗಳು ನಡೆಯಿತು.. ತುಳು ಭಾಷೆಯ ಹಿರಿಮೆಯನ್ನು ಸಾರುವುದಕ್ಕಾಗಿ ಆಯೋಜನೆಗೊಂಡ ಈ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ತುಳು- ಕನ್ನಡಿಗರು ಪಾಲ್ಗೊಂಡಿದ್ದರು. ಪ್ರಫುಲ್ಲ ದಿನೇಶ್ ಶೆಟ್ಟಿ, ಮೈನಾ ಶೆಟ್ಟಿ, ಕುಮುದಾ ಡಿ. ಶೆಟ್ಟಿ, ಶೋಭಾ ಶೆಟ್ಟಿ ಮತ್ತು ಅನಿತಾ ಕಾರ್ಯಕ್ರಮದ ಸಂಯೋಜನೆಯಲ್ಲಿ ವಿಶೇಷ ಪಾತ್ರವನ್ನು ವಹಿಸಿದ್ದರು.