ಮೂಡುಬಿದಿರೆ: ಕೇರಳದವರು ತಾವೂ ಎಲ್ಲೇ ನೆಲೆಸಿದ್ದರೂ ತಮ್ಮ ಆಚರಣೆ, ಸಂಸ್ಕೃತಿಯನ್ನು ಸದಾ ಪೋಷಿಸುತ್ತಾ ಸಾಗುತ್ತಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ನುಡಿದರು.

ಆಳ್ವಾಸ್ ಕಾಲೇಜಿನ ಕುವೆಂಪು  ಸಭಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೇರಳ ಸಮಾಜಂ ಸಂಘದ ವತಿಯಿಂದ  ನಡೆದ  "ಕಲೋತ್ಸವಂ- 2024"ನ್ನು ಉದ್ಘಾಟಿಸಿ  ಮಾತನಾಡಿದರು.

ಕರಾವಳಿ ಹಾಗೂ ಕೇರಳದ ಆಚರಣೆಗಳಲ್ಲಿ,  ಜನರ  ನಡವಳಿಕೆಯಲ್ಲಿ ಅನೇಕ  ಹೋಲಿಕೆಗಳು ಕಂಡು  ಬರುತ್ತವೆ. ಆಳ್ವಾಸ್  ಶಿಕ್ಷಣ  ಸಂಸ್ಥೆಯ ವಿವಿಧ ಕಾಲೇಜುಗಳಲ್ಲಿ  ಹೆಚ್ಚಿನ ಸಂಖ್ಯೆಯ ಮಲಯಾಳಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇಲ್ಲಿನ ವಿದ್ಯಾರ್ಥಿಗಳೊಂದಿಗೆ ಅನ್ಯೋನ್ಯತೆಯಿಂದ ಸಹಜೀವನ ನಡೆಸುತ್ತಿದ್ದಾರೆ. ನಮ್ಮ ಪ್ರತಿಷ್ಠಾನವು ಕೇರಳದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಲ್ಲಿ ಪರಿಚಯಿಸಿ ಪ್ರಚುರ ಪಡಿಸಿದೆ.  ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು. ದೇವರ ಸ್ವಂತ ನಾಡು ಎಂದೆ ಕರೆಸಿಕೊಳ್ಳುವ ಕೇರಳ, ಎಲ್ಲಾ ಸಾಂಸ್ಕೃತಿಕ ಆಚರಣೆಗಳಿಗೆ ಸರಿಯಾದ ಅವಕಾಶವನ್ನು ಕಲ್ಪಿಸಿದೆ. ನಮ್ಮ ದೇಶದ ಸಂವಿಧಾನ ಎಲ್ಲಾ ಧರ್ಮದ ಜನರ ಆಚರಣೆಗಳಿಗೆ ಸಮಾನ ವೇದಿಕೆ ನೀಡಿದೆ. ದ್ವೇಷದಿಂದ ಪ್ರೀತಿ ಸಾಧ್ಯವಿಲ್ಲ, ಆದರೆ ಸಾಮರಸ್ಯದಿಂದ ಶಾಂತಿ ನೆಮ್ಮದಿ ಸಾಧ್ಯ ಎಂದರು.  

ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 600 ಕ್ಕೂ ಅಧಿಕ ಮಲಯಾಳಿ ವಿದ್ಯಾರ್ಥಿಗಳು ಪಾಲ್ಗೊಂಡರು.  ಕಲೋತ್ಸವಮ್ 2024ರ ಅಂಗವಾಗಿ  ತಿರುವತ್ತಿರಾ, ಮಾಗರ್ಂಕಲಿ,  ನಾಡನ್‍ಪಟ್ಟ, ಮೈಮ್ , ಲೈಟ್ ಮ್ಯೂಸಿಕ್, ಮೋಹಿನಿ ಅಟ್ಟಂ,  ಹಾಗೂ ಜಾನಪದ ನೃತ್ಯಗಳ ಸ್ಪರ್ಧೆ ನಡೆಯಿತು. ಆಳ್ವಾಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ತಂಡ ಪ್ರಶಸ್ತಿ ಪಡೆದರೆ, ಆಳ್ವಾಸ್ ನ್ಯಾಚುರೋಪತಿ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದರು.

ಗ್ಲೋಬಲ್ ಟಿವಿಯ ಸಂಸ್ಥಾಪಕ ಎನ್‍ವಿ ಪೌಲೋಸ್ ಮುಖ್ಯ ಅತಿಥಿಯ ನೆಲೆಯಲ್ಲಿ ಮಾತನಾಡಿದರು.  ವಿವಿಧ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.  ವಸುಂಧರಾ ಕಾರ್ಯಕ್ರಮ ನಿರೂಪಿಸಿ, ಕೇರಳ ಸಮಾಜಂನ ವಿದ್ಯಾರ್ಥಿ  ನಾಯಕ ಪ್ರಕಾಶ ವಂದಿಸಿದರು.  

ಆಳ್ವಾಸ್ ನ್ಯಾಚುರೋಪತಿ ಕಾಲೇಜಿನ ಸಹಾಯಕ ಪ್ರಾಧ್ಯಪಕ ಡಾ ಡಾರ್ವಿನ್, ಆಳ್ವಾಸ್ ಪದವಿ ಕಾಲೇಜಿನ ಮಲಯಾಳಿ ವಿಭಾಗದ ಮುಖ್ಯಸ್ಥ ಶ್ರೀನಾರಯಣ ಇದ್ದರು.