ಮೂಡುಬಿದಿರೆ: ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ (ಪದವಿಪೂರ್ವ) ಸಹಯೋಗದಲ್ಲಿ  ಎನ್‍ಎಸ್‍ಎಸ್ ಸ್ವಯಂಸೇವಕರಿಗೆ ವಿಶೇಷ  ಉಪನ್ಯಾಸ ಕಾರ್ಯಕ್ರಮವನ್ನು ಡಾ. ಶಿವರಾಮ ಕಾರಂತ ವೇದಿಕೆಯಲ್ಲಿ  ಹಮ್ಮಿಕೊಳ್ಳಲಾಗಿತ್ತು. 

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದ ಡಾ. ಶಿವರಾಮ ಕಾರಂತ ಟ್ರಸ್ಟ್ ನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು, 1969 ರ ಸೆಪ್ಟೆಂಬರ್ 24 ರಂದು ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಸೇವಾ ಯೋಜನೆ ಘೋಷಿತವಾಗಿ, ಅಕ್ಟೋಬರ್ 2ರಂದು ಮಹಾತ್ಮ ಗಾಂಧೀಜಿ ಜಯಂತಿಯಂದು ಅಧಿಕೃತವಾಗಿ ಅನುಷ್ಠಾನಗೊಂಡಿತು. ಇಂದು ಈ ಯೋಜನೆ ಐವತ್ತು ವರ್ಷಗಳ ಸಮೃದ್ಧ ಇತಿಹಾಸದ ಮೂಲಕ, ಲಕ್ಷಾಂತರ ಯುವಕರಲ್ಲಿ ಸೇವಾ ಮನೋಭಾವವನ್ನು ಬೆಳೆಸಿದ ಮಹತ್ವದ ಚಳವಳಿಯಾಗಿದೆ ಎಂದರು. 

ಶಿಕ್ಷಣ ಎಂದರೆ ಕೇವಲ ಪಠ್ಯಪುಸ್ತಕದ ಜ್ಞಾನವಲ್ಲ. ಶಕ್ತಿಯ ಅರಿವನ್ನು ಮಾಡಿಸುವುದೇ ಶಿಕ್ಷಣದ ನಿಜವಾದ ಉದ್ದೇಶ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಭಿನ್ನ ಸಾಮಥ್ರ್ಯ ಅಡಗಿದೆ. ಅದನ್ನು ಬೆಳಸಿಕೊಳ್ಳುವುದೇ ನಿಜವಾದ ಸಾಧನೆ. ಕೌಶಲ್ಯ ಎಂದರೆ ಕೆಲಸವನ್ನು ಪರಿಣಿತವಾಗಿ ಮಾಡುವ ಸಾಮಥ್ರ್ಯ. ಈ ಕೌಶಲ್ಯವನ್ನು ರೂಡಿಸಿಕೊಂಡರೆ ಮಾತ್ರ ವಿದ್ಯಾರ್ಥಿಗಳು ಯಶಸ್ವಿ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.

ಎನ್‍ಎಸ್‍ಎಸ್ ಶಿಬಿರಗಳು ಶ್ರಮದಾನಕ್ಕೆ ಮಾತ್ರ ಸೀಮಿತವಲ್ಲ, ಶಿಸ್ತು, ಒಗ್ಗಟ್ಟು ಹಾಗೂ  ಮಾನವೀಯತೆಯ ಪಾಠವನ್ನು ಕಲಿಸುತ್ತವೆ. ಶಿಬಿರಗಳಲ್ಲಿ ಸ್ತ್ರೀ–ಪುರುಷ,  ಜಾತಿ-ಧರ್ಮ ಭೇದವಿಲ್ಲದೆ ಎಲ್ಲರೂ ಸಮಾನತೆಯ ಮನೋಭಾವದಿಂದ ಸೇವೆಯಲ್ಲಿ ತೊಡಗುವುದು, ಸಂವಿಧಾನದ ಸಮಾನತೆ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ಅಳವಡಿಸಿಕೊಂಡಂತೆ ಎಂದರು.  

ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಕನ್ನಡ ಉಪನ್ಯಾಸಕರಾದ ಧರ್ಮೇಂದ್ರ ಕುದ್ರೊಳಿ, ಅವಕಾಶಗಳು ಬಂದಾಗ ಸದ್ಬಳಕೆ ಮಾಡಿಕೊಳ್ಳಬೇಕು. ಸೇವೆ ಮಾಡುವವರು ದೇವರ ಸಮಾನರು. ಎನ್‍ಎಸ್‍ಎಸ್ ಕೆಲಸ ದೇವರ ಕೆಲಸ. ವಿದ್ಯಾರ್ಥಿಗಳು ಸ್ವಾರ್ಥವನ್ನು ಬಿಟ್ಟು ಸಮಾಜ ಸೇವೆಗೆ ತೊಡಗಿಕೊಳ್ಳಲು ಎನ್‍ಎಸ್‍ಎಸ್ ಪ್ರೇರೇಪಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎನ್‍ಎಸ್‍ಎಸ್ ಸಂಯೋಜನಾಧಿಕಾರಿ ಮೇಘನಾ ಇದ್ದರು.  ವಿದ್ಯಾರ್ಥಿ ವಿಕಾಸ್ ಶೆಟ್ಟಿ ಸ್ವಾಗತಿಸಿ, ಶಟಸ್ಥಳ ವಂದಿಸಿದರು. ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಭಾತ್ ಕಾರ್ಯಕ್ರಮ ನಿರೂಪಿಸಿದರು.