ವರದಿ ರಾಯಿ ರಾಜಕುಮಾರ
ಬನ್ನಡ್ಕ, ಮೂಡುಬಿದಿರೆ: ಶ್ರೀ ಕ್ಷೇತ್ರ ಬನ್ನಡ್ಕ ಸಾರ್ವಜನಿಕ ಶರದೋತ್ಸವವು ಅಕ್ಟೋಬರ್ 1 ಮತ್ತು 2 ರಂದು ಕಲಾಮಂದಿರದಲ್ಲಿ ನಡೆಯಲಿದೆ. ಅಕ್ಟೋಬರ್ ಒಂದರಂದು ವೇದಮೂರ್ತಿ ಎಂ ಆರ್ ಅನಂತ ಪದ್ಮನಾಭ ಅಸ್ರಣ್ಣರ ಪೌರೋಹಿತ್ಯದಲ್ಲಿ ಪ್ರತಿಷ್ಠಾಪನ ಕಾರ್ಯ ನಡೆಯಲಿದೆ. ಸುಮಾರು 3-4,000 ಜನ ಸೇರುವ ಈ ಕಾರ್ಯಕ್ರಮದಲ್ಲಿ ಬೆಳಗ್ಗೆ ಗಣ ಹೋಮ, ಶಾರದಾಂಬೆಯ ಪ್ರತಿಷ್ಠಾಪನೆ, ಧ್ವಜಾರೋಹಣ, ಧಾರ್ಮಿಕ ಸಭೆ, ದುರ್ಗಾ ಹೋಮ ಹಾಗೂ ಮುದ್ದು ಶಾರದೆ ಸ್ಪರ್ಧೆ ಮೂಡುಬಿದಿರೆ ತಾಲೂಕಿನ ಎಲ್ಲಾ ಚಿಕ್ಕ ಮಕ್ಕಳಿಗೆ ನಡೆಯಲಿದೆ. ಸಂಜೆ ಭಜನಾ ಸಂಕೀರ್ತನೆಯ ನಂತರ ಕುಟ್ಯಣ್ಣನ ಕುಟುಂಬ ಎಂಬ ಹಾಸ್ಯಮಯ ನಾಟಕ ಜರುಗುವುದು.
ಅಕ್ಟೋಬರ್ 2 ರಂದು ಬೆಳಗ್ಗೆ ಭಜನಾ ಸಂಕೀರ್ತನೆ, ಧಾರ್ಮಿಕ ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ, ನವಶಕ್ತಿ ವೈಭವ ಭರತನಾಟ್ಯ ಮತ್ತು ಕೂಚುಪುಡಿ ನೃತ್ಯ ನಡೆಯಲಿದೆ. ಸುಮಾರು 6,000ಕ್ಕೂ ಹೆಚ್ಚು ಭಕ್ತಾದಿಗಳು ಸೇರುವ ಸಂಭವವಿದೆ. ಸಂಜೆ ವಿಸರ್ಜನಾ ಪೂಜೆಯ ತರುವಾಯ ವೈಭವದ ಶೋಭಾ ಯಾತ್ರೆಯಲ್ಲಿ ಅಲಂಕಾರ ದೇವರ ಸರೋವರದಲ್ಲಿ ಜಲ ಸ್ತಂಭನ ಕಾರ್ಯಕ್ರಮ ಜರುಗುವುದು.
ಎರಡು ದಿನದ ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರುಗಳು ಭಾಗವಹಿಸಲಿದ್ದು ವಿಶೇಷವಾಗಿ ಈ ವರ್ಷ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾಕ್ಟರ್ ಮೋಹನ್ ಆಳ್ವ ಅವರಿಗೆ ಬನ್ನಡ್ಕ ಶ್ರೀ ಶಾರದ ರತ್ನ ಪ್ರಶಸ್ತಿ 2025ನ್ನು ಪ್ರದಾನಿಸಲಾಗುವುದು ಎಂದು ಪತ್ರಿಕಾ ಗೋಷ್ಠಿಯಲ್ಲಿ ಶಾರದೋತ್ಸವ ಟ್ರಸ್ಟ್ ಅಧ್ಯಕ್ಷ ಎಂ ದಯಾನಂದ ಪೈ, ಪ್ರಧಾನ ಕಾರ್ಯದರ್ಶಿ ಸೂರಜ್ ಜೈನ್ ಮಾರ್ನಾಡು, ಸುಧಾಕರ್ ಆಚಾರ್ಯ, ಅಕ್ಷಯ್ ಕುಮಾರ್ ತಿಳಿಸಿರುತ್ತಾರೆ.