ಮಂಗಳೂರು, ಜನವರಿ 02: ಮಂಗಳವಾರ ಜನವರಿ 6ರಂದು ಬಂಟ್ವಾಳದಲ್ಲಿ ಮೈಸೂರು ವಿಭಾಗೀಯ ಕಾಂಗ್ರೆಸ್ ಪ್ರತಿನಿಧಿಗಳ ಸಭೆಯು ಆಹ್ವಾನಿತರಿಗಾಗಿ ನಡೆಯುವುದಾಗಿ ಮಾಜೀ ಮಂತ್ರಿ ರಮಾನಾಥ ರೈ ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಮೈಸೂರು ವಿಭಾಗದಲ್ಲಿ ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳು ಬರುತ್ತವೆ. ಈ ಬಾರಿ ವಿಶೇಷವಾಗಿ ಶಿವಮೊಗ್ಗ ಜಿಲ್ಲೆಗೂ ಅವಕಾಶ ನೀಡಲಾಗಿದೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ. ಕೆ. ಶಿವಕುಮಾರ್, ಎಸ್. ಆರ್. ಪಾಟೀಲ್, ಸಲೀಂ ಅಹ್ಮದ್, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ ಭಾಗವಹಿಸುವುದಾಗಿ ರೈ ಹೇಳಿದರು. ಇದರಲ್ಲಿ ವಿಭಾಗೀಯ ಮಟ್ಟದ 677 ಪ್ರತಿನಿಧಿಗಳು ಪಾಲ್ಗೊಳ್ಳುವರು.
ದ. ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ ಪತ್ರಿಕಾಗೋಷ್ಠಿ ಮುಂದುವರಿಸಿ ಬಿಜೆಪಿ ಮಂದಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಪಹರಿಸಿ, ಬೆದರಿಸಿ, ನಾಮಪತ್ರ ಹಿಂಪಡೆಯುವಂತೆ ಮಾಡಿ, ಅತಿ ಕೆಟ್ಟ ರೀತಿಯಲ್ಲಿ ಚುನಾವಣೆ ನಡೆಸಿ ಜಿಲ್ಲೆಯಲ್ಲಿ ಹಾರಾಡಿದ್ದಾರೆ. ಕಾಂಗ್ರೆಸ್ ದ. ಕ. ಜಿಲ್ಲೆಯಲ್ಲಿ 1,021 ಸ್ಥಾನಗಳಲ್ಲಿ ಗೆದ್ದು, 49 ಪಂಚಾಯತಿಗಳಲ್ಲಿ ಸ್ಪಷ್ಟ ಬಹುಮತ ಪಡೆದಿದ್ದು, ಇತರ ಕೆಲವೆಡೆ ಸ್ವತಂತ್ರರ ಮೂಲಕ ಅಧಿಕಾರ ಹಿಡಿಯಲಿದೆ ಎಂದರು. ಬಿಜೆಪಿಯದು ಹಣ ಬಲ, ತೋಳ್ಬಲ ಮಾತ್ರವಲ್ಲ ಮನೆ, ರೇಶನ್ ಕಾರ್ಡ್ ತಡೆಯುವ ಬೆದರಿಕೆ ಹಾಕಿಯೂ ಅಡ್ಡದಾರಿಯಲ್ಲಿ ಗೆದ್ದಿದೆ ಎಂದರು.
ಮಾಜೀ ಸಚಿವ ಯು. ಟಿ. ಖಾದರ್ ಮುಂದುವರಿದು ಪತ್ರಿಕಾಗೋಷ್ಠಿ ನಡೆಸಿ ಶಾಲೆ ಕಾಲೇಜುಗಳನ್ನು ಯಾವ ತಯಾರಿಯೂ ಇಲ್ಲದೆ ತೆರೆಯಲಾಗಿದೆ. ತರಗತಿಗಳಿಗೆ ಸಿಲೆಬಸ್ ಕೊಟ್ಟಿಲ್ಲ. ಆನ್‌ಲೈನ್ ಆಫ್ ಲೈನ್ ಗೊಂದಲ ಹಾಗೇ ಬಿಟ್ಟಿದೆ. ಇಂಗ್ಲಿಷ್ ಮಾಧ್ಯಮದವರಿಗೆ ಆನ್ ಲೈನ್ ಆಫ್ ಲೈನ್ ಯಾವುದೂ ಇಲ್ಲ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ ಆಡಬೇಡಿ ಎಂದು ಖಾದರ್ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜೀ ಶಾಸಕಿ ಶಕುಂತಲಾ ಶೆಟ್ಟಿ, ಮಾಜೀ ಮೇಯರ್ ಗಳು ಕವಿತಾ ಸನಿಲ್, ಶಶಿಧರ ಹೆಗ್ಡೆ, ಮಿಥುನ್ ರೈ, ಇಬ್ರಾಹಿಂ ಕೋಡಿಜಾಲ್ ಹಾಜರಿದ್ದರು.