ಮಂಗಳೂರು: ಕಳೆದ 25 ವರ್ಷಗಳಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿಶ್ವನಾಥ ಜೋಗಿ ಅವರು ಸರಕಾರಿ ಸೇವೆಯಿಂದ ಏಪ್ರಿಲ್ 30ರಂದು ಸರಕಾರಿ ಸೇವೆಯಿಂದ ನಿವೃತ್ತರಾಗಲಿದ್ದಾರೆ.
ಇಲಾಖೆಯಲ್ಲಿ ವಾಹನ ಚೊಕ್ಕಟಗಾರರಾಗಿ 1999ರಲ್ಲಿ ನೇಮಕಗೊಂಡ ಅವರು ಕಚೇರಿಯಲ್ಲಿ ಇಂಟರ್‍ನೆಟ್, ವ್ಯವಸ್ಥೆ ಬರುವ ಮೊದಲು ವಾರ್ತಾ ಇಲಾಖೆಯಿಂದ ವಿವಿಧ ಇಲಾಖೆಗಳ ಸುದ್ದಿ, ಸರಕಾರಿ ಸಭೆ ಸಮಾರಂಭಗಳ ಮಾಹಿತಿಗಳನ್ನು, ಸಚಿವರ ಪ್ರವಾಸ ವಿವರಗಳನ್ನು ಒಳಗೊಂಡ ಟಪ್ಪಾಲುಗಳನ್ನು ಮಂಗಳೂರು ನಗರದಲ್ಲಿರುವ ಎಲ್ಲಾ ಪತ್ರಿಕಾ ಕಚೇರಿಗಳಿಗೆ ಪ್ರತೀ ದಿನ ತಲುಪಿಸುವ ಕೆಲಸ ನಿರ್ವಹಿಸುತ್ತಿದ್ದರು. ಇದಕ್ಕಾಗಿ ಅಂದು ಇಲಾಖೆಯಿಂದ ಸೈಕಲನ್ನು ಸಿಬ್ಬಂಧಿಗೆ ನೀಡಲಾಗಿತ್ತು. ಸೈಕಲ್ ಮೂಲಕವೇ ನಗರದಲ್ಲಿ ಸಂಚರಿಸಿ ಸರಕಾರದ ಸುದ್ದಿ, ಮಾಹಿತಿಗಳನ್ನು ಪತ್ರಿಕಾ ಕಚೇರಿಗಳಿಗೆ ಅವರು ತಲುಪಿಸುತ್ತಿದ್ದರು.
ಇಲಾಖೆಯ ಕ್ಷೇತ್ರಪ್ರಚಾರ ವಿಭಾಗದಲ್ಲೂ ಕಾರ್ಯನಿರ್ವಹಿಸಿದ್ದ ವಿಶ್ವನಾಥ ಜೋಗಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸರಕಾರದ ಯೋಜನೆ ಕಾರ್ಯಕ್ರಮಗಳ ಬಗ್ಗೆ ಅರಿವು-ಜಾಗೃತಿ ಮೂಡಿಸುವ ಕ್ಷೇತ್ರಪ್ರಚಾರ ಕಾರ್ಯಕ್ರಮಗಳಲ್ಲಿ ಸೇವೆ ಸಲ್ಲಿಸಿದ್ದರು.
ವಾರ್ತಾ ಇಲಾಖೆಯಲ್ಲಿ ಡಿಜಿಟಲೀಕರಣ ವ್ಯವಸ್ಥೆ ಜಾರಿಗೆ ಬಂದ ಮೇಲೆ ವಿಶ್ವನಾಥ ಜೋಗಿ ಅವರು ಕಚೇರಿಯಲ್ಲಿ ಗ್ರೂಪ್ ಡಿ ಸಿಬ್ಬಂಧಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಬೀಳ್ಕೊಡುಗೆ: ಏ. 30 ರಂದು ಸರಕಾರಿ ರಜಾ ಹಿನ್ನೆಲೆಯಲ್ಲಿ ಮಂಗಳವಾರ ವಾರ್ತಾ ಇಲಾಖೆ ಕಚೇರಿಯಲ್ಲಿ ವಿಶ್ವನಾಥ ಜೋಗಿ ಅವರನ್ನು ಬೀಳ್ಕೊಡಲಾಯಿತು.
ಸಮಾರಂಭದಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಎ. ಖಾದರ್ ಶಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಳೆಪಾಡಿ, ಕಚೇರಿ ಸಿಬ್ಬಂಧಿಗಳು, ಪತ್ರಕರ್ತರು ಉಪಸ್ಥಿತರಿದ್ದರು.