ಮಂಗಳೂರು: ದಸರಾ ಸಂಭ್ರಮಾಚರಣೆಯ ಪ್ರಯುಕ್ತ ಪ್ರಮೋದ್ ಕರ್ಕೇರ ನೇತೃತ್ವದಲ್ಲಿ, ರವಿರಾಜ್ ಚೌಟ ಸಹಭಾಗಿತ್ವದಲ್ಲಿ 4ನೇ ವರ್ಷದ ಪಿಲಿ ಅಜನೆ ಎಂಬ ಕಾರ್ಯಕ್ರಮವು ನಗರದ ಕೋಡಿಯಾಲ್ ಬೈಲ್ ಎಂ ಜಿ ರೋಡ್ ದೀಪಾ ಕಂಫರ್ಟ್ಸ್ ಬಳಿ ಬಹಳ ವಿಜ್ರಂಭಣೆಯಿಂದ ನಡೆಯಿತು.

ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸುವ ಮೂಲಕ ಶಾಮ ರಾವ್ ಫೌಂಡೇಶನ್ ಹಾಗೂ ಶ್ರೀನಿವಾಸ್ ಗ್ರೂಪ್ ಆಫ್ ಕಾಲೇಜ್ ಕಾರ್ಯದರ್ಶಿ ಎ. ಮಿತ್ರ ಎಸ್. ರಾವ್ ನೆರವೇರಿಸಿ ಶುಭಹಾರೈಸಿದರು. ಬಳಿಕ ಇತ್ತೀಚೆಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಲಂಡನ್ ವಿಶ್ವ ದಾಖಲೆ ಮಾಡಿರುವ ರೆಮೊನಾ ಇವೆಟ್ ಪೆರೆರಾ - ಸನ್ಮಾನ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಟೀಮ್ ಪಿಲಿ ಅಜನೆ ಗೌರವಧ್ಯಕ್ಷರಾದ ಕೇಶವ ಬಂಗೇರ, ರಕ್ಷಿತ್ ಶೆಟ್ಟಿ, ಕಿಶೋರ್ ಸಿಂಗ್ , ಮನೋಜ್ ಕುಮಾರ್, ರೂಪಾ ಡಿ. ಬಂಗೇರ , ಶರಣ್ ಶೆಟ್ಟಿ , ಪ್ರೇಮ್ ಸಾಲ್ಯಾನ್ ಬಿಜೈ, ರಕ್ಷಿತ್ ಆರ್ ಪೂಜಾರಿ, ಯಶ್‌ಪಾಲ್ ಸಾಲ್ಯಾನ್,

ಸೇರಿದಂತೆ ಮತ್ತಿತ್ತರ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಸಂಸದರಾದ ಕ್ಯಾ. ಬೃಜೇಶ್ ಚೌಟ ಆಗಮಿಸಿ, ನಾನು ಮೊದಲ ವರ್ಷದಿಂದಲೇ ಪಿಲಿ ಅಜನೆ ಕಾರ್ಯಕ್ರಮಕ್ಕೆ ಓರ್ವ ತುಳುವನಾಗಿ ಆಗಮಿಸುತ್ತಿದ್ದು ಈಗ ಸಂಸದನಾದರೂ ಕೂಡ ಪಿಲಿ ಅಜನೆ ತಂಡದ ಮೇಲಿರುವ ಅಭಿಮಾನದಿಂದ ಆಗಮಿಸಿದ್ದೇನೆ. ಇಂತಹ ಕಾರ್ಯಕ್ರಮ ಆಯೋಜಿಸುವುದರಿಂದ ನಮ್ಮ ನಾಡಿನ ಸಾಂಪ್ರದಾಯಿಕ ಕಲೆಗಳು ಉಳಿಯುತ್ತದೆ. ಈ ನಿಟ್ಟಿನಲ್ಲಿ ಟೀಮ್ ಪಿಲಿ ಅಜನೆ ತುಳು ಸಂಸ್ಕೃತಿಯ ಉಳಿವಿಗೆ ದೊಡ್ಡ ಕೊಡುಗೆಯನ್ನೇ ನೀಡುತ್ತಿದೆ ಎಂದರು. ಕಾರ್ಯಕ್ರಮಕ್ಕೆ ಮಂ. ಉತ್ತರ ಶಾಸಕರಾದ  ಡಾ. ಎಂ ವೈ ಭರತ್ ಶೆಟ್ಟಿ, ಮಂ. ದಕ್ಷಿಣ ಶಾಸಕರಾದ ವೇದವ್ಯಾಸ್ ಕಾಮತ್ ಆಗಮಿಸಿ ಶುಭ ಹಾರೈಸಿದರು.

ಇನ್ನೂ ಪಿಲಿ ಅಜನೆ ಕಾರ್ಯಕ್ರಮದ ಆರಂಭದಲ್ಲಿ ಭಕ್ತಿ-ಭಾವದ ಮಹಾಸಂಗಮವಾಗಿ ಶ್ರೀ ಧರ್ಮಶಾಸ್ತ ಸನ್ನಿಧಿ ಭಜನಾ ತಂಡ ಕುಳೂರು ಇವರಿಂದ ಕುಣಿತ ಭಜನೆ, ಶ್ರೀ ಮೂಕಾಂಬಿಕಾ ಚೆಂಡೆ ಹಾಗೂ ಶ್ರೀಜಿತ್ ಸರಳಾಯ ಮತ್ತು ಶ್ರೇಷ್ಠ ಕದ್ರಿ ಇವರಿಂದ ವಿಭಿನ್ನ ಶೈಲಿಯ ಚೆಂಡೆ-ವಾಯಲಿನ್-ಫ್ಯೂಶನ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಭಾಗದಲ್ಲಿ ನಡೆದ 2023 ರಿಂದ 2025ರವರೆಗಿನ ಹಲವು ಹುಲಿವೇಷ ಸ್ಪರ್ಧಾ ಕೂಟದಲ್ಲಿ ಭಾಗವಹಿಸಿ ಅಗ್ರಮಾನ್ಯ ಪ್ರಶಸ್ತಿ ಪಡೆದ ಜನಮೆಚ್ಚಿದ ತಂಡ ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ (ರಿ.) ಜಗದಂಭ ಹುಲಿ ತಂಡದಿಂದ ಹುಲಿ ಕುಣಿತವು ನೆರೆದಿದ್ದವರ ಮನಸೂರೆಗೊಂಡಿತು. ಹುಲಿ ಕುಣಿತಕ್ಕೂ ಮುನ್ನ ಶೋಭಯಾತ್ರೆಯು ನಡೆಯಿತು. ಕಾರ್ಯಕ್ರಮದುದ್ದಕ್ಕೂ ಸಿಡಿಮದ್ದು ಪ್ರದರ್ಶನ ನಡೆಯಿತು. ಈ ಸಂದರ್ಭ ಟೀಮ್ ಪಿಲಿ ಅಜನೆ ಸದಸ್ಯರು ಸೇರಿದಂತೆ ಸಾವಿರಾರು ಮಂದಿ ಉಪಸ್ಥಿತರಿದ್ದರು..