ಮಂಗಳೂರು, ಮಾ. 28: ಒಂದು ಸೂಕ್ಷ್ಮ ಕೋಶದಿಂದ ಹುಟ್ಟುವ ಮಗುವಿಗೆ ಪ್ರಕೃತಿ ಎಲ್ಲವನ್ನು ನೀಡಿ ದೈಹಿಕ ಹಾಗೂ ಮಾನಸಿಕವಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಕೃತಿಯನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಪ್ರಕೃತಿಯ ಸಂರಕ್ಷಣೆಯಾದರೆ ಮನುಷ್ಯನೂ ರಕ್ಷಣಾತ್ಮಕವಾಗಿ ಇರಲು ಸಾಧ್ಯ ಎಂದು ಯೆನಪೋಯಾ ಫಾರ್ಮಸಿಯ ಆಯುರ್ವೇದ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಕೆ. ಆರ್. ಚಂದ್ರಶೇಖರ್ ಹೇಳಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಸಸ್ಯಶಾಸ್ತ್ರ ವಿಭಾಗ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶದ ವತಿಯಿಂದ ನಡೆದ ಪರಿಸರ್ಗ 2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೈಯಕ್ತಿಕವಾಗಿ ನಮ್ಮಲ್ಲಿ ಭೇದಭಾವಗಳಿವೆ. ಆದರೆ, ಪ್ರಕೃತಿಗೆ ಎಲ್ಲರೂ ಸಮಾನರು. ಪ್ರಕೃತಿಯಲ್ಲಿ ಪ್ರಕೃತಿಗಾಗಿ ಬದುಕಿ ಪ್ರಕೃತಿಗೆ ಕೊಡುಗೆ ನೀಡಬೇಕಿದೆ. ಮುಂದಿನ ಜನಾಂಗಕ್ಕೆ ಪ್ರಕೃತಿ ಎಂಬ ಸ್ವರ್ಗವನ್ನು ಉಳಿಸಿ ಬೆಳೆಸಿ ಎಂದು ಸಲಹೆ ನೀಡಿದರು.

ಪ್ರಾಂಶುಪಾಲೆ ಡಾ. ಅನಸೂಯ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಶೋಭಾ, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಡಾ. ಸಿದ್ಧರಾಜು ಎಂ. ಎನ್., ಉಪನ್ಯಾಸಕಿ ಡಾ. ಕಾರುಣ್ಯ ಶೆಟ್ಟಿ ಉಪಸ್ಥಿತರಿದ್ದರು.