ಮಂಗಳೂರು:  ಈ ಸಾಲಿನ ಕರಾವಳಿ ಉತ್ಸವ ಕಾರ್ಯಕ್ರಮ ಡಿಸೆಂಬರ್ 19 ರಿಂದ ಜನವರಿ 4ರ ವರೆಗೆ  ನಡೆಸಲು ಉದ್ದೇಶಿಸಲಾಗಿದೆ ಎಂದು  ಜಿಲ್ಲಾಧಿಕಾರಿ ದರ್ಶನ್  ಹೆಚ್ ವಿ ಹೇಳಿದ್ದಾರೆ.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ  ಕರಾವಳಿ ಉತ್ಸವ ಕಾರ್ಯಕ್ರಮ ನಡೆಸುವ ಬಗ್ಗೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರಾವಳಿ ಉತ್ಸವದಲ್ಲಿ ಜನಾಕರ್ಷಣೆ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುತ್ತದೆ. ಸಾಂಸ್ಕೃತಿಕ, ಚಿತ್ರಕಲೆ, ಸಾಹಸ ಹಾಗೂ ಪ್ರಾಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ  ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬೀಚ್ ಉತ್ಸವ, ಕಲಾ  ಪರ್ಬ, ಚಿತ್ರಸಂತೆ, ಫಲಪುಷ್ಪ ಪ್ರದರ್ಶನ ಮತ್ತಿತರ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಜಿಲ್ಲೆಯ ಎಲ್ಲಾ ಪ್ರಮುಖ ಬೀಚ್‍ಗಳಲ್ಲಿ ವೈವಿಧ್ಯಮಯ ಪ್ರತ್ಯೇಕ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಚಿಂತಿಸಲಾಗಿದೆ. ಕ್ರೀಡಾ ಕಾರ್ಯಕ್ರಮಗಳಿಗೆ ಕರಾವಳಿ ಉತ್ಸವದಲ್ಲಿ ಪ್ರಾಮುಖ್ಯತೆ ನೀಡಲಾಗಿದೆ. ಪ್ರಮುಖವಾಗಿ ಬೀಚ್ ಫುಟ್‍ಬಾಲ್  ಮತ್ತು ವಾಲಿಬಾಲ್ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

ಲಾಲ್‍ಬಾಗ್ ಕರಾವಳಿ ಉತ್ಸವ ಮೈದಾನ, ಕದ್ರಿ ಉದ್ಯಾನವನ ಹಾಗೂ ಪ್ರಮುಖ ಬೀಚ್‍ಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಬೈಕ್ ಮತ್ತು ಕಾರು ಪ್ರದರ್ಶನ ಹಾಗೂ ಶ್ವಾನ ಪ್ರದರ್ಶನ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಪಿಲಿಕುಳದಲ್ಲಿಯೂ ಕರಾವಳಿ ಉತ್ಸವದ ಕೆಲವು ಕಾರ್ಯಕ್ರಮಗಳನ್ನು ಏರ್ಪಡಿಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದ ರೂಪುರೇಷೆ ಹಾಗೂ ಅಗತ್ಯ ಸಿದ್ಧತೆಗಳನ್ನು ನಡೆಸುವ ಬಗ್ಗೆ ಒಂದು ವಾರದೊಳಗೆ ವರದಿ ನೀಡಬೇಕು ಹಾಗೂ ಟೆಂಡರ್ ಪ್ರಕ್ರಿಯೆಯನ್ನು ಶೀಘ್ರವೇ ಕೈಗೊಳ್ಳುವಂತೆ ಅವರು ತಿಳಿಸಿದರು. 

ಕರಾವಳಿ ಉತ್ಸವದ ಅಂಗವಾಗಿ ಸಾರ್ವಜನಿಕರಿಗೆ ನವ ಮಂಗಳೂರು ಬಂದರಿನಲ್ಲಿ ಹಡಗು ವೀಕ್ಷಣೆ ಹಾಗೂ ಕೋಸ್ಟ್‍ಗಾರ್ಡ್ ನೌಕೆಗಳ ವೀಕ್ಷಣೆಗೆ ಅವಕಾಶ ನೀಡುವ ಕುರಿತು  ಸಂಬಂಧಪಟ್ಟ ಪ್ರಾಧಿಕಾರದೊಂದಿಗೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು. 

ಸಭೆಯಲ್ಲಿ ಉಪ ಪೋಲಿಸ್ ಆಯುಕ್ತ ಮಿಥುನ್ ಹೆಚ್ ಎನ್, ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ,  ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆ ಪ್ರತಿನಿಧಿಗಳು, ವಿವಿಧ ಮುಖಂಡರು ಉಪಸ್ಥಿತರಿದ್ದರು.