ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾಕರ ಸಮಿತಿಯು ಕ್ರೈಸ್ತ ಮಿಶನರಿಗಳ ಎಲ್ಲ ಸಂಸ್ಥೆಗಳಿಗೆ ಭೇಟಿ ನೀಡಿ, ಇಗರ್ಜಿಗಳಿಗೆ ಭೇಟಿ ನೀಡಿ ವರದಿ ನೀಡಬೇಕು ಎಂದು ಸರಕಾರವು ಮಾಡಿರುವ ತೀರ್ಮಾನವು ಅದರ ಕಾರ್ಯವ್ಯಾಪ್ತಿಗೆ ಆಚಿನದಾಗಿದೆ ಎಂದು ಮಾಜೀ ಶಾಸಕ ಜೆ. ಆರ್. ಲೋಬೋ ಅವರು ಮಂಗಳೂರಿನ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.

ಭಾರತದಲ್ಲಿ ಕ್ರಿಶ್ಚಿಯನ್ ಜನಸಂಖ್ಯೆಯು 3.5 ಶೇಕಡಾದಷ್ಟು ಮಾತ್ರ ಇದೆ. ಯೂರೋಪಿನರ ಕಾಲದಲ್ಲಿ ಮತಾಂತರ ನಡೆಸಿದ್ದರೆ 70% ಕ್ರಿಶ್ಚಿಯನರೇ ಇರಬೇಕಾಗಿತ್ತು. ಹೀಗಿರುವಾಗ ಕ್ರಿಶ್ಚಿಯನರ ಮೇಲೆ ಮತಾಂತರ ಎಂಬ ಗೂಬೆ ಕೂರಿಸುವುದು ಸರಿಯಲ್ಲ. ಇದು ಬಿಜೆಪಿಯವರ  ರಾಜಕೀಯ ಕುತಂತ್ರವಾಗಿದೆ. ಅದನ್ನು ಖಂಡಿಸುವುದಾಗಿ ಲೋಬೋ ಹೇಳಿದರು.

ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ ಎಷ್ಟೋ ಧರ್ಮದವರು ಕೆಲಸ ಮಾಡುತ್ತಾರೆ, ಕ್ರಿಶ್ಚಿಯನ್ ಶಾಲೆ ಕಾಲೇಜುಗಳಲ್ಲಿ ಎಲ್ಲ ಧರ್ಮದವರು ಓದುತ್ತಾರೆ. ಅವರೆಲ್ಲ ಮತಾಂತರ ಆಗಿದ್ದಾರೆಯೇ ಎಂದು ಲೋಬೋ ಅವರು ಪ್ರಶ್ನಿಸಿದರು.

ಕ್ರಿಶ್ಚಿಯನ್ ಧರ್ಮ ಕ್ರಿಸ್ತ ಶಕಾರಂಭದಲ್ಲೇ ಭಾರತಕ್ಕೆ ಬಂದಿದೆ‌. ಕನ್ನಡದ ಪತ್ರಿಕೆಯಿಂದ ಹಿಡಿದು ನಾನಾ ಕೊಡುಗೆಗಳು ಕ್ರಿಶ್ಚಿಯನರಿಂದ ಭಾರತೀಯ ಸಮಾಜಕ್ಕೆ ಸಂದಿದೆ. ಕ್ರಿಶ್ಚಿಯನ್ ಸಮಾಜವನ್ನು ಮೃದುವಾಗಿ ಚಿವುಟುವ ಅಗತ್ಯವಿಲ್ಲ. ಈ ತೀರ್ಮಾನ ಖಂಡಿಸಿ ಫಾರೂಕ್ ಅವರು ಸದರಿ ಸಮಿತಿಯಿಂದಲೇ ಹೊರಗೆ ಬಂದಿದ್ದಾರೆ. ರಮೇಶ್ ಅವರ ಟೀಕಿಸಿದ್ದಾರೆ. ಆರೋಗ್ಯವಂತ ಸಮಾಜ ನಿರ್ಮಾಣ ಕ್ರಿಶ್ಚಿಯನರ ಗುರಿ. ಬಿಜೆಪಿಯು ಈ ಸಮಾಜ ಒಡೆಯುವ ಕಾರ್ಯತಂತ್ರ ನಡೆಸುವುದು  ಸರಿಯಲ್ಲ. ಗೂಳಿಹಟ್ಟಿ ಶೇಖರ್ ಅವರನ್ನು ಮುಂದೆ ಬಿಟ್ಟು ಬಿಜೆಪಿಯು ಈ ಹಿಂಬಾಗಿಲ ಕಾರ್ಯ ತಂತ್ರ ರೂಪಿಸಿರುವುದು ಸರಿಯಲ್ಲ. ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಸಮಿತಿಗೆ ನಾನೂ ಹಿಂದೆ ಅಧ್ಯಕ್ಷನಾಗಿದ್ದೆ. ಅದರ ಕೆಲಸವು ಜನಾಂಗೀಯವಾಗಿ ಹಿಂದುಳಿದವರು, ಅಲ್ಪಸಂಖ್ಯಾತರನ್ನು ಮೇಲೆತ್ತುವುದೇ ಹೊರತು ಪೋಲೀಸಿಂಗ್ ಕೆಲಸವಲ್ಲ ಎಂದು ಲೋಬೋ ಹೇಳಿದರು.

ಸದರಿ ಸಮಿತಿಗೆ ಪೋಲೀಸು ಕರ್ತವ್ಯ ಇಲ್ಲ. ಬಿಜೆಪಿಯ ದುರುದ್ದೇಶದಂತೆ ಈ ಸಮಿತಿ ಈಗ ಕ್ರಿಶ್ಚಿಯನರ ವಿರುದ್ಧ ಶೀತಲ ಸಮರಕ್ಕೆ ಕೈ ಹಾಕಿದೆ. ಕ್ರಿಶ್ಚಿಯನರದು ಶಾಂತಿ ಪ್ರಿಯ ಸಮುದಾಯ. ನಂಬಿಕೆ ಇದ್ದರೆ ಯಾರು ಬೇಕಾದರೂ ಚರ್ಚಿಗೆ ಬರಬಹುದು. ಧರ್ಮ ಎಷ್ಟು ಇದ್ದರೂ ದೇವರು ಒಬ್ಬನೇ. ನಾನೂ ಇತರ ಧರ್ಮದವರ ಆಲಯಕ್ಕೆ ಹೋಗಿದ್ದೇನೆ, ನಂಬಿಕೆಯಿಂದ ಹೊರತು ಮತಾಂತರ ಮಾಡಲು ಇಲ್ಲವೇ ಮತಾಂತರ ಆಗಲು ಅಲ್ಲ ಎಂದು ಅವರು ಹೇಳಿದರು.

ದಲಿತರು ಬೌದ್ಧರಾಗುತ್ತಿದ್ದಾರೆ, ಲಿಂಗಾಯತರು ಇದ್ದಾರೆ ಇದೆಲ್ಲ ಮತಾಂತರವೆ? ಭಾನುವಾರ ಚರ್ಚ್‌ಗೆ ಸದರಿ ಸಮಿತಿ ಬಂದರೆ ಅಲ್ಲಿನ ಆರಾಧನೆಯ ಶಿಸ್ತು ಕಂಡುಕೊಂಡು ಇತರೆಡೆ ಅಳವಡಿಸಿಕೊಳ್ಳಲಿ. ನಮ್ಮ ಸಂವಿಧಾನವು ಎಲ್ಲ ಧರ್ಮಗಳನ್ನು ಸಮಾನವಾಗಿ ಕಂಡಿದೆ. ಅದರ ಅರಿವು ಇವರಿಗಿರಲಿ ಎಂದು ಲೋಬೋ ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಚಂದ್ರಕಲಾ, ಶಾಂತಲಾ, ಸುಬೋಧ ಆಳ್ವ, ಸಲೀಂ, ಜೋಕಿಂ,ಟಿ. ಕೆ. ಸುಧೀರ್, ಪ್ರಕಾಶ್ ಸಾಲಿಯಾನ್, ಸಾಹುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು.