ದೀಪೊಲಿ (ದೀಪಾವಳಿ) ಹಬ್ಬದ ಕಾಲದಲ್ಲಿ ದೀಪಗಳ ಶೋಕ ಗೀತೆ, ಆಶಾಜ್ಯೋತಿ, ಭವಿಷ್ಯತ್ ಸೂಚಿ ಎಲ್ಲವೂ ಅದರಲ್ಲಿ ಪ್ರತಿಫಲಿಸುತ್ತದೆ.
ದ್ವೇಷದಿಂದ ದ್ವೇಷ ಹೆಚ್ಚಿಸು ಕಾಲದಲ್ಲೂ ದೀಪದಿಂದ ದೀಪ ಹೊತ್ತಿಸು ಕಾಯಕ ನಿಂತಿಲ್ಲ.
ದೀಪಾವಳಿ ಕಾಲದಲ್ಲಿ ತಪ್ಪದೆ ನಮಗೆಲ್ಲ ನೇತಾಡುವ ದೀಪ ನೋಡಲು ಸಿಗುತ್ತದೆ. ಅದನ್ನು ಗೂಡುದೀಪ ಎನ್ನುತ್ತಾರೆ. ಆದರೆ ಅದು ತಪ್ಪಪ್ಪ, ಅದು ದೀಪದ ಗೂಡು.
ಈ ನೇತಾಡಿಸುವ ದೀಪದ ಮೂಲ ಗೂಡುದೀಪ. ಆದಿ ಮಾನವನಿಗೆ ನೇಸರನ ಬೆಳಕೇ ದೀಪ. ಅದು ಬಿಟ್ಟರೆ ಬೆಳಕು ಪ್ರತಿಫಲಿಸುವ ಚಂದ್ರ.
ಹೀಗಿರುವಾಗ ಬೆಂಕಿ ಪ್ರಕೃತಿಯಲ್ಲಿ ಆಕಸ್ಮಿಕವಾಗಿ ಸಿಕ್ಕಿತು. ಮುಂದೆ ಸಾವಿರಾರು ವರುಷ ಅದನ್ನು ಕಾಯುವ ಕರ್ತವ್ಯ.
ಬೆಂಕಿ ಒಟ್ಟಿ ಅದರ ಸುತ್ತ ರಾತ್ರಿಯ ಮನೋರಂಜನೆ ನಡೆಯತೊಡಗಿತು. ಮುಂದೆ ಮಾನವ ಪ್ರಾಣಿಗಳ ಕೊಬ್ಬಿನಿಂದ ದೀಪ ಹಚ್ಚಿ ಇಡುವುದನ್ನು ಕಲಿತ.
ಅದರಿಂದ ಗುಹೆಯ ಒಳಗೆ ಬೆಳಕು ಮೂಡಿಸುವುದು ಸಾಧ್ಯವಾಯಿತು. ಗಾಳಿ ಕೆಲವೊಮ್ಮೆ ದೀಪವನ್ನು ಆರಿಸಿ ಆತನನ್ನು ಕಂಗಾಲಾಗಿಸುತ್ತಿತ್ತು. ಆಗ ಹುಟ್ಟಿದ್ದು ಗೂಡು ದೀಪ.
ಗೋಡೆಗಳಲ್ಲಿ ಗೂಡುಗಳನ್ನು ರಚಿಸಿ, ಅದರಲ್ಲಿ ದೀಪಗಳನ್ನು ಇಡತೊಡಗಿದರು. ಈ ಗೋಡೆ ಗೂಡು ದೀಪಗಳಿಗೆ ಬಹುತೇಕ ಗಾಳಿಯಿಂದ ರಕ್ಷಣೆ ಒದಗಿಸುತ್ತಿತ್ತು.
ಅನಂತರ ಚೀನೀಯರು ಗೂಡನ್ನೇ ತೂಗು ಹಾಕಿದರೆ ಹೇಗೆ ಎಂದು ಆಲೋಚನೆ ಮಾಡಿದರು. ಆಗ ಹುಟ್ಟಿದ್ದು ದೀಪದ ಗೂಡು, ಉರಿಸಿದ ದೀಪವನ್ನು ಅದರೊಳಗೆ ಇಡತೊಡಗಿದರು.
ಅದು ಮುಂದೆ ಜಗದಗಲ ನಾನಾ ವಿಶೇಷ ದಿನಗಳಲ್ಲಿ ತೂಗಾಡತೊಡಗಿತು. ನಮ್ಮಲ್ಲಿ ದೀಪಾವಳಿ, ಕ್ರಿಸ್ಮಸ್ ಕಾಲದಲ್ಲೆಲ್ಲ ತೂಗಾಡುವುದನ್ನು ಕಾಣುತ್ತೇವೆ. ಅದು ದೀಪದ ಗೂಡು ಮರಿ, ಗೂಡುದೀಪ ಅಲ್ಲ. ಆದರೂ ಪೂರ್ತಿ ತಪ್ಪು ಎಂದೇನೂ ತಿಳಿಯಬೇಕಾಗಿಲ್ಲ. ಭಾಷಾ ಚೋದ್ಯ, ಭಾಷಾ ವಿಶೇಷಗಳೇ ಹಾಗೆ.
-By ಪೇಜಾ