ಬೆಂಗಳೂರು:  ದೇಶದ ಪ್ರತಿಷ್ಠಿತ ಬ್ಯಾಂಕ್‍ಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್ ಜುಲೈ 21 ರಂದು ಬೆಂಗಳೂರಿನ ಬುಲ್‍ಟೆಂಪಲ್ ರೋಡಿನ ಕಛೇರಿಯಲ್ಲಿ ‘ಕೆಬಿಎಲ್-ಫಿನ್‍ಒನ್'-ಫಿನ್‍ಟೆಕ್ ಗ್ರೋತ್ ಕಾರ್ಯಕ್ರಮವನ್ನು ಆಯೋಜಿಸಿತು. ‘ದ ಫಿನ್‍ಟೆಕ್‍ ಮೀಟ್‍ ಅಪ್' ಎನ್ನುವ ಸಂಸ್ಥೆಯ ಸಹಭಾಗಿತ್ವದೊಂದಿಗೆ ನಡೆಸಲಾದ ಈ ಕಾರ್ಯಕ್ರಮದಲ್ಲಿ ಭಾರತದ ಪ್ರಮುಖ ಫಿನ್‍ಟೆಕ್ ಕಂಪೆನಿಗಳು ಭಾಗಿಗಳಾಗಿದ್ದು, ಬ್ಯಾಂಕಿಂಗ್ ರಂಗದಲ್ಲಿ ನವೀನ ಮಾದರಿಯ ತಂತ್ರಾಂಶಗಳನ್ನು ಅಳವಡಿಸಿಕೊಂಡು ಗ್ರಾಹಕ ಸಂತೃಪ್ತಿಯೊಂದಿಗೆ ಬ್ಯಾಂಕಿನ ಅಭಿವೃದ್ಧಿಯ ಕುರಿತಾದ ಸಮಾಲೋಚನೆ ನಡೆಯಿತು.

‘ಕೆಬಿಎಲ್-ಫಿನ್‍ಒನ್'ನ ಯೋಜನೆಯಲ್ಲಿನ ಪ್ರಥಮ ಕಾರ್ಯಕ್ರಮ ಇದಾಗಿದ್ದು 30 ಕ್ಕೂ ಅಧಿಕ ಉದಯೋನ್ಮುಖ ತಂತ್ರಜ್ಞರು ಭಾಗವಹಿಸಿ ನಿಯೋ ಬ್ಯಾಂಕ್, ಹೊಸ ಪಾವತಿ ವ್ಯವಸ್ಥೆ, ವಿವಿಧ ಬ್ಯಾಂಕಿಂಗ್ ಕಾರ್ಡುಗಳ ಮೂಲ ಸೌಕರ್ಯಗಳ ಅಭಿವೃದ್ಧಿ ಮುಂತಾದ ನವೀನ ಬ್ಯಾಂಕಿಂಗ್ ವಿದ್ಯಮಾನಗಳ ಬಗ್ಗೆ ಚರ್ಚಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಟಿಎಮ್‍ಎಫ್‍ನ ಅಭಿಷಾಂತ್ ಪಂತ್ ಈ ಚರ್ಚೆಯ ಮುಂದಾಳತ್ವವನ್ನು ವಹಿಸಿಕೊಂಡು ಕಾರ್ಯಕ್ರಮವನ್ನು ಉತ್ತಮವಾಗಿ ನಿರ್ವಹಿಸಿಕೊಟ್ಟರು. 

ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಓ  ಶ್ರೀಕೃಷ್ಣನ್ ಹೆಚ್ ಅವರು ಮಾತನಾಡಿ "ಕರ್ಣಾಟಕ ಬ್ಯಾಂಕ್ ನವೀನ ಟೆಕ್ನಾಲಜಿ ಮತ್ತು ಡಿಜಿಟಲ್ ಶಕ್ತಿಗಳನ್ನು ಬಳಸಿಕೊಂಡು ಗ್ರಾಹಕರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಬ್ಯಾಂಕನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲಿದೆ. ನೂರು ವರ್ಷಗಳ ಗ್ರಾಹಕರ ವಿಶ್ವಾಸಾರ್ಹತೆ ಮತ್ತು ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಬ್ಯಾಂಕಿಗೆ ಬಲವನ್ನು ತುಂಬಿ, ಕರ್ಣಾಟಕ ಬ್ಯಾಂಕ್ ಇನ್ನಷ್ಟು ಪ್ರಗತಿ ಸಾಧಿಸಲಿದೆ" ಎಂದು ನುಡಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಎಕ್ಸಿಕ್ಯೂಟಿವ್ ಡೈರೆಕ್ಟರ್  ಶೇಖರ್ ರಾವ್ ಅವರು ಮಾತನಾಡಿ "’ಕೆಬಿಎಲ್-ಫಿನ್‍ಒನ್' ಯೋಜನೆಯ ಇಂದಿನ ಈ ಫಿನ್ಟೆಕ್ ಕಾರ್ಯಕ್ರಮದಲ್ಲಿ, ಬ್ಯಾಂಕ್ ಹಲವಾರು ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ನವೀನ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸಲಿದೆ. ಹೊಸ ಡಿಜಿಟಲ್ ಉತ್ಪನ್ನಗಳು ಬ್ಯಾಂಕಿನ ಗ್ರಾಹಕರ ಅಗತ್ಯತೆಗಳನ್ನು ಪೂರೈಸುವುದರೊಂದಿಗೆ ಬ್ಯಾಂಕಿಗೆ ದೃಢವಾದ ಹೆಚ್ಚೆಯನ್ನು ಇಡುವಲ್ಲಿ ಪೂರಕವಾಗಲಿದೆ" ಎಂದು ಪೂರ್ಣ ವಿಶ್ವಾಸದಿಂದ ನುಡಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಡಾ. ಡಿ.ಎಸ್. ರವೀಂದ್ರನ್, ಚೀಫ್ ಆಪರೇಟಿಂಗ್ ಆಫೀಸರ್ ಬಾಲಚಂದ್ರ ವೈ.ವಿ., ಚೀಫ್ ಬಿಸಿನೆಸ್ ಆಫೀಸರ್  ಗೋಕುಲ್ ದಾಸ್ ಪೈ ಹಾಗು ಇತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.