ಕಾರ್ಕಳ, ಮಾ 29:    ಉಸ್ತುವಾರಿ ಸಚಿವನಾಗಿದ್ದ ಸಂದರ್ಭ ಉಡುಪಿಯನ್ನು ಪತ್ಯೇಕ ಜಿಲ್ಲೆಯನ್ನಾಗಿ ಘೋಷಿಸಿ, ಅಭಿವೃದ್ಧಿಗೆ ಪೂರಕವಾಗಿ ತಾಲೂಕುಗಳ ರಚನೆ ಮಾಡಿದ್ದೆ. ಇದರಿಂದಾಗಿ ಜಿಲ್ಲೆಯ ಜನತೆಗೆ ಬಹಳಷ್ಟು ಅನುಕೂಲವಾಯಿತು. ನಾನು ಮಾಡಿರುವ ಕೆಲಸ ಕಾರ್ಯಗಳನ್ನು ಮುಂದಿಟ್ಟು ಈ ಬಾರಿ ಮತಯಾಚಿಸುತ್ತೇನೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಹೇಳಿದರು.

ಅವರು ಮಾ. 29ರಂದು ಪೆರ್ವಾಜೆ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಬಿಜೆಪಿಯವರು ನಾಯಕರ ಹೆಸರಿನಲ್ಲಿ ಮತ ಕೇಳುವವರು. ಆದರೆ ನಾನು, ಮಾಡಿರುವ ಕೆಲಸ ಕಾರ್ಯಗಳ ಮುಂದಿಟ್ಟು ಮತ ಯಾಚಿಸುತ್ತಿದ್ದೇನೆ. ಜನಪ್ರತಿನಿಧಿಯಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಅಂದಿನ ದಿನಗಳಲ್ಲಿ ಕಂಪ್ಯೂಟರ್ ಕೊರತೆಯಿಂದ ರೇಷನ್ ಕಾರ್ಡ್ ಪಡೆಯುವುದು ಕೂಡ ಕಷ್ಟಕರವಾಗಿತ್ತು. ಹಾಗಾಗಿ ಪ್ರತಿ ಪಂಚಾಯತ್‌ಗೆ ಸರಕಾರದಿಂದ ಕಂಪ್ಯೂಟರ್ ಒದಗಿಸಿಕೊಡುವ ಕಾರ್ಯ ಮಾಡಿದ್ದೆ ಎಂದು ಜಯಪ್ರಕಾಶ್‌ ಹೆಗ್ಡೆ ಹೇಳಿದರು.

ನಾರಾಯಣ ಗುರುಗಳ ಸ್ತಬ್ದ ಚಿತ್ರವನ್ನು ಕೇಂದ್ರ ಸರಕಾರ ತಿರುಸ್ಕರಿಸುವಾಗ ಪಠ್ಯಪುಸ್ತಕದಿಂದ ಪಠ್ಯ ತೆಗೆಯುವಾಗ ಜಾತಿ ಪರವಾಗಿ ಮಾತನಾಡಿದವರು ಇಂದು ಚುನಾವಣೆಯ ಸಂದರ್ಭ ಜಾತಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಚುನಾವಣಾ ಸಮಿತಿಯ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಹೇಳಿದರು. 

ಲೋಕಸಭಾ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಉಡುಪಿ ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದು ಕಾಂಗ್ರೆಸ್ ಮುಖಂಡ ಮುನಿಯಾರು ಉದಯಕುಮಾರ್ ಶೆಟ್ಟಿ ಕರೆ ನೀಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕೊಡವೊರು ಸಭೆಯ ಅಧ್ಯಕ್ಷತೆ ವಹಿಸಿದ್ದರು .

ವೇದಿಕೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಡಿ ಆರ್ ರಾಜು ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಕೆಪಿಸಿಸಿ ಪ್ರಧಾನ‌ ಕಾರ್ಯದರ್ಶಿಗಳಾದ ಜಿ.ಎ. ಬಾವ, ಎಂ.ಎ. ಗಫೂರ್, ಜಿಲ್ಲಾ ಯುವ ಕಾಂ‌ಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್‌, ಕೆಪಿಸಿಸಿ ಸದಸ್ಯ ಸುರೇಂದ್ರ ಶೆಟ್ಟಿ, ಕೆಪಿಸಿಸಿ ಕಿಸಾನ್ ಘಟಕದ ಕಾರ್ಯದರ್ಶಿ ಕಿಶನ್ ಶೆಟ್ಟಿ, ಜಿಲ್ಲಾ ಇಂಟಕ್‌ ಅಧ್ಯಕ್ಷ ಕಿರಣ್‌ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಧಾಕರ್, ಬ್ಲಾಕ್‌ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಡಿಸೋಜಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ‌ಅಕ್ರಮ ಸಕ್ರಮ ಸಮಿತಿ ಸದಸ್ಯ ರಮೇಶ್ ಬಜಕಳ ಪ್ರಾರ್ಥಿಸಿದರು.‌ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್‌ಚಂದ್ರ ಪಾಲ್ ಸ್ವಾಗತಿಸಿ, ಬ್ಲಾಕ್‌ ವಕ್ತಾರ ಶುಭದ ರಾವ್‌ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಯುವ ಕಾಂಗ್ರೆಸ್‌ ಅ‍ಧ್ಯಕ್ಷ ಯೋಗೀಶ್‌ ಇನ್ನಾ ವಂದಿಸಿದರು.