ಗೋಕರ್ಣ: ಇಂದಿನ ಸಮಾಜಕ್ಕೆ ಸನಾತನ ಧರ್ಮದ ಬಗ್ಗೆ ಅಭಿರುಚಿ ಇದೆ ಆದರೆ ಅರಿವು ಇಲ್ಲ ಈ ಅರಿವನ್ನು ಮೂಡಿಸುವ ಪ್ರಯತ್ನವನ್ನು 'ಆಯತನ' ಗ್ರಂಥದ ಕನ್ನಡಾನುವಾದ ಗ್ರಂಥ ಮಾಡಿದೆ ಎಂದು ಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀಮಹಾಸ್ವಾಮೀಜಿ ನುಡಿದರು.
ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಶನಿವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಆರ್.ಎಸ್.ಹೆಗಡೆಯವರ ಶತಮಾನಗಳಷ್ಟು ಹಳೆಯ ಆಯತನ ಎಂಬ ಕನ್ನಡಾನುವಾದ ಗ್ರಂಥವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
"ಸನಾತನ ಧರ್ಮದ ಬಗ್ಗೆ ಇಂದಿನ ಸಮಾಜಕ್ಕೆ ಅಭಿರುಚಿ ಇದೆ ಆದರೆ ಅರಿವು ಇಲ್ಲ ಕೋಟ್ಯಂತರ ಮಂದಿ ಸಂಸ್ಕೃತಿ ಪ್ರಿಯರು ಸಮಾಜದಲ್ಲಿ ಇಂದು ಇದ್ದಾರೆ, ಹಿಂದಿನ ತಲೆಮಾರಿಗಿಂತ ಅಧಿಕ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಅರಿವು ನಿಡುವ ಪ್ರಯತ್ನವನ್ನು ಈ ಕೃತಿ ಮಾಡಿದೆ" ಎಂದು ಬಣ್ಣಿಸಿದರು.
ಸಂಸ್ಕಾರಗಳು, ಶೌಚ, ಪೂಜೆ, ಬದುಕಿನ ನಾಲ್ಕು ಅವಸ್ಥೆಗಳು, ವರ್ಣ ವ್ಯವಸ್ಥೆ ಹೀಗೆ ವಿವಿಧ ವಿಷಯಗಳನ್ನು ಒಳಗೊಂಡ ಇಡೀ ಭಾರತೀಯ ಸಂಸ್ಕೃತಿಯ ಬಗೆಗೆ ನೋಟ ನೀಡುವ ಪ್ರಯತ್ನ ಈ ಕೃತಿಯ ಮೂಲಕ ಆಗಿದೆ. ನಮ್ಮ ಸಂಸ್ಕೃತಿ - ಸಂಪ್ರದಾಯಗಳನ್ನು ಮತ್ತೆ ಆಚರಿಸುವ ಆಸೆ ನಮಗಿದ್ದರೂ, ಅದನ್ನು ಆರಂಭಿಸುವುದು ಎಲ್ಲಿ ಎಂಬ ಗೊಂದಲ ಮೂಡುತ್ತದೆ. ಇದಕ್ಕೆ ಕೃತಿ ಉತ್ತರವಾಗಿದೆ ಭಾರತ ಸಂಸ್ಕೃತಿಯ ಸಿಂಧುವನ್ನು ಬಿಂದುವಿನಲ್ಲಿ ನೀಡುವ ಪ್ರಯತ್ನವನ್ನು ಮಾಡಿದ್ದಾರೆ ಎಂದು ಹೇಳಿದರು.
ಅಥರ್ವ ವೇದದ ಮಂಡೂಕೋಪನಿಷತ್‍ನ ಮೊದಲ ಎರಡು ಶ್ಲೋಕಗಳ ವಿವರಣೆಯನ್ನು ಒಳಗೊಂಡ ವೃಕ್ಷ ಮತ್ತು ಪಕ್ಷಿಗಳ ಚಿತ್ರಣ ಮಖಪುಟದಲ್ಲಿ ಮನೋಜ್ಞವಾಗಿ ಮೂಡಿ ಬಂದಿದೆ ಎಂದರು. ಒಂದು ಹಕ್ಕಿ ಹಿಪ್ಪಲಿ ಹಣ್ಣು ತಿನ್ನುತ್ತಿದ್ದು, ಇದನ್ನು ಇನ್ನೊಂದು ಹಕ್ಕಿ ನೋಡುತ್ತಿದೆ. ಜೀವ ಸುಖ- ದುಃಖವನ್ನು ಅನುಭವಿಸುವುದನ್ನು ದೇವ ನೋಡುತ್ತಿರುತ್ತಾನೆ ಎನ್ನುವುದರ ಅಭಿವ್ಯಕ್ತರೂಪ ಇದು. ಎಷ್ಟು ಸರಳವಾಗಿ ಉಪನಿಷತ್‍ಗಳು ಗಹನವಾದ ವಿಚಾರವನ್ನು ತಿಳಿಸುತ್ತವೆ ಎನ್ನುವುದಕ್ಕೆ ಇದು ಸಾಕ್ಷಿ. ನಮ್ಮ ದೇಹವನ್ನು ವೃಕ್ಷಕ್ಕೆ ಹೋಲಿಸಬಹುದು ಜೀವ ಮತ್ತು ದೇವ ಎಂಬ ಎರಡು ಪಕ್ಷಿಗಳಿವೆ ಅವು ಎರಡೂ ಜತೆಗೇ ಇರುತ್ತವೆ. ಯಾವ ಬಗೆಯ ಜನ್ಮ ಪಡೆದರೂ, ಜೀವದ ಜತೆಗೆ ದೇವ ಹಿಂಬಾಲಿಸಿಕೊಂಡು ಬರುತ್ತಾನೆ. ಆದರೆ ಜೀವಕ್ಕೆ ಇದರ ಅರಿವು ಇರುವುದಿಲ್ಲ ಎಂದು ವಿಶ್ಲೇಷಿಸಿದರು.
ದೇವನಿಗೆ ಜೀವನಲ್ಲಿ ಸ್ಪಷ್ಟವಾದ ಪ್ರೀತಿ ಇದೆ; ಆದರೆ ಜೀವನಿಗೂ ದೇವನ ಬಗ್ಗೆ ಅವ್ಯಕ್ತರೂಪದಲ್ಲಿ ಈ ಪ್ರೀತಿ ಇದೆ,ಇದನ್ನು ಕಂಡುಕೊಳ್ಳಬೇಕಾದರೆ ನಿರಂತರ ಅನ್ವೇಷಣೆ ಅಗತ್ಯ ಎಂದು ಹೇಳಿದರು. ಮಗು ತಾಯಿಯನ್ನು ಹುಡುಕುವ ಹಾಗೆ ಜೀವ- ದೇವನನ್ನು ಹುಡುಕುತ್ತಾನೆ. ಪರಮಾತ್ಮ ಪ್ರೀತಿ ವ್ಯಕ್ತವಾದಾಗ ಆತ ಮಹಾತ್ಮನಾಗುತ್ತಾನೆ ಎಂದು ಅಭಿಪ್ರಾಯಪಟ್ಟರು.