ಮಂಗಳೂರು, ನವೆಂಬರ್ 27: ಕೇಂದ್ರ ಸರಕಾರದ ಗೊಂದಲಮಯ ತೀರ್ಮಾನದಿಂದ, ತಪ್ಪು ನೀತಿ ಹಾಗೂ ಬದ್ಶತೆ ಇಲ್ಲದ ಕಾರಣ ಎಂಬಿಬಿಎಸ್ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಒತ್ತಡಕ್ಕೆ ಬಿದ್ದಿದ್ದಾರೆ, ಹೆತ್ತವರು ಖಿನ್ನತೆಗೆ ಒಳಗಾಗಿದ್ದಾರೆ ಎಂದು ಮಾಜೀ ಮಂತ್ರಿ ಯು. ಟಿ. ಖಾದರ್ ಹೇಳಿದರು.

ಕಾಂಗ್ರೆಸ್ ಸರಕಾರವಿದ್ದಾಗ ದೇಶದಲ್ಲೇ ಮೊದಲ ಬಾರಿಗೆ ಎಲ್ಲರ ಮಕ್ಕಳು ಉನ್ನತ ಶಿಕ್ಷಣ ಪಡೆಯಲಿ ಎಂಬುದಕ್ಕಾಗಿ ಸಿಇಟಿ ತಂದಿತು. ರಾಜ್ಯ ಸರಕಾರವು ಕೂಡಲೆ ಕೇಂದ್ರವನ್ನು ಕಾಯದೆ ಇಲ್ಲಿ ಸಿಇಟಿ ಮೂಲಕವೇ ಪ್ರವೇಶ ನೀಡಲಿ. ಅಖಿಲ ಭಾರತಕ್ಕೆ ಬೇಕಾದರೆ ಪ್ರತ್ಯೇಕ ಮೀಸಲು ಇಡಲಿ ಎಂದು ಖಾದರ್ ತಿಳಿಸಿದರು.

ನಮ್ಮ ಬಡ ಹುಡುಗರು ಪಿಯುಸಿಯಲ್ಲಿ 99% ಅಂಕ ಪಡೆದರೂ ಸಿರಿವಂತರು ಕೆಲವು ಕೋಚಿಂಗ್‌ಗಳ ಮೂಲಕ ನೀಟ್ ಎಂದು ಕಡಿಮೆ ಅಂಕ ಪಡೆದಿದ್ದರೂ ವೈದ್ಯಕೀಯ ಸೀಟು ಪಡೆಯುತ್ತಿದ್ದಾರೆ ಎಂದು ಯುಟಿಕೆ ಹೇಳಿದರು.

ಹಿಂದುಳಿದವರು ಮತ್ತು ಸಾಮಾನ್ಯ ವಿಭಾಗ ಎರಡಕ್ಕೂ ಎಂಟು ಲಕ್ಷದ ಆದಾಯದ ಮಿತಿ ಇಟ್ಟಿರುವುದು ಯಾವ ಲೆಕ್ಕ? 15 ಶೇಕಡಾ ದೇಶ ಮಟ್ಟದವರಿಗೆ ಇಟ್ಟು, ಇಲ್ಲಿ ಉಳಿದ 85% ಕೂಡಲೆ ಭರ್ತಿ ಮಾಡಿ. ಕೌನ್ಸಿಲಿಂಗ್ ಮಾಡದೆ ರಾಜ್ಯ ಸರಕಾರವು ಕೇಂದ್ರಕ್ಕೆ ಹೆದರಿ ಕುಳಿತಿರುವುದೇಕೆ ಎಂದು ಖಾದರ್ ಪ್ರಶ್ನಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ಹಿಂದುತ್ವ ಮಂದಿ ಜಿಲ್ಲಾಧಿಕಾರಿಗಳ ಕೊರಳ ಪಟ್ಟಿ ಹಿಡಿಯುತ್ತೇನೆ ಎಂದರೆ ಇಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ? ಮಾತು ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಬೇಡದ್ದನ್ನು ಆಡುವವರು ಮತ್ತು ಬಿಡುವವರು ಕರಾವಳಿಯಲ್ಲಿ ಸಾಮಾಜಿಕ ಅಶಾಂತಿಗೆ ಕಾರಣರಾಗಿದ್ದಾರೆ. ಇದರ ನಡುವೆ ತ್ರಿಶೂಲ ಹಂಚಿಕೆ ಕಾರ್ಯಕ್ರಮ ನಡೆಯುತ್ತದೆ. ಅದರ ದುರುಪಯೋಗ, ಹಲ್ಲೆಗಳು ಆಗುತ್ತಿವೆ. ಆಯುಧ ನೀಡುವುದೆಂದರೆ ಏನು. ಯುವಕರ ಕೈಗೆ ಪೆನ್ನು ಪುಸ್ತಕದ ಬದಲು ಆಯುಧ ಕೊಡುವ ಬಿಜೆಪಿ ಸರಕಾರದ ನೀತಿ ಏನು ಎಂದು ಖಾದರ್ ಪ್ರಶ್ನಿಸಿದರು.

ಸಮಾಜ ಘಾತಕ ಶಕ್ತಿಗಳು ಯಾವ ಧರ್ಮದವರಿದ್ದರೂ ಕ್ರಮ ತೆಗೆದುಕೊಳ್ಳಬೇಕು. ನನ್ನದು ಸದಾ ಸರ್ವ ಧರ್ಮ ಸಮನ್ವಯ ನೀತಿ, ಸೌಹಾರ್ದ ರೀತಿ ಎಂದು ಯುಟಿಕೆ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸದಾಶಿವ ಉಲ್ಲಾಳ್, ನಜೀರ್ ಅವರು ಉಪಸ್ಥಿತರಿದ್ದರು.