ಉಜಿರೆ: ಹಣ ಮತ್ತು ಬಹುಮಾನಕ್ಕಾಗಿ ಸಾಹಿತ್ಯ ರಚನೆ ಸಲ್ಲದು. ಸಮಾಜ ಕಲ್ಯಾಣಕ್ಕಾಗಿ ಪ್ರೀತಿಯಿಂದ ಸಾಹಿತ್ಯ ರಚನೆ ಮಾಡಬೇಕು ಎಂದು ಹಿರಿಯ ಸಾಹಿತಿ ಪ್ರೊ. ಪ್ರೇಮಶೇಖರ ಹೇಳಿದರು.

ಅವರು ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಬುಧವಾರ ಆಯೋಜಿಸಿದ ಸಾಹಿತ್ಯ ಸಮ್ಮೇಳನದ 93 ನೇ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚೆಗೆ ಸಾಹಿತಿಗಳು ಬದುಕಿನ ವಾಸ್ತವದ ಬಗ್ಗೆ ಸಾಹಿತ್ಯಕೃತಿಗಳಲ್ಲಿ ಪ್ರತಿಬಿಂಬಿಸುವುದಿಲ್ಲ. ಏನು ನಡೆಯುತ್ತಿದೆಯೋ ಅದಕ್ಕೆ ವಿರುದ್ಧವಾಗಿ ಬರೆಯುತ್ತಾರೆ. ದೇಶದ ಅಸ್ತ್ವಿತ್ವ. ಭವಿಷ್ಯದ ಬಗ್ಗೆ ಮುಂದಿನ ಸವಾಲುಗಳ ಬಗ್ಗೆ ಸಾಹಿತ್ಯ ಕೃತಿಗಳ ಮೂಲಕ ಸಮಾಜವನ್ನು ಜಾಗೃತಿಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.

ಬಹುಮಾನಕ್ಕಾಗಿ, ಕೀರ್ತಿಗಾಗಿ ಹಾಗೂ ಹಣ ಸಂಪಾದನೆಗಾಗಿ ಬರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿದಿನ ಹೊಸ ವಿಚಾರಗಳು, ಹೊಸ ಪಾತ್ರಗಳು, ಹೊಸ ಸನ್ನಿವೇಶಗಳು ದೊರಕಿದಾಗ ಪರಕಾಯ ಪ್ರವೇಶ ಮಾಡಿ ಸಾಹಿತ್ಯ ಕೃತಿಗಳನ್ನು ಸಮಾಜಕಲ್ಯಾಣಕ್ಕಾಗಿ ಪ್ರೀತಿಯಿಂದ ಬರೆಯಬೇಕು. ಆಗ ಮಾತ್ರ ಮಿದುಳು ಸಕ್ರಿಯವಾಗಿ ಸಾಹಿತಿಗಳು ಮಾನಸಿಕವಾಗಿ ಸದಾ ಚೈತನ್ಯಶೀಲರಾಗುತ್ತಾರೆ.

ಬರೇ ಪ್ರೀತಿ, ಪ್ರೇಮ ಅಲ್ಲದೆ ಬದುಕಿನ ಸೋಲು, ಸವಾಲುಗಳು, ಅವಹೇಳನ, ಆತಂಕಗಳ ಬಗ್ಗೆಯೂ ಸಾಹಿತ್ಯ ರಚನೆ ಮಾಡಬೇಕು.

ಬದುಕು ಹೇಗಿದೆಯೋ ಹಾಗೆ ಚಿತ್ರಿಸುವುದು ನವೋದಯ ಸಾಹಿತ್ಯವಾದರೆ, ಮುಂದೆ ಹೇಗೆ ಬದಲಾಗಬೇಕು ಎಂದು ಬರೆಯುವುದು ಪ್ರಗತಿಪರ ಸಾಹಿತ್ಯ. ವಿದೇಶದಲ್ಲಿ ಉದ್ಯೋಗ ಮಾಡಿ ಅಸ್ತಿತ್ವಕ್ಕಾಗಿ ಸಾಹಿತ್ಯ ಎಚನೆ ಮಾಡುವುದು ನವ್ಯ ಸಾಹಿತ್ಯವಾಗಿದೆ. ಸುಂದರ ಬದುಕಿಗಾಗಿ ಹೋರಾಡಬೇಕು ಎಂದು ಬರೆಯುವುದು ಬಂಡಾಯ ಸಾಹಿತ್ಯವಾಗಿದೆ ಎಂದು ಅವರು ಹೇಳಿದರು.
ಇಂದು ಮುದ್ರಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸುಧಾರಣೆ ಹಾಗೂ ಆಧುನೀಕರಣದಿಂದಾಗಿ ಹೆಚ್ಚು ಕೃತಿಗಳು ಪ್ರಕಟವಾಗುತ್ತಿವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಇಂದು ಕಾದಂಬರಿ ಓದುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ, ಕಥೆ ಬರೆಯುವವರ ಸಂಖ್ಯೆ ಮತ್ತು ಓದುವವರ ಸಂಖ್ಯೆ ಹೆಚ್ಚಾಗಿದೆ. ಕಥಾ ಸಾಹಿತ್ಯ ಅರ್ಥಪೂರ್ಣವಾಗಿ ಬೆಳೆಯುತ್ತಿದೆ. ಹೃದಯದಿಂದ, ಪ್ರೀತಿಯಿಂದ ಬಂದ ಆಲೋಚನೆಗಳನ್ನು ಬಳಸಿ ಉತ್ತಮ ಕಥೆಗಳನ್ನು ಬರೆಯಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡ ಬೆಳೆಸಬೇಕಾದರೆ, ಕನ್ನಡ ಬಳಸಬೇಕು:
ಅಧ್ಯಕ್ಷತೆ ವಹಿಸಿದ “ವಿಶ್ವವಾಣಿ” ಪತ್ರಿಕೆಯ ಮುಖ್ಯ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ಕನ್ನಡ ಬೆಳೆಸಬೇಕಾದರೆ, ಕನ್ನಡ ಬಳಸಬೇಕು ಎಂದು ಹೇಳಿದರು.
ಕನ್ನಡಕ್ಕೆ ಸ್ವಂತ ಲಿಪಿ ಇದ್ದು ಎಲ್ಲಾ ದೃಷ್ಠಿಯಿಂದಲೂ ಕನ್ನಡ ಅತ್ಯಂತ ಪರಿಪೂರ್ಣ, ಸಮೃದ್ಧ ಹಾಗೂ ಸುಂದರ ಭಾಷೆಯಾಗಿದೆ. ಆದರೆ, ಕನ್ನಡಕ್ಕೆ ದೊಡ್ಡ ಸವಾಲು ಭಾಷೆ. ಕನ್ನಡ ಉಳಿಸಬೇಕಾದರೆ ಭಾಷಾ ಶುದ್ಧಿಯೊಂದಿಗೆ ಮನೆಯಲ್ಲಿ ಹಾಗೂ ವ್ಯವಹಾರದಲ್ಲಿ ನಿತ್ಯವೂ ಶುದ್ಧ ಕನ್ನಡ ಬಳಸಬೇಕು. ಭಾಷೆ ಸ್ವಚ್ಛವಾಗಿದ್ದರೆ ಸಾಹಿತ್ಯವೂ ಸ್ವಚ್ಛವಾಗಿರುತ್ತದೆ.
ದಿನನಿತ್ಯವೂ ನಾವು ಬೆಳಿಗ್ಗೆ ಹಲ್ಲು ಮತ್ತು ಮುಖ ಉಜ್ಜುವಂತೆ ನಾಲಗೆಯನ್ನೂ ಉಜ್ಜಬೇಕು. ಆಗ ಸ್ವಚ್ಛ ಕನ್ನಡ ಮಾತನಾಡಲು ಸಾಧ್ಯವಾಗುತ್ತದೆ.
ಸಾಹಿತ್ಯ ಪುಸ್ತಕಕ್ಕೇ ಮಾತ್ರ ಸೀಮಿತವಾಗಬಾರದು. ಸಾಹಿತ್ಯವು ದೈನಂದಿನ ಬದುಕು ಮತ್ತು ಸಮಾಜಕ್ಕೆ ಸಂಬಂಧಪಟ್ಟಿದೆ. ಇಂಗ್ಲಿಷ್ ಪದಗಳ ಬಳಕೆಯಿಂದ ಕನ್ನಡ ಅಪಾಯದ ಅಂಚಿನಲ್ಲಿದೆ ಎಂದು ಅವರು ಎಚ್ಚರಿಕೆ ನೀಡಿದರು. ಕನ್ನಡ ಸಾಹಿತ್ಯದ ಬೆಳವಣಿಗೆಗೆ ಧರ್ಮಸ್ಥಳದ ಕೊಡುಗೆಯನ್ನು ಅವರು ಶ್ಲಾಘಿಸಿದರು.
ಧರ್ಮಸ್ಥಳದ ಬಗ್ಗೆ ಇದ್ದ ಸಂಶಯದ ಗುಂಡಿಗಳೆಲ್ಲಾ ಮುಚ್ಚಿ ಹೋಗಿವೆ. ಬುರುಡೆಗಳು ಬರಿದಾಗಿವೆ. ಸುಳ್ಳು ಮಲಗಿದೆ. ಸತ್ಯ ಗೆದ್ದಿದೆ. ತನ್ಮೂಲಕ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಕಟವಾಗಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನಗುಮೊಗ, ಸ್ಥಿತಪ್ರಜ್ಞೆ ಮತ್ತು ನಿಷ್ಕಳಂಕ ವ್ಯಕ್ತಿತ್ವದಿಂದ ಅವರು ಮತ್ತೆ ಶೋಭಾಯಮಾನವಾಗಿ ಬೆಳಗುತ್ತಿದ್ದಾರೆ. ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಧರ್ಮಸ್ಥಳ ಕ್ಷೇತ್ರವು ಅಂತಾರಾಷ್ಟೀಯ ಮಟ್ಟದ ಧಾರ್ಮಿಕ ಶ್ರದ್ಧಾಕೇಂದ್ರವಾಗಿ ಇನ್ನಷ್ಟು ಬೆಳೆಯಲಿ, ಬೆಳಗಲಿ ಎಂದು ಅವರು ಹಾರೈಸಿದರು.