ಬಂಟ್ವಾಳ:  ಪ್ರತಿಯೊಬ್ಬ ಅರ್ಹ ನಾಗರೀಕನು ಮತದಾನವನ್ನು ಮಾಡುವುದರ ಮೂಲಕ ದೇಶದ ಹಿತವನ್ನು ಕಾಪಾಡಬೇಕು. ಎಲ್ಲರೂ ಸಮಾನವಾಗಿ ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸುವ ಮೂಲಕ ದೇಶಕ್ಕೆ ಸಮರ್ಥ ಆಡಳಿತ ನೀಡುವ ಸದೃಢ ನಾಯಕರನ್ನು ಚುನಾಯಿಸುವ ಅಧಿಕಾರ ನಮ್ಮಲ್ಲೇ ಇರುವುದರಿಂದ ಏನೇ ಕೆಲಸಗಳಿದ್ದರೂ ಎಲ್ಲವನ್ನೂ ಬದಿಗೊತ್ತಿ ಮತದಾನಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ಸಾರ್ವತ್ರಿಕ ಲೋಕಸಭಾ ಚುನಾವಣೆ 2024ರ ಮಾಸ್ಟರ್ ತರಬೇತುದಾರ  ಅಬ್ದುಲ್ ರಜಾಕ್ ನುಡಿದರು. 

ಇವರು ಶ್ರೀ ವೆಂಕಟರಮಣಸ್ವಾಮಿ ಕಾಲೇಜಿನ ಇ.ಎಲ್.ಸಿ ಘಟಕ ಹಾಗೂ ಎನ್.ಎಸ್.ಎಸ್. ಘಟಕ ಮತ್ತು ಸ್ವೀಪ್ ತಂಡ, ತಾಲ್ಲೂಕು ಪಂಚಾಯತ್, ಬಂಟ್ವಾಳ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಯುವಮತದಾರರಾದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಸುಯೋಗ ವರ್ಧನ್ ಡಿ.ಎಮ್.ರವರು ಪ್ರತಿಯೊಂದು ಮತವೂ ಯೋಗ್ಯ ಅಭ್ಯರ್ಥಿಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂಬುದನ್ನು ನಿದರ್ಶನಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಪ್ರತಿಯೊಬ್ಬ ಅರ್ಹ ಮತದಾರನು ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಂಡಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಬಲತುಂಬಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. 

ನಮ್ಮದೇ ಆಡಳಿತಗಾರರನ್ನು ನಾವೇ ಆಯ್ಕೆಮಾಡಿಕೊಳ್ಳುವ ಅವಕಾಶ ಮತದಾನದ ಮೂಲಕ ನಮಗೆ ದೊರಕಿದೆ ಇದನ್ನು ಪರಿಣಾಮಕಾರಿಯಾಗಿ ಎಲ್ಲರೂ ಬಳಸಿಕೊಳ್ಳಬೇಕು ಹಾಗೂ ಇತರರನ್ನೂ ಮತದಾನಕ್ಕೆ ಪ್ರೇರೇಪಿಸಬೇಕು ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ  ಬಂಟ್ವಾಳ ತಾಲ್ಲೂಕು ಸ್ವೀಪ್ ನೋಡಲ್ ಅಧಿಕಾರಿ ಸುರೇಖಾ ಯಲವಾರ್ ರವರು ನುಡಿದರು. 

ಎಲ್ಲಾ ಯುವಮತದಾರರೂ ಮುಂಬರುವ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ದೇಶದ ಪ್ರಗತಿಗೆ ಕೈಜೋಡಿಸಬೇಕು. ‘ಚುನಾವಣಾ ಪರ್ವ ದೇಶದ ಗರ್ವ’ ಎಂಬ ಘೋಷವಾಕ್ಯದಂತೆ ಮತದಾನ ಮಾಡುವ ಹೆಮ್ಮೆ ನಮಗಿರಬೇಕೆಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಕಾಂಬ್ಳೆ ತಿಳಿಸಿದರು. 

ಮತದಾನವು ಪವಿತ್ರವಾದ ಕೆಲಸ. ಪ್ರತಿಯೊಬ್ಬರೂ ನಿರ್ಭೀತಿಯಿಂದ ಹಾಗೂ ಯಾವುದೇ ಆಮಿಷಗಳಿಗೆ ಗುರಿಯಾಗದೇ ಮತಚಲಾಯಿಸಬೇಕು. ಯುವಮತದಾರರು ವಿಚಾರಮಾಡಿ ಮತಚಲಾಯಿಸಲು ಮುಂದೆ ಬರಬೇಕು ಎಂದು ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ  ವಿಶ್ವನಾಥ ಡಿ. ರವರು ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತ್‍ನ ವ್ಯವಸ್ಥಾಪಕರಾದ  ಶಾಂಭವಿ ಎಸ್ ರಾವ್, ಕಾರ್ಯದರ್ಶಿಗಳಾದ ಅಶೋಕ್ ಕುಮಾರ್,  ಪ್ರಕಾಶ್ ಪಿ., ಸೆಕ್ಟರ್ ಅಧಿಕಾರಿಗಳಾದ  ಸುಪ್ರೀತ್ ಕಡಕೋಳ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಡಾ. ಕಾಶೀನಾಥ ಶಾಸ್ತ್ರಿ ಹೆಚ್.ವಿ. ಸ್ವಾಗತಿಸಿ, ಇ.ಎಲ್.ಸಿ. ಸಂಚಾಲಕರಾದ ಡಾ. ವಿನಾಯಕ ಕೆ.ಎಸ್. ವಂದಿಸಿದರು. ಉಪನ್ಯಾಸಕರಾದ  ಕಿಟ್ಟು ರಾಮಕುಂಜ ನಿರೂಪಿಸಿದರು. ಹೇಮಲತಾ ಹಾಗೂ ಶ್ರದ್ಧಾ ಪ್ರಾರ್ಥಿಸಿದರು.