ನಿಮ್ಮಿಡೀ ಜೀವನದಲ್ಲಿ ಯಾರಿಗೊ ಒಬ್ಬರಿಗಾದರು ನೀವು ಅನಿಮಿತ್ತ ಬಂಧುವಾಗಿದ್ದೀರಾ ?! ಆಗಿದ್ದರೆ ಕಂಗ್ರಾಟ್ಸ್, ನಿಮ್ಮೊಳಗಿನ ಪರಮಾತ್ಮ ಜಾಗೃತವಾಗಿದ್ದಾನೆಂದರ್ಥ.

ಒಂದಷ್ಟು ಬೇಕು-ಬೇಡ, ಇರುವ-ಇಲ್ಲದಿರುವಿಕೆಯ ಹುಡುಕಾಟ, ಗೊಂದಲ, ಕೆಲವೊಮ್ಮೆ ಕಾಡುವ ಅಸ್ತಿತ್ವ...ಈ ಎಲ್ಲದರೊಳಗೆ ಅರ್ಧ ಆಯುಷ್ಯ ಜರುಗಿ ಹೋಗಿರುತ್ತದೆ. ನಡುನಡುವೆ ಅನೇಕರು ಬದುಕಿನೊಳಗೆ ಬಂದು ಹೋಗಿರುತ್ತಾರೆ. ನಾವೂ ಅನೇಕರ ಬದುಕಿನೊಳಗೆ ನಡೆದು ಹೋಗಿರುತ್ತೇವೆ.

ಬಂದು ಹೋದವರಲ್ಲಿ ನೆನಪಲ್ಲಿ ಉಳಿದುಹೋದವರೆಷ್ಟೊ ? ಮತ್ತು ನೆಪದಲ್ಲಿ ಎದ್ದು ಹೋದವರೆಷ್ಟೊ ?! ಲೆಕ್ಕಾಚಾರಕ್ಕೆ ಕೂತರೆ ಅಗಣಿತ ತಾರೆಗಳು. ಯಾರಿದ್ದರೂ, ಎದ್ದುಹೋದರೂ ಎಂದಿಗೂ ಜೊತೆಯಾಗಿ ನಿಲ್ಲುವ, ಬಾಳ ತಿರುವುಗಳೊಳಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಜೊತೆಯಾಗಿ ಹೆಜ್ಜೆ ಹಾಕುವವರು, ಅಪರೂಪದ ಬೆರಳೆಣಿಕೆಯಷ್ಟು ಬಂಧಗಳು ಮತ್ತು ನಮ್ಮೊಳಗಿನ ನಮ್ಮ ಪರಮಾತ್ಮ ಮಾತ್ರ..!ಯಾರ ಬದುಕಿಗೆ ಯಾರು ವಿಶೇಷವೊ ಅಥವಾ ಇಲ್ಲವೊ ಎಂಬುದರ ಗೊಡವೆ ಬೇಕಿಲ್ಲ. ನಾವೆಷ್ಟು ಮಂದಿಯ ಬಾಳಿನಲ್ಲಿ ಅಂಥಾ ಅಪರೂಪದ ಬಂಧುವಾಗಿದ್ದೇವೆ ? ಬದುಕಿನ ಸರಹದ್ದು ತಲುಪಿದಾಗ ಇಂತಹದ್ದೊಂದು ಪ್ರಶ್ನೆ ಅಂತರಾಳವನ್ನು ಹೊಕ್ಕು...ಉತ್ತರ ಶೂನ್ಯ ಎಂದು ಚುಚ್ಚುವ ವೇಳೆಗೆ ಕೈಮೀರಿರುವ ಸಮಯವ ಹಿಡಿದು ಬಂಧಿಸಲಾಗದು ಅಲ್ಲವೆ..?

ಬದುಕಲು ಅನೇಕ ದಾರಿಗಳಿವೆ, ಅಥವಾ ದಾರಿಯಿಲ್ಲದೆ ಅವಶ್ಯಕತೆಗೋ, ಅನಿವಾರ್ಯತೆಗೊ ಒಗ್ಗಿಕೊಂಡು ಬದುಕುವವರೂ ‍ಅನೇಕರಿದ್ದಾರೆ. ಆದರೆ ಬದುಕು ಅನಿವಾರ್ಯವಲ್ಲ, ಅನಂತ ಭಾವಗಳೊಳಗೆ ಹೆಣೆದುಕೊಂಡ ಸುಂದರ ಕುಸುರಿಯುಡುಗೆ. ಮೈಗೆಳೆದುಕೊಂಡು ಸಂಭ್ರಮಿಸಬೇಕೊ, ಕಾಲನ ಕಾಲಡಿ ಮಾಸಿ ಹೋಗಲು ಬಿಟ್ಟು, ವ್ಯರ್ಥ ದೂಡವಿಕೆ ಮಾಡುವುದೊ ಆಯ್ಕೆಯದು ಕೈಗೆಟಕುವ ಆಕಾಶ !

ನಮ್ಮ ನಿರ್ಧಾರಗಳು ನಮ್ಮ ಬದುಕ ನಿಲುವನ್ನು ತೋರ್ಪಡಿಸುವುದಾದರೆ, ನಮ್ಮ ಆಯ್ಕೆಗಳು ನಮ್ಮ ದಾರಿಯನ್ನು ಮತ್ತಷ್ಟು ಸುಂದರಗೊಳಿಸುವಂತವು, ಸುಮಧುರಗೊಳಿಸುವಂತದ್ದಾಗಿರುತ್ತವೆ. ಯಾರಿಗೂ ದುಂಬಾಲು ಬಿದ್ದು ಬಂಧುಗಳಾಗುವುದು ಬೇಕಿಲ್ಲ, ಅಪರಿಚಿತರಿಗಾದರು ಸರಿ ಮುಳುಗುವವರಿಗೆ ಹುಲ್ಲುಕಡ್ಡಿಯ ಆಸರೆಯಂತಾದರು ಸಾಕು.
ಮತ್ಯಾರಿಗೊ ನಾವು ದೇವರಾಗುವುದು ಬೇಕಿಲ್ಲ, ಶಕ್ತ್ಯಾನುಸಾರ ಬೇಲಿಯ ಹೂವಾದರು ಸಾಕು. ಇಷ್ಟದೇವರ ಪಾದಕ್ಕರ್ಪಿಸಿದವರ ಧನ್ಯತೆ, ಸಮಯಕ್ಕಾದಾಗ ಎದುರಿನವರ ಕಣ್ಣೋಟದ ಹೊಳಪು...ನೀಡುವ ಸಾರ್ಥಕತೆಯೆ ಸಾಕು ಬದುಕು ಚೆಂದದ ನಿಟ್ಟುಸಿರ ದಬ್ಬಲು.

ಯಾವುದೇ ಕಾರಣಗಳಿಲ್ಲದಿರುವುದೇ ಒಂದು ಆರೋಗ್ಯಕರ ಬಂಧಕ್ಕೆ ಮೊದಲ ಮುನ್ನುಡಿ. ಕಾರಣಗಳು ತುಂಬಾ ದುಬಾರಿ. ಅವುಗಳು ಜನ್ಮತಳೆದಂತೆಲ್ಲ, ಬಂಧದ ಬೇರು ಸಡಿಲಗೊಳ್ಳುವ ಸಂಭವವೆಚ್ಚು..! ಸುಮ್ಮನೆ ಹಾಗೆಯೆ ತಪ್ಪು ಒಪ್ಪುಗಳೊಟ್ಟಿಗೆ, ಬಂದದ್ದೆಲ್ಲ ಬರಲಿ, ಸಾಧ್ಯವಾಗುವುದನ್ನು ತಿದ್ದೋಣ, ಊನಗಳನ್ನೂ ಒಪ್ಪಿಕೊಂಡು ಜೊತೆನಡೆದು ಬಿಡೋಣ, ನಿರೀಕ್ಷೆಯಿಲ್ಲದ ದಾರಿಯಲ್ಲಿ ನಿರಾಸೆಗು ಜಾಗವಿಲ್ಲ ಎಂಬ ದೃಢತೆ ಅಂತರಂಗದೊಳಗೆ ಬೆರೆತಾಗ, ಕಾರಣಗಳಿಲ್ಲದೇ ಮೂಡುವ ನಿಸ್ವಾರ್ಥ ಮುಗುಳುನಗೆಯೆ ಬದುಕಿನ ಭವ್ಯತೆ..ಸಾರ್ಥಕತೆ..!

ಪರಮಾತ್ಮನದ್ದು ಇದೇ ಕಾಯಕವಲ್ಲವೆ...ನಾವು ಹೊಗಳಿದರು, ತೆಗಳಿದರು, ನಿರೀಕ್ಷೆಯೆ ಇಲ್ಲದೆ ಆಸರೆಯಾಗಿ ನಿಂತು ಕಾಯ್ವುದು, ಕರ್ಮಕ್ಕನುಸಾರ ಎಲ್ಲವನ್ನೂ ನೀಡಿ ಮರೆಯಲ್ಲಿದ್ದುಬಿಡುವುದು..!



_ಪಲ್ಲವಿ ಚೆನ್ನಬಸಪ್ಪ

(ಗಡೀಹಳ್ಳಿ. ಚಿಕ್ಕಮಗಳೂರು)