ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅತ್ತೂರ್ ಹೆಸರಿನ ಹಳ್ಳಿಯಲ್ಲಿರುವ ಒಂದು ಪ್ರಸಿದ್ಧವಾದ  ಕ್ರೈಸ್ತರ ಧಾರ್ಮಿಕ ಕೇಂದ್ರ ಸಂತ ಲಾರೆನ್ಸ ಚರ್ಚ್. ಈ ದೇವಾಲಯಕ್ಕೆ ಆಗಸ್ಟ್ 01 2016 ರಲ್ಲಿ ಮೈನರ್ ಬೆಸಿಲಿಕಾ ( ಕಿರಿಯ ಮಹಾ ದೇವಾಲಯ) ಎಂದು ಘೋಷಣೆ  ಮಾಡಲಾಯಿತು. ಭಕ್ತರ ಹರಕೆಯನ್ನು ಈಡೇರಿಸುವ ಈ ಕ್ಷೆತ್ರ ಸರ್ವ ಧರ್ಮದ ಸಮ್ಮಿಲನ ಹಾಗೂ ಪವಾಡಕ್ಕೆ ಪ್ರಸಿದ್ಧವಾಗಿದೆ. ನನ್ನ ಬಾಲ್ಯ ಜೀವನದ ಒಂದು ರೋಚಕ  ಭಾಗವೆಂದರೆ ಕಾರ್ಕಳ ಅತ್ತೂರ್ ಸಂತ ಲಾರೆನ್ಸ್ ಚರ್ಚ್ ಗೆ ಹೋಗುವುದು. ಇದೊಂದು ಸುಂದರವಾದ, ಒಳ್ಳೆಯ ಸವಿ ನೆನಪು. ನಾನು ನನ್ನ ತಂದೆ-ತಾಯಿ, ಅಕ್ಕ, ತಮ್ಮ  ಹಾಗೂ ತಂಗಿಯರೊಡನೆ ಮಧ್ಯಾಹ್ನದ ನಂತರ ಅಜೆಕಾರಿನಿಂದ ಬಸ್ಸಿನಲ್ಲಿ ಹೋಗುವುದು, ಅಜೆಕಾರಿನಿಂದ ಕಾರ್ಕಳಕ್ಕೆ ಸುಮಾರು 14 ಕಿ ಮೀ ದೂರವಿದೆ. ಬಸ್ಸು ಕಾರ್ಕಳ ಪೇಟೆಗೆ ಹೋಗುವ ಕಾರಣ ನಮಗೆ ಸ್ವಲ್ಪ ಮೊದಲೇ ಇಳಿಯಬೇಕಾಗುತ್ತಿತ್ತು. ಅಲ್ಲಿಂದ ಕಾಲ್ನಡಿಗೆಯಿಂದ ದೇವಾಲಯಕ್ಕೆ ಹೋಗಬೇಕಾಗುತ್ತಿತ್ತು.

ದೇವಾಲಯವು ತುಂಬಾ ವಿದುತ್ದ್ವೀಪಗಳಿಂದ  ಅಲಂಕೃತಗೊಳ್ಳುತ್ತಿತ್ತು,  ನಂತರ ನಾವು ಬಲಿಪೂಜೆಯಲ್ಲಿ ಪಾಲ್ಗೊಂಡು, ನಮ್ಮ ಹರಕೆಯನ್ನು ತೀರಿಸಿ, ಮೇಣದ ಬತ್ತಿಗಳನ್ನು ಉರಿಸಿ ಸಾಂಯಕಾಲದ ಹೊತ್ತಿಗೆ ಅಲ್ಲಿಯ  ಜಾತ್ರೆಯನ್ನು ತಿರುಗಾಡಲು ಹೋಗುತ್ತಿದ್ದೆವು. ದೇವಾಲಯದ ಬಲಭಾಗದಲ್ಲಿ ಇರತಕ್ಕಂಥ ಕೊಳದ ಹತ್ರ ಆ ಮೆಟ್ಟಿಲುಗಳನ್ನು ಇಳಿದು ಹೋಗಿ ಆ ನೀರಿಗೆ ನಾಣ್ಯಗಳನ್ನು ಹಾಕುವುದೆಂದರೆ ಅದೆಷ್ಟು ಖುಷಿ. ಜಾತ್ರೆಯು ಜನಜಂಗುಳಿಯಿಂದ ತುಂಬಿಕೊಳ್ಳುತ್ತಿತ್ತು. ಆದ್ದರಿಂದ ನಾವು ಒಬ್ಬರಿಗೊಬ್ಬರು  ಕೈಯನ್ನು ಹಿಡಿದು ನಡೆಯಬೇಕಾಗುತ್ತಿತ್ತು. ಹೀಗೆ ನಡೆದುಕೊಂಡು ಹೋಗುವಾಗ ರಸ್ತೆಯ ಬದಿಗಳಲ್ಲಿ ಭಿಕ್ಷುಕರು, ಅಂಗವಿಕಲರು ಸಾಲಾಗಿ ಕುಳಿತುಕೊಂಡು ಭಿಕ್ಷೆ ಬೇಡುತಿದ್ದರು. ನಂತರ ಜಾತ್ರೆ ತಿರುಗುವಾಗ ಅನೇಕ ರೀತಿಯ ಅಂಗಡಿಗಳು, ಆಟಿಕೆಗಳು, ಸಿಹಿ ತಿಂಡಿಗಳ ಅಂಗಡಿಗಳು ಇದ್ದುವು. ನಮಗೆ ತಂದೆ ತಾಯಿಯವರು ತಿನ್ನಲು ತುಂಡು ಮಾಡಿ  ಇಟ್ಟಂತಹ ಕಲ್ಲಂಗಡಿ ಹಣ್ಣಿನ ತುಂಡನ್ನು ತೆಗೆದು ಕೊಡುತಿದ್ದರು. ಕಲ್ಲಂಗಡಿ ಹಣ್ಣಿನ ತುಂಡನ್ನು ತಿನ್ನದೇ ಯಾರು ಸಹ ಜಾತ್ರೆಯಿಂದ ಹಿಂದೆ ಬರುತ್ತಿರಲಿಲ್ಲ. ಹಾಗೆ ಎಲ್ಲಾ  ಸಂತೆ  ತಿರುಗಾಡಿ ನಮಗೆ ಮನೆಯಲ್ಲಿ ತಿನ್ನಲು ಕಿತಾಳೆ ಹಣ್ಣು, ಸಿಹಿ ಮೀಠಯಿಗಳು ಹಾಗೂ ಒಂದು ದೊಡ್ಡ ಗಾತ್ರದ ಕಲ್ಲಂಗಡಿಯನ್ನು ತಗೊಂಡು ಹೂಗುತಿದ್ದೆವು. 

ನಂತರ ಕಬ್ಬಿನ ಜ್ಯೂಸು ಕುಡಿಯಲು ಜನ ಗುಂಪುಗೂಡುತ್ತಿದ್ದರು, ಹಾಗೇನೆ ಸುತ್ತಾಡುತ್ತಾ ಮುಂದಕ್ಕೆ ಹೋಗುವಾಗ ಆ ದೊಡ್ಡ ದೊಡ್ಡ ಗಾತ್ರದ ಚಕ್ಕುಲಿ, ಮತ್ತೆ ತಾಂಬ್ಡೆ ಗುಳೆ  ತಗೊಳ್ಳುವುದೆಂದರೆ ಇನ್ನು ಖುಷಿ. ಅಲ್ಲಿಂದ ಮನೆಗೆ ಹಿಂತಿರುಗಿ ಬರಲು ರಾತ್ರಿಯ ವೇಳೆಯಲ್ಲಿ ಈಗೀನ ಹಾಗೆ ಗಾಡಿ, ಬಸ್ಸುಗಳು ಇರಲಿಲ್ಲ. ರಾತ್ರಿಯ ವೇಳೆಯಲ್ಲಿ ಚಂದ್ರನ ಬೆಳಕು ಇದ್ದುದರಿಂದ ನಾವು ಎಲ್ಲರೂ ಸೇರಿ ಗುಂಪು-ಗುಂಪಾಗಿ ಕಾಲ್ನಡಿಗೆಯಲ್ಲಿ ಹಿಂದೆ ಹೋಗುತಿದ್ದೆವು. ಅಜೆಕಾರಿನ  ತುಂಬಾ ಜನರು ಇದ್ದುದರಿಂದ ರಸ್ತೆಯಲ್ಲಿ ಬರುವಾಗ ವಿಧ-ವಿಧ ರೀತಿಯ ಹಾಡು-ಹಾಸ್ಯಗಳನ್ನು ಹಾಡಿ ಹೋಗುದರಿಂದ ನಮಗೆ ನಡೆಯಲು ಅಷ್ಟು ಕಷ್ಟವೆನಿಸುತ್ತಿರಲಿಲ್ಲ.  ಮರುದಿನ ಮಧ್ಯಾಹ್ನ ಆ ದೊಡ್ಡ ಗಾತ್ರದ ಕಲ್ಲಂಗಡಿಯನ್ನು ತುಂಡು ಮಾಡಿ ಎಲ್ಲರೂ ತಿನ್ನುತಿದ್ದೆವು. ಅತ್ತೂರ್  ಜಾತ್ರೆಗೆ ಹೋದವರು ಹಿಂದೆ ಬರುವಾಗ ಎಲ್ಲರೂ ಕೂಡ ಕಲ್ಲಂಗಡಿಯನ್ನು ತರದೇ  ಇರುತ್ತಿರಲಿಲ್ಲ. ನನಗೆ ಈಗಲೂ ಸಹ  ಅತ್ತೂರ್   ಜಾತ್ರೆಯಲ್ಲಿ  ಕಲ್ಲಂಗಡಿ ತಿನ್ನುದು ನೆನಪಿಗೆ ಬರುತ್ತದೆ.

Article By

Joseph Castelino