ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ
ದೇಶದ ಒಗ್ಗಟ್ಟು ಕಾಪಾಡಲು ಶಿಕ್ಷಣ ಅತಿ ಅಗತ್ಯ. ಆದರೆ ಅಂತಹ ಶಿಕ್ಷಣ ಪಡೆದ ಮನುಷ್ಯ ತಾನು ಕಲಿತದ್ದನ್ನು, ಕಲಿತಾಕ್ಷಣ, ತಿಳಿದಾಕ್ಷಣ ಮರೆಯುತ್ತಾನೇನೋ ಎಂಬ ಆಭಾಸ ಮೂಡುತಿದೆ. ಪ್ರಥಮ ತರಗತಿಯಿಂದಲೇ ಮಗುವಿಗೆ ಸ್ವಚ್ಛತೆಯ ಪಾಠ ಪ್ರಾರಂಭವಾಗುತ್ತದೆ. ಪ್ರತಿದಿನ ಎದ್ದ ಕ್ಷಣ ಮುಖ ಮಜ್ಜನಗಳನ್ನು ಮಾಡಿ, ಪರಿಸರವನ್ನು ಶುಚಿಗೊಳಿಸಿ, ಸ್ವಚ್ಛವಾಗಿಡಲು, ತನ್ನ ಪಾಠದ ಹಾಗೂ ಉಡುಗೆ ತೊಡೆಗೆ ಇತ್ಯಾದಿ ಪರಿಕರಗಳನ್ನು ಒಪ್ಪ ಓರಣವಾಗಿಡುವ ಕುರಿತು ಕಲಿಸಲಾಗುತ್ತದೆ. ಆದರೆ ಮಗು ಬೆಳೆದು ದೊಡ್ಡದಾದಂತೆ ಉಪಯೋಗಿಸಿದ ವಸ್ತುಗಳನ್ನು ಕಂಡ ಕಂಡಲ್ಲಿ ಎಸೆಯಲು, ಅಲ್ಲಲ್ಲೇ ಬಿಟ್ಟು ಹೋಗಲು ಪ್ರಾರಂಭಿಸುತ್ತದೆ. ಸ್ವಚ್ಛತೆಯ ಕ್ರಮಗಳನ್ನು ತನ್ನ ಜೀವನಪೂರ್ತಿ ಪಾಲಿಸಬೇಕೆಂಬ ನಾಗರೀಕ ಪ್ರಜ್ಞೆ ಕಲಿತ ಮಂದಿಯಲ್ಲಿ ಬೆಳೆಯುವದಿಲ್ಲ ಎಂದರೆ ಶಿಕ್ಷಣದ ಪ್ರಭಾವದ ಬಗ್ಗೆ ಯೋಚಿಸಬೇಕಾಗಿದೆ.
ಶಿಕ್ಷಣ, ಬದುಕಿಗೆ ಪಾಠವಾಗಲಿ:- ಇತ್ತೀಚೆಗೆ ಕೆಲವು ಕಾರ್ಯಕ್ರಮಗಳಿಗೆ ಹೋದಾವಾಗಿನ ಘಟನೆಗಳನ್ನು ಇಲ್ಲಿ ಪ್ರಸ್ತಾಪಿಸ ಬಯಸುತ್ತೇನೆ. ಕನ್ನಡ ಮಾಧ್ಯಮದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಸುಮಾರು 200ಕ್ಕೂ ಹೆಚ್ಚು ಮಕ್ಕಳು ಅಲ್ಲಿದ್ದರು. ಆದರೆ ತಂದ ವಸ್ತುಗಳ ಕವರ್ ಗಳನ್ನು ವ್ಯವಸ್ಥಿತವಾಗಿ ಡಸ್ಟ್ ಬಿನ್ ಗಳಲ್ಲಿ ಹಾಕುತ್ತಿದ್ದರು. ಕಾರಣ ಕೇಳಿದಾಗ ತಿಳಿದು ಬಂದಿದೆ ಎಂದರೆ ಯಾವುದೇ ಕಸ ಕಡ್ಡಿ ಶಾಲೆಯ ಪರಿಸರದಲ್ಲಿ ಕಂಡು ಬಂದಲ್ಲಿ ಮರುದಿನ ವಿದ್ಯಾರ್ಥಿಗಳೇ ಅದನ್ನು ಗುಡಿಸಿ ಸ್ವಚ್ಛಗೊಳಿಸಬೇಕಿತ್ತು ಎನ್ನುವುದು.
ಇನ್ನೊಂದು ಆಂಗ್ಲ ಮಾಧ್ಯಮದ ಕಾರ್ಯಕ್ರಮದಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಆದರೆ ಆ ಕಾರ್ಯಕ್ರಮ ನಡೆಯುವ ಹಾಲ್ ನ ಅಲ್ಲಲ್ಲಿ ತಿಂದು ಎಸೆದ ಕಾಗದದ ಚೂರುಗಳು, ಕವರ್ ಗಳು ಇದ್ದುವು. ಕಾರಣ ಕೇಳಿದಾಗ ಮರುದಿನ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛಗೊಳಿಸುತ್ತಾರೆ ಎಂಬುದಾಗಿತ್ತು.
ಎಂದರೆ ಮಕ್ಕಳಿಗೆ ಅವರವರ ಸ್ವಚ್ಛತೆಯ, ಪರಿಸರದ ಸ್ವಚ್ಛತೆಯ ಪಾಠ ಸಮರ್ಪಕವಾಗಿ ಕೆಲವು ಶಾಲೆಗಳಲ್ಲಿ ನೀಡಲಾಗುತ್ತಿಲ್ಲ ಎನ್ನುವುದು ಸಾಬೀತಾಯಿತು. ವಿದ್ಯಾರ್ಥಿಗಳಿರಲಿ ಅಥವಾ ಹೆತ್ತವರೆ ಇರಲಿ, ಅವರವರ ಕೆಲಸವನ್ನು ಜವಾಬ್ದಾರಿಯಿಂದ ನಡೆಸಿಕೊಂಡು ಹೋಗುವುದನ್ನು ಶಿಕ್ಷಣ ಕಲಿಸಬೇಕಾಗಿದೆ.
ದೇಶದ ಪ್ರಧಾನಿಯೇ ಸ್ವಚ್ಛತೆಯ ಬಗೆಗೆ ತಿಳಿ ಹೇಳಿದರೂ, ಸ್ವತಃ ಕಾರ್ಯತಃ ದುಡಿದು ತೋರಿದರೂ, ಹಣದ ಮದದ ಎದುರು, ಜವಾಬ್ದಾರಿ ರಾಹಿತ್ಯದ ಎದುರು ಎಲ್ಲವೂ ಗೌಣ. ವಿವೇಕಾನಂದರೇ ಹೇಳಿರುವಂತೆ 'ಜ್ಞಾನವೇ ಶಕ್ತಿ ಅಜ್ಞಾನವೇ ದೌರ್ಬಲ್ಯ'. ಹೀಗಾಗಿ ಸ್ವಚ್ಛತೆಯ, ಶುಚಿತ್ವದ ಜ್ಞಾನ ಬೆಳೆಯದಿದ್ದರೆ ಅದು ದೇಶದ ದೌರ್ಬಲ್ಯವಾಗಿ ಪರಿಣಮಿಸುತ್ತದೆ. ಇದು ದೇಶದ ಒಗ್ಗಟ್ಟಿಗೂ ಅಪಾಯಕಾರಿ. ಇಂತಹ ದೌರ್ಬಲ್ಯದ ಪರಿಣಾಮವನ್ನು ಇಂದು ಎಲ್ಲಾ ನಗರ, ಮಹಾನಗರಗಳಲ್ಲಿ ಜನರು ಅನುಭವಿಸುತ್ತಿದ್ದಾರೆ.
ಶಿಕ್ಷಣ ಸಂಸ್ಕೃತಿಯ ವಾಹಕ:- ಮನುಷ್ಯ ಭಾಷೆ ಕಲಿಯುವುದರೊಂದಿಗೆ ಸಂಸ್ಕೃತಿ, ಸಂಸ್ಕಾರವನ್ನು ಶಿಕ್ಷಣದಿಂದ ಕಲಿಯುತ್ತಾನೆ. ಧರ್ಮ ಎನ್ನುವ ಉತ್ತಮ ಕಾರ್ಯದ ತಳಹದಿಯಲ್ಲಿ ಶಿಕ್ಷಣದ ರೂಪರೇಷೆ ಬೆಳೆಯುತ್ತದೆ. ಅದೇ ಅದರ ಜೀವಾಳ ಕೂಡ. ಧರ್ಮದ ತಳಹದಿಯಲ್ಲಿ ಬೆಳೆದ ಶಿಕ್ಷಣದಿಂದ ಪ್ರಬಲತೆ ಪಡೆದ ಮಗು ಉತ್ತಮ ಸಂಸ್ಕಾರವನ್ನು ಹೊಂದಿ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುತ್ತಾನೆ. ಉತ್ತಮ ಸಂಸ್ಕೃತಿ ಬೆಳೆಯಬೇಕಿದ್ದರೆ ಸಂಸ್ಕಾರವಂತಿಕೆ ಅತಿ ಮುಖ್ಯ.
ಆದರೆ ದ್ವಿಚಕ್ರ, ತ್ರಿಚಕ್ರ, ಚತುಷ್ಚಕ್ರ ವಾಹನಗಳಲ್ಲಿ ಹೋಗುವಾಗ ಸ್ವತಹ ತಂದೆ ತಾಯಿಯರೇ ರಸ್ತೆಯ ಬದಿಗೆ, ಬದಿಯ ತೋಡುಗಳಿಗೆ, ಸೇತುವೆ ಸಂಕಗಳ ಪರಿಸರಕ್ಕೆ, ನಗರವಾಸಿಗಳು ಪಂಚಾಯತ್ ಪ್ರದೇಶಗಳಿಗೆ ಹೋಗುವಾಗ ಕಸ ಎಸೆಯುವುದನ್ನು ಕಂಡ ಮಗು ಎಂತಹ ಸಂಸ್ಕಾರವನ್ನು ಕಲಿಯಲು,, ಬೆಳೆಸಿಕೊಳ್ಳಲು ಸಾಧ್ಯವಿದೆ?
ಮದುವೆ, ಉತ್ಸವ ಇತ್ಯಾದಿ ಸಂದರ್ಭಗಳಲ್ಲಿ ಕೂಡ ತಾನು ಕುಳಿತಲ್ಲಿಯೇ ಕುಡಿದು, ತಿಂದು ಉಳಿದ ವಸ್ತುಗಳನ್ನು ಎಸೆಯುವ ಹೆತ್ತವರು ಎಂತಹ ಸಂಸ್ಕಾರವನ್ನು ಮಕ್ಕಳಿಗೆ ತೋರಿಸಿಕೊಡುತ್ತಾರೆ? ಇಂಥವರೂ ಕಲಿತವರೇ?, ಪ್ರಜ್ಞಾವಂತ ನಾಗರಿಕರೇ?, ತಿಳಿದವರೇ? ಏಕೆ ಹೀಗೆ???
ಸಾಮರ್ಥ್ಯ ಆಧಾರಿತ ಕಲಿಕೆ:- ಇಂದಿನ ವಿದ್ಯಾರ್ಥಿಗೆ ಸಂಸ್ಕೃತಿಯಾಗಲಿ, ಸಂಸ್ಕಾರ ವಾಗಲಿ ಮುಖ್ಯವಲ್ಲ. ಆತನಿಗೆ ಶಾಲೆಗಳಲ್ಲಿ ಕೇವಲ ಸಾಮರ್ಥ್ಯಧಾರಿತ ಕಲಿಕೆ ಮಾತ್ರ ದೊರಕುತ್ತಿದೆ. ಎಂದರೆ ಇಲ್ಲಿ ಸರಕಾರದ ಜವಾಬ್ದಾರಿ ಢಾಳಾಗಿ ಕಾಣಿಸುತ್ತದೆ. ಮಣ್ಣನ್ನು ಹೊನ್ನಾಗಿಸುವ ಶಿಕ್ಷಣ ಮಗುವಿಗೆ ದೊರಕಬೇಕಿದ್ದಲ್ಲಿ ಆತನಿಗೆ ಭಾರತೀಯ ಸಂಸ್ಕೃತಿಯ, ಸಂಸ್ಕಾರದ ಶಿಕ್ಷಣ ದೊರಕಬೇಕಾಗಿದೆ.
ಸ್ಪರ್ಧಾ ಶಿಕ್ಷಣದ ನಡುವೆ ಕೂಡಿ ಬಾಳುವ ವಿದ್ಯೆಯ ಉದ್ದೇಶ ಕಮರುತಿದೆ. ಶಿಸ್ತು, ದಕ್ಷತೆ, ಸಂಯಮ, ಪ್ರಾಮಾಣಿಕತೆ, ಮಾನವೀಯತೆ, ದಕ್ಷತೆ ಗಳನ್ನು ಕಲಿಸುತ್ತಿದ್ದ ನೀತಿ ಶಿಕ್ಷಣ, ಸಾಹಿತ್ಯ ಶಿಕ್ಷಣ, ಕಲಿಕಾ ಶಿಕ್ಷಣಗಳು ಇಂದು ಶಾಲೆಯಿಂದ ಮರೆಯಾಗಿವೆ. ಸಾಮರ್ಥ್ಯ ಆಧಾರಿತ ಕಲಿಕೆಯ ಗುಂಗಿನಲ್ಲಿ ಮೇಲ್ಕಂಡ ಎಲ್ಲವೂ ಲುಪ್ತವಾಗಿರುವುದು ಶಿಕ್ಷಣದ ಅಧಃಪತನಕ್ಕೆ ಕಾರಣವಾಗ ಬಹುದೇ???