ರಾಖಿಗರಿಯಲ್ಲಿ ಸಿಕ್ಕ ಸಿಂಧೂ ಕಣಿವೆ ನಾಗರಿಕತೆಗೆ ಸಂಬಂಧಿಸಿದ ಸುಮಾರು 4,500 ವರುಷಗಳ ಹಿಂದಿನ ಪಳೆಯುಳಿಕೆಯ ಡಿಎನ್‍ಎ ಸಂಶೋಧನೆಯ ಫಲಿತಾಂಶ ಹೊರಬಿದ್ದನಂತರ ಹಿಂದೂತ್ವವಾದಿಗಳ ಬುಡ ಅಲ್ಲಾಡತೊಡಗಿದೆ. ಶತಮಾನದ ಹಿಂದೆ ಅವರೇ ಹುಟ್ಟುಹಾಕಿ, ನೀರೆರೆದು, ಪೋಷಿಸಿ ಜನರ ಮನಸ್ಸಿನಲ್ಲಿ ಬಿತ್ತಿದಂತ ಸುಳ್ಳುಗಳ ಅನಾವರಣ ಆಗತೊಡಗಿದೆ, ವೈಜ್ಞಾನಿಕವಾಗಿ. ಸಿಂಧೂ ನಾಗರಿಕತೆಯನ್ನು ಕಟ್ಟಿ, ಬೆಳೆಸಿದವರು ಆರ್ಯನ್ನರಲ್ಲ. ಸಿಂಧೂ ನಾಗರಿಕತೆಯ ವಿಕಾಸದಲ್ಲಿ ಎಲ್ಲೆಲ್ಲೂ ಅರ್ಯನ್ನರ ಪಾತ್ರವಿಲ್ಲವೆನ್ನುವುದು ಈವಾಗ ವೈಜ್ಞಾನಿಕವಾಗಿ ಖಾತ್ರಿಯಾಗಿದೆ. ರಾಖಿಗರಿ ಪಳೆಯುಳಿಕೆಯಲ್ಲಿ R1a1 (ಆರ್ಯನ್ ವಂಶವಾಹಿ) ಮಾರ್ಕರ್ ಇಲ್ಲವೇ ಇಲ್ಲವೆಂದು ಅಧ್ಯಯನದಿಂದ ತಿಳಿದುಬಂದಿದೆ.
ಅಸಲಿಗೆ 1920ರ ಆಸುಪಾಸಿನಲ್ಲಿ ಸಿಂಧೂ ಕಣಿವೆ ನಾಗರಿಕತೆಯ ಬಗ್ಗೆ ಮೊದಲಬಾರಿ ತಿಳಿದು ಬಂದಾಗಲೇ ಪುರಾತತ್ವಶಾಸ್ತ್ರಜ್ಞರು ಹಾಗೂ ವಿಜ್ಞಾನಿಗಳು, ಸಿಂಧೂ ನಾಗರಿಕತೆ ಆರ್ಯನ್ನರ/ವೈದಿಕರ ಉಗಮಕ್ಕಿಂತ ಮೊದಲಿನದ್ದೆಂದು ಹೇಳಿದ್ದರು. ಆದರೆ ಸುಳ್ಳುಗಳನ್ನೇ ಹೇಳಿ ತಮ್ಮ ಜೀವನೋಪಾಯವನ್ನು ಕಂಡುಕೊಂಡವರು ಮಾತ್ರ ಸಿಂಧೂ ನಾಗರಿಕತೆಗೂ-ವೈದಿಕ ಆಚರಣೆಗಳಿಗೂ, ಆರ್ಯನ್ನರಿಗೂ ಸಂಬಂಧ ಕಲ್ಪಿಸಿ ಸುಳ್ಳುಗಳ ಕಂತೆಗಳನ್ನು ಬಿತ್ತಲು ಆರಂಭಿಸಿದ್ದರು. ವೈದಿಕ ಪರಂಪರೆ ಹಾಗೂ ಸಂಸ್ಕೃತಿ 5000 ಸಾವಿರ ವರುಷಗಳ ಹಿಂದಿನದ್ದು ಎಂದು ಹೇಳುತ್ತಿರುವವರು ಭಾಗಶ: ಸತ್ಯವನ್ನೇ ಹೇಳುತ್ತಿದ್ದಾರೆ. ಯಾಕೆಂದರೆ ಆರ್ಯನ್ನರ ಉಗಮ ಸರಿಸುಮಾರು 5000 ವರುಷಗಳ ಹಿಂದೆ ಆಗಿತ್ತೆಂದು R1a1 ಮಾರ್ಕರ್ ಅಧ್ಯಯನ ದೃಢೀಕರಿಸಿದೆ. ಆದರೆ R1a1 ವಂಶವಾಹಿನಿಯ ಉಗಮ ಅಗಿರುವುದು ಭಾರತದಲ್ಲಲ್ಲ ಬದಲಾಗಿ ಮಧ್ಯ ಏಷಿಯಾದ ಕಪ್ಪು ಸಮುದ್ರ ಹಾಗೂ ಕ್ಯಾಸ್ಪಿಯನ್ ಮಧ್ಯೆ ಹರಡಿದ್ದ ಪೋಂಟಿಕ್ ಸ್ಟೆಪ್ಪೆ ಹುಲ್ಲುಗಾವಲುಗಳ ಪಶುಪಾಲಕ ಸಮೂಹಗಳಲ್ಲಿ ಅದೂ ಕಂಚಿನ ಯುಗದಲ್ಲಿ. ಸದ್ಯದ ವಂಶವಾಹಿ ಹರಿವಿನ ಬಗೆಗಿನ ಸಂಶೋಧನೆಗಳು ಈ R1a1 ಮಾರ್ಕರ್ ನ ಅರ್ಯನ್ನರು ತಮ್ಮ ಯಾಮ್ನಾಯಾ ಸಂಸ್ಕೃತಿಯನ್ನು ಯೂರೋಪ್ ಮತ್ತು ದಕ್ಷಿಣ ಏಷಿಯಾ ಯಾವಾಗ ಹಾಗೂ ಹೇಗೆ ಕೊಂಡೊಯ್ದರು ಹಾಗೂ ಸಂಸ್ಕೃತ ಭಾಷೆಯನ್ನು ಹೇಗೆ ಅದರ ಜೊತೆಯಲ್ಲಿ ಹರಡಿದರೆಂದು ತೋರಿಸುತ್ತವೆ. ಹೀಗೆ ಆರ್ಯ ವೈದಿಕರ ಇತಿಹಾಸ 4000-5000 ವರುಷಗಳಿಗಿಂತ ಮುಂದಕ್ಕೆ ಹೋಗೋಲ್ಲ. ಅದೂ ಭಾರತದಲ್ಲಿ ಅವರ ಇತಿಹಾಸ ಹೆಚ್ಚೆಂದರೆ 4000 ವರುಷಗಳಿಗೆ ಸೀಮಿತ. ಅದೇ ಸಿಂಧೂ ನಾಗರಿಕತೆಗೆ ಸರಿಸುಮಾರು 7000 ವರುಷಗಳ ಇತಿಹಾಸವಿದೆಯಾದರೆ ದ್ರಾವಿಡ ಸಂಸ್ಕೃತಿಗೆ ಸರಿಸುಮಾರು 40,000 ಇತಿಹಾಸ ಇದೆ. ಹಾಗಾಗಿ ಆರ್ಯನ್ನರು ಭಾರತಕ್ಕೆ ಬಂದು ತಲುಪುವಾಗಲೇ ಸಿಂಧೂ ನಾಗರಿಕತೆಯ ಅವಸಾನವಾಗಿತ್ತು ಎಂದು ರಾಖಿಗರಿ ಪಳೆಯುಳಿಕೆ ಸಂಶೋಧನೆ ದೃಢಪಡಿಸಿದೆ.