ಬೆಂಗಳೂರು: ಕೊರೋನಾ ಸೋಂಕಿನ ಭೀತಿಯಿಂದಾಗಿ ಎಲ್ಲಾ ವಿಭಾಗದ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ಸಾಮಾಜಿಕ ಅಂತರದೊಂದಿಗೆ ಪ್ರಯಾಣಿಕರು ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಇದೀಗ ಒಬ್ಬ ಪ್ರಯಾಣಿಕರಿಗೂ ಮತ್ತೊಬ್ಬ ಪ್ರಯಾಣಿಕರಿಗೂ ಮೂರು ಮೀಟರ್ ಅಂತರಕ್ಕೆ ಬದಲಾಗಿ ಪೂರ್ಣ ಪ್ರಾಣಾದ ಆಸನಗಳಲ್ಲಿ ಪ್ರಯಾಣಿಕರು ಪ್ರಯಾಣಿಸಲು ಅನುಮತಿ ನೀಡಿದೆ. ಹೀಗಾಗಿ ಸಾಮಾಜಿಕ ಅಂತರವಿಲ್ಲದೇ ರಾಜ್ಯ ರಸ್ತೆ ಸಾರಿಗೆ ಬಸ್ ಗಳಲ್ಲಿ ಕೊರೋನಾ ಸೋಂಕಿನ ನಿಯಂತ್ರಣ ಕ್ರಮಗಳನ್ನು ಅನುಸರಿಸಿಕೊಂಡು ಪ್ರಯಾಣಿಸಲು ಅನುಮತಿ ನೀಡಲಾಗಿದೆ.
ಈ ಕುರಿತಂತೆ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ ಸತ್ಯವತಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಪತ್ರದ ಮೂಲಕ ಮಾಹಿತಿ ನೀಡಿದ್ದು, ಸಂಸ್ಥೆಯ ಬಸ್ಸುಗಳಲ್ಲಿ ನಿಗದಿಪಡಿಸಿರುವ ಆಸನಗಳಷ್ಟು ಪ್ರಯಾಣಿಕರು ಪ್ರಯಾಣಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಕೆಳಕಂಡಂತೆ ಷರತ್ತುಗಳನ್ನು ವಿಧಿಸಿ, ಅನುಮತಿ ನೀಡಿರುತ್ತದೆ.
- ಪ್ರತಿಯೊಬ್ಬ ಪ್ರಯಾಣಿಕರು ಫೇಸ್ ಮಾಸ್ಕ್ ಅನ್ನು ಕಟ್ಟು ನಿಟ್ಟಾಗಿ ಧರಿಸತಕ್ಕದ್ದು.
- ಜನ ಸಂದಣಿಯನ್ನು ತಡೆಗಟ್ಟಲು ಯಾವುದೇ ಪ್ರಯಾಣಿಕರನ್ನು ಬಸ್ಸಿನಲ್ಲಿ ನಿಂತು ಪ್ರಯಾಣಿಸಲು ಅನುಮತಿಸಬಾರದು.
- ಬಸ್ಸಿನಲ್ಲಿ ಎಸಿ ಬಳಕೆ ಸಿಪಿಡಬ್ಲ್ಯೂಡಿ ಮಾರ್ಗಸೂಚಿಯನ್ನು ಅನುಸರಿಸುವುದು.
- ನಿರ್ದಿಷ್ಟಪಡಿಸಿದ ಪ್ರತಿ ಪ್ರಯಾಣದ ನಂತ್ರ ಸ್ಯಾನಿಟೈಸ್ ಮಾಡತಕ್ಕದ್ದು.
ಈ ಮೇಲ್ಕಂಡ ಷರತ್ತುಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದರೊಂದಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ನಿಗದಿಪಡಿಸಿರುವ ಆಸನಗಳಷ್ಟು ಪ್ರಯಾಣಿಕರು ಪ್ರಯಾಣಿಸಲು ಅನುಮತಿ ನೀಡಿ ಆದೇಶಿಸಿದ್ದಾರೆ.