ಮುಂಬಯಿ:  ಪೂರ್ವಜರು ಕ್ರೀಡೆಯನ್ನು ಮನಶಾಂತಿ, ನೆಮ್ಮದಿಗಾಗಿ ಬದುಕಿನ ಅವಿಭಾಜ್ಯ ಅಂಗವಾಗಿ ಆಯ್ದುಕೊಂಡಿದ್ದರು. ಇದನ್ನೇ ಬಿಲ್ಲವರ ಅಸೋಸಿಯೇಶನ್ ಕೋಟಿ-ಚೆನ್ನಯರ ಹೆಸರಲ್ಲಿ ವಾರ್ಷಿಕವಾಗಿ ನಡೆಸಿ ಸಮಾಜದಲ್ಲಿನ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವುದುಅಭಿನಂದನೀಯ. ಇಂತಹ ಕ್ರೀಡಾಸಕ್ತಿ ಮನುಷ್ಯರಲ್ಲಿನ ಮನೋಬಲವನ್ನು ವೃದ್ಧಿಸುತ್ತದೆ ಎಂದು ಉದ್ಯಮಿ ವೇದಪ್ರಕಾಶ್ ಶ್ರೀಯಾನ್ ತಿಳಿಸಿದರು.

ಮರೇನ್‍ಲೈನ್ಸ್ ಪಶ್ಚಿಮದ ಮುಂಬಯಿ ಯುನಿವರ್ಸಿಟಿ ಕ್ರೀಡಾಂಗಣದಲ್ಲಿ ಇಂದಿಲ್ಲಿ ಬುಧವಾರ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಯುವಾಭ್ಯುದಯ ಸಮಿತಿ ಆಯೋಜಿಸಿದ್ದ `ಕೋಟಿ-ಚೆನ್ನಯ 2019' ವಾರ್ಷಿಕ ಕ್ರೀಡೋತ್ಸವದಲ್ಲಿ ಮುಖ್ಯ ಅತಿಥಿüಯಾಗಿದ್ದು ಕ್ರೀಡಾಪಥ ಸಂಚಲನಾ ಗೌರವ ಸ್ವೀಕರಿಸಿ, ಧ್ವಜಾರೋಹಣಗೈ ದು ಕ್ರೀಡೋತ್ಸವ ಉದ್ಘಾಟಿಸಿ ವೇದಪ್ರಕಾಶ್ ಮಾತನಾಡಿ ಕ್ರೀಡಾ ಗೆಲ್ಲುಗ (ಚ್ಯಾಂಪಿಯನ್‍ಶಿಪ್) ಪುರುಷ, ಮಹಿಳೆಗೆ ಗೌರವಧನ ಘೋಷಿಸಿದರು.

ಬಿಲ್ಲವರ ಅಸೋಸಿಯೇಶನ್‍ನ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಿದ ಕ್ರೀಡೋತ್ಸವಕ್ಕೆ   ಬಲೂನುಗುಪ್ಛವನ್ನು ಬಾಣೆತ್ತರಕ್ಕೆ ಹಾರಾಡಿಸಿ ಸಾಂಕೇತಿಕವಾಗಿ ವೇದಪ್ರಕಾಶ್ ಚಾಲನೆಯನ್ನೀಡಿ ಅಧಿಕೃತವಾಗಿ ಕ್ರೀಡೋತ್ಸವವನ್ನು ಘೋಷಿಸಿ ಶುಭಕೋರಿದರು. ಭಾರತ್ ಬ್ಯಾಂಕ್‍ನ ನಿರ್ದೇಶಕ, ಬಿಲ್ಲವರ ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷ ಎಲ್.ವಿ ಅವಿೂನ್, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಸಾಯಿಕೇರ್ ಲಾಜಿಸ್ಟಿಕ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಸುರೇಂದ್ರ ಎ.ಪೂಜಾರಿ, ಚಲನಚಿತ್ರ ನಟ-ನಿರ್ಮಾಪಕ, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಡಾ| ರಾಜಶೇಖರ್ ಆರ್. ಕೋಟ್ಯಾನ್, ಹಳೆಯಂಗಡಿ ಬಿಲ್ಲವರ ಸಂಘದ ಅಧ್ಯಕ್ಷ ಚಂದ್ರಶೇಖರ್ ನಾನಿಲ್ ಅತಿಥಿಯು ಅಭ್ಯಾಗತರಾಗಿದ್ದು ಅಸೋಸಿಯೇಶನ್‍ನ ಪದಾಧಿಕಾರಿಗಳು ಮತ್ತು ಬಿಲ್ಲವ ಕ್ರೀಡಾಳುಗಳು ಕೋಟಿ ಚೆನ್ನಯ, ಕಾಂತಾಬಾರೆ ಬೂದಬಾರೆ, ಬ್ರಹ್ಮಶ್ರೀ ನಾರಾಯಣ ಗುರು, ಮಹಾಗಣಪತಿಗೆ ಪೂಜೆ ನೆರವೇರಿಸಿ ಕ್ರೀಡೋತ್ಸವಕ್ಕೆ ಯಶ ಕೋರಿದರು.

ಜಯ ಸಿ.ಸುವರ್ಣ ಅವರ ಮಾರ್ಗದರ್ಶನದಿಂದ ನಮ್ಮ ಸಮಾಜ ಗುರುತರವಾಗಿದ್ದು ಇಂತಹ ಸ್ಪರ್ಧೆಗೆ ಅವರ ಪ್ರೇರಣೆ ಮಹತ್ತರವಾದದು. ಮುಂದೆಯೂ ಇಂತಹ ಉತ್ಸುಕತೆ ಎಲ್ಲರಲ್ಲಿ ಮೇಳೈಸಲಿ ಎಂದು  ನಾನಿಲ್ ತಿಳಿಸಿದರು.

ಎನ್.ಟಿ ಪೂಜಾರಿ ಮಾತನಾಡಿ ಪಥಸಂಚಲನದ ಪ್ರದರ್ಶನ ನಡಿಗೆಯಲ್ಲಿ ಸ್ಥಳೀಯ ಸಮಿತಿಗಳು ನೀತಿಬೋಧನಾ ಮಾಹಿತಿ ಭಿತ್ತರಿಸಿದ್ದಾರೆ. ಎಲ್ಲಾ ಬಿಲ್ಲವರು ಒಗ್ಗೂಡಿ ಜರುಗುವ ಈ ಕ್ರೀಡಾಕೂಟ ಬಿಲ್ಲವರ ಜಾತ್ರೆಯೇ ಸರಿ. ಇದೇ ಸ್ಪೂರ್ತಿ ಮುಂದೆಯೂ ಜೀವಾಳವಾಗಿರಲಿ ಎಂದರು.

ಬಿಲ್ಲವರಿಗೆ ದಾರಿದೀಪವಾದ ಈ ಕ್ರೀಡಾಕೂಟವು ಬಿಲ್ಲವರ ಕೌಟುಂಬಿಕ ಸಮ್ಮೀಲನವೇ ಸರಿ. ಯುವ ಜನತೆಗೆ ಸ್ಪರ್ಶಜ್ಞಾನವಾಗಿ ಭಾವಪ್ರೇರಕವಾಗುವ ಈ ಕೂಟದಿಂದ ನಮ್ಮ ಭಾವೀ ಜನಾಂಗವು ಚಿಂತನಾಶೀಲರಾಗಿ ಸಮಾಜವನ್ನು ಮುನ್ನಡೆಸಬೇಕು. ಇಲ್ಲಿ ಗೆಲುವು ಸೋಲುಕ್ಕಿಂತ ಸ್ಪರ್ಧಾಸಕ್ತಿ, ಪ್ರತಿಭಾನ್ವೇಷನೆ ಪ್ರಧಾನವಾದದ್ದು. ನಾವು ಸುಶಿಕ್ಷಿತರಾಗಿ ಸಮಾಜವನ್ನು ಬಲಾಢ್ಯಗೊಳಿಸುವಲ್ಲೂ ಬಿಲ್ಲವರು ಬದ್ಧರಾಗಬೇಕು ಎಂದು  ಎಲ್.ವಿ ಅವಿೂನ್ ಸಲಹಿಸಿದರು.

ರಾಜಶೇಖರ್ ಕೋಟ್ಯಾನ್ ಮತ್ತು ಸುರೇಂದ್ರ ಪೂಜಾರಿ ಮಾತನಾಡಿ ಭಾಗವಹಿಸಿದ ಎಲ್ಲಾ ಕ್ರೀಡಾ ಪಟುಗಳಿಗೆ ಮತ್ತು ಕ್ರೀಡೋತ್ಸವಕ್ಕೆ ಶುಭೇಚ್ಛ ಕೋರಿದರು.

ಚಂದ್ರಶೇಖರ ಪೂಜಾರಿ ಅಧ್ಯಕ್ಷೀಯ ನುಡಿಗಳನ್ನಾಡಿ ನಾವು ಬರೇ ಸ್ವಸಮಾಜವನ್ನು ಜೊತೆಗೂಡಿಸದೆ ಸಮಾಜೇತರ ಬಂಧುಗಳನ್ನೂ ಒಗ್ಗೂಡಿಸಿ ಸಾಮರಸ್ಯದ ಪ್ರತೀಕವಾಗಿ ವಾರ್ಷಿಕವಾಗಿ ಈ ಕ್ರೀಡಾಕೂಟವನ್ನು ನಡೆಸುತ್ತಿದ್ದೇವೆ. ಇದು ಸೌಹಾರ್ದತಾ ಬಾಳಿಗೆ ಪ್ರೇರಕವಾಗುವುದು. ಭವಿಷ್ಯದಲ್ಲೂ ಇಂತಹದ್ದೇ ಮನೋಧರ್ಮ ದಿಂದ ಇಂತಹ ಉತ್ಸವಗಳು ನಡೆಯಲು ಸಮಾಜ ಬಾಂಧವರ ಸಹಯೋಗವಿರಲಿ ಎಂದು ಆಶಿಸಿದರು ಹಾಗೂ ಅತಿಥಿüಗಳಿಗೆ ಶಾಲು ಹೊದಿಸಿ ಸ್ಮರಣಿಕೆ ಪುಷ್ಪಗುಚ್ಛ ನೀಡಿ ಗೌರವಿಸಿದರು.

ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಶಂಕರ ಡಿ.ಪೂಜಾರಿ, ಹರೀಶ್ ಜಿ.ಅವಿೂನ್, ದಯಾನಂದ್ ಆರ್. ಪೂಜಾರಿ, ಶ್ರೀನಿವಾಸ ಆರ್.ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್.ಶಾಂತಿ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಮಹಿಳಾ ವಿಭಾಗಧ್ಯಕ್ಷೆ  ಜಯಂತಿ ವಿ.ಉಳ್ಳಾಲ್, ಸೇವಾದಳದ ದಳಪತಿ ಗಣೇಶ್ ಕೆ.ಪೂಜಾರಿ, ಭಾರತ್ ಬ್ಯಾಂಕ್‍ನ ನಿರ್ದೇಶಕರಾದ ಜ್ಯೋತಿ ಕೆ.ಸುವರ್ಣ, ನ್ಯಾ| ರಾಜಾ ವಿ.ಸಾಲ್ಯಾನ್, ಎಂ.ಎನ್ ಕರ್ಕೇರ, ಭಾಸ್ಕರ್ ಎಂ.ಸಾಲ್ಯಾನ್, ಸೂರ್ಯಕಾಂತ್ ಜೆ.ಸುವರ್ಣ, ಪ್ರೇಮನಾಥ್ ಪಿ.ಕೋಟ್ಯಾನ್, ಮೋಹನ್‍ದಾಸ್ ಎ.ಪೂಜಾರಿ, ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು, ಭಾರತ್ ಬ್ಯಾಂಕ್‍ನ ಉನ್ನತಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಹಾಜರಿದ್ದು, ಗತ ಕ್ರೀಡೋತ್ಸವದ ಚ್ಯಾಂಪಿಯನ್ ಪವನ್ ಪೂಜಾರಿ ಮತ್ತು ತಂಡವು ಕ್ರೀಡಾಜ್ಯೋತಿ ವೇದಿಗೆ ತಂದಿದ್ದು, ಎನ್.ಟಿ ಪೂಜಾರಿ ಕ್ರೀಡಾಜ್ಯೋತಿ ಬೆಳಗಿಸಿದರು. ರಿಖಿತಾ ಅವಿೂನ್ (ಸನಿಲ್) ಕ್ರೀಡಾ ಪ್ರತಿಜ್ಞೆ ಬೋಧಿಸಿದರು.

ಆರಂಭದಲ್ಲಿ ನಡೆಸಲ್ಪಟ್ಟ ಅತ್ಯಾಕರ್ಷಕ ಪಥಸಂಚಲನದಲ್ಲಿ ಬಿಲ್ಲವ ಕ್ರೀಡಾಪಟುಗಳು, ಅಸೋಸಿಯೆಶನ್‍ನ ಉಪಸಮಿತಿ, ಸ್ಥಳೀಯ ಸಮಿತಿಗಳು, ಭಾರತ್ ಬ್ಯಾಂಕ್ ಮತ್ತು ಸೇವಾದಳ ತಂಡಗಳು, ಸಾಮಾಜಿಕ ಸಂದೇಶ ಸಾರುವ ವೈವಿಧ್ಯಮಯ, ವರ್ಣರಂಜಿತ ಉಡುಗೆ ತೊಟ್ಟು ಕ್ರೀಡೋತ್ಸವಕ್ಕೆ ಮೆರುಗು ನೀಡಿದರು. ಭಾರತ್ ಬ್ಯಾಂಕ್ ಸಿಬ್ಬಂದಿಗಳು, ಅಸೋಸಿಯೇಶನ್‍ನ ಉಪ ಸಮಿತಿ ಹಾಗೂ ಸ್ಥಳೀಯ ಸಮಿತಿಗಳ ಮುಖ್ಯಸ್ಥರು, ಸದಸ್ಯರು, ಅಪಾರ ಸಂಖ್ಯೆಯ ಬಿಲ್ಲವರು ಹಾಜರಿದ್ದು, ನಡೆಸಲಾದ ವಾರ್ಷಿಕ ಕ್ರೀಡೋತ್ಸವದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.