ಮಂಗಳೂರು (ಸೆಪ್ಟೆಂಬರ್ 18):- ಕೇಂದ್ರ ಸರಕಾರದ ಹೊಸ ಶೈಕ್ಷಣಿಕ ನೀತಿಯ ಪ್ರಕಾರ ಜನಪದ, ಸಂಪ್ರದಾಯಿಕ ಕಲೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆಯಾ ಜನಾಂಗ ಭಾಷೆಗೆ ಸಂಬಂಧಿಸಿದಂತೆ ಇರುವ ಕಲಾ ಪ್ರಕಾರಗಳನ್ನು ವಿಶ್ವವಿದ್ಯಾನಿಲಯಗಳಲ್ಲಿ ಸರ್ಟಿಫಿಕೆಟ್ ಅಥವಾ ಡಿಪ್ಲೋಮಾ ಕೋರ್ಸ್ ಮೂಲಕ  ಪ್ರಾರಂಭ ಮಾಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ಬ್ಯಾರಿ ಜನಪದ ಕಲೆಗಳಾದ ದಫ್, ಬುರ್ದಾ, ಒಪ್ಪನೆ ಮತ್ತು ಕೋಲ್ಕಲಿ  ನೃತ್ಯ ಪ್ರಕಾರವನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ಮೂಲಕ ಡಿಪ್ಲೋಮಾ ಅಥವಾ ಸರ್ಟಿಫಿಕೆಟ್ ಕೋರ್ಸ್‍ಗಳಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭ ಮಾಡಬೇಕು.  ಇದರಿಂದಾಗಿ ಬ್ಯಾರಿ ಕಲೆಗೆ ಉತ್ತೇಜನ ನೀಡಿ, ಬ್ಯಾರಿ ಸಂಸ್ಕೃತಿಯ  ಉಳಿವು ಸಾಧ್ಯವಾಗುತ್ತದೆ ಹಾಗೂ ಕಲೆಯ ಬಗ್ಗೆ ಕೀಳರಿಮೆ ಕಡಿಮೆಯಾಗಿ ಮೂಲ ಜನಪದ ಕಲೆಗಳಿಗೆ ಜೀವ ನೀಡಿದಂತಾಗುತ್ತದೆ. ವಿಶ್ವವಿದ್ಯಾನಿಲಗಳಿಂದ ಪ್ರಮಾಣ ಪತ್ರ ನೀಡಿದಲ್ಲಿ ಇದು ವೃತ್ತಿಪರವಾಗಿಯು ಉಪಯೋಗವಾಗುತ್ತದೆ, ಹೆಚ್ಚು ಹೆಚ್ಚು ಸಂಶೋಧನೆ ಮಾಡಿ ಆಳವಾದ ಅಧ್ಯಯನ ನಡೆಸಲು ಸಹಕಾರಿಯಾಗುತ್ತದೆ.

  ಈ ಕೋರ್ಸ್‍ಗೆ ಪೂರಕವಾಗಿ ಬೇಕಾಗುವ ಪಠ್ಯ ಕ್ರಮ, ಸಂಪನ್ಮೂಲ ವ್ಯಕ್ತಿಗಳನ್ನು ಬ್ಯಾರಿ ಅಕಾಡೆಮಿ ವತಿಯಿಂದ ನೀಡಲಾಗುವುದು, ಆದುದರಿಂದ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಈ ಪ್ರಸ್ತಾವನೆಯನ್ನು ಅಕಾಡೆಮಿ ಕೌನ್ಸಿಲ್‍ನಲ್ಲಿ ಒಪ್ಪಿಗೆ ಪಡೆದು ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭ ಮಾಡಬೇಕಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಅವರಿಗೆ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಮನವಿಯನ್ನು ಸಲ್ಲಿಸಿರುತ್ತಾರೆ ಎಂದು  ಪ್ರಕಟಣೆ  ತಿಳಿಸಿದೆ.