ಮಂಗಳೂರು (ಸೆಪ್ಟೆಂಬರ್ 19):- ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಪ್ರಸ್ತವಾನೆ ಮತ್ತು ಅನುಷ್ಠಾನದ ಬಗ್ಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಅಂಗ ಶಾಖೆಯಾದ ಮಂಗಳೂರಿನ ಕ್ಷೇತ್ರ ಜನಸಂಪರ್ಕ ಕಾರ್ಯಾಲಯವು ನಗರದ ಮೀನುಗಾರಿಕಾ ಕಾಲೇಜು ಮತ್ತು ಮೀನುಗಾರಿಕಾ ಇಲಾಖೆಗಳ ಸಹಯೋಗದಿಂದ  ಸೆಪ್ಟಂಬರ್ 18 ರಂದು ಒಂದು ದಿನದ ವೆಬಿನಾರ್‍ಅನ್ನು  ನಡೆಸಿತು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಮೀನುಗಾರಿಕಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೋ.ಎ.ಟಿ. ರಾಮಚಂದ್ರ ನಾಯ್ಕ, ಕಾಲೇಜು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾದ ಯೋಜನೆಗಳ ಪ್ರಸ್ತಾವನೆಯನ್ನು ಮಂಡಿಸಿದರು. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯು ಕೇಂದ್ರ ಸರ್ಕಾರ ಯೋಜನೆಯಾಗಿದ್ದು ಮೀನು ಕೃಷಿಕರಿಗೆ ಮತ್ತು ಮೀನುಗಾರರಿಗೆ 2020 ರಿಂದ 2025 ರವರೆಗೆ ಐದು ವರ್ಷಗಳವರೆಗೆ ಅಸ್ತಿತ್ವದಲ್ಲಿರುತ್ತದೆಂದು ಹೇಳಿದರು.

ಮೀನು ಕೃಷಿಕರ ಮತ್ತು ಮೀನುಗಾರರ ಆದಾಯ ಮತ್ತು ಉದ್ಯೋಗದ ಉತ್ಪಾದನೆಯನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಒಟ್ಟು 24 ವಿವಿಧ ಯೊಜನೆಗಳನ್ನು ಮೀನುಗಾರಿಕೆ ಇಲಾಖೆಯ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮೀನು ಹಿಡುವಳಿಯ ನಂತರದ ನಿರ್ವಹಣೆ ಮತ್ತು ಗುಣಮಟ್ಟದ ಸುಧಾರಣೆಯನ್ನು ಮೀನಿನ ಮೌಲ್ಯ ಸರಪಳಿ ಮಧ್ಯಮಗೊಳಿಸಿ ಬಲಪಡಿಸುವುದು ಒಂದು ಮುಖ್ಯವಾದ ಉದ್ದೇಶ ಎಂದು ಹೇಳಿದರು. ಸುಸ್ಥಿರ ಹಾಗೂ ಜವಾಬ್ದಾರಿಯುತ ಮೀನುಗಾರಿಕೆ, ಅಂತರ್ಗತ ಮತ್ತು ನ್ಯಾಯಯುತ ರೀತಿಯಲ್ಲಿ ಬಳಸುವ ಕಾರ್ಯಗಳನ್ನು ಈ ಯೊಜನೆಗಳಲ್ಲಿ ಸೇರಿಸಲಾಗಿದೆ ಎಂದು ಪ್ರಸ್ತಾಪಿಸಿದರು.

ಮೀನುಗಾರಿಕಾ ಕಾಲೇಜಿನ ಡೀನ್ ಪ್ರೋ.ಎ. ಸೆಂಥಿಲ್ ವೆಲ್ ರವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಿಂದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗಳನ್ನು ಕಾಲೇಜಿನ ವತಿಯಿಂದ ಅನುಷ್ಟಾನ ಮಾಡುವ ವಿಧಾನಗಳನ್ನು ಹೇಳಿದರು. ಕಾಲೇಜಿನಲ್ಲಿರುವ ನುರಿತ ತಜ್ಞರುಗಳ ಸಹಕಾರದಿಂದ ಈಗಿರುವ ಸವಲತ್ತಿನ ಜೊತೆ ನೂತನ ತಂತ್ರಜ್ಞಾನಗಳ ಬಳಕೆಯೊಂದಿಗೆ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದೆಂದು ತಿಳಿಸಿದರು.

ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಪಿ. ಪಾರ್ಶ್ವನಾಥ್ ಮಾತನಾಡಿ, ಕಡಲ ತೀರಪ್ರದೇಶದಲ್ಲಿ ವಾಸವಾಗಿರುವ ಮೀನುಗಾರರ ಜೀವನೋಪಾಯಕ್ಕಾಗಿ ಪಂಜರದಲ್ಲಿ ಮೀನು ಸಾಕಣೆ ಮತ್ತು ಸಮುದ್ರ ಕಳೆಗಳ ಬೆಳವಣಿಗೆಗೆ ಒತ್ತು ನೀಡಬೇಕಾಗುತ್ತದೆ ಎಂದರು. ಮೀನಿನ ಹಿಡುವಳಿ ಮತ್ತು ಮೀನಿನ ತಂಗುದಾಣಗಳ ನೈರ್ಮಲ್ಯತೆಗೆ ಆದ್ಯತೆ ಕೊಡುವುದು ಅನಿವಾರ್ಯ ಎಂದು ಹೇಳಿದರು. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯು ಕರಾವಳಿ ಮೀನುಗಾರರಿಗೆ ಕೊಡುಗೆ ಕೊಟ್ಟಂತಾಗಿದೆ ಎಂದು ತಿಳಿಸಿದರು.

ಸಹಾಯಕ ಮೀನುಗಾರಿಕಾ ನಿರ್ದೇಶಕ ಡಾ. ರಾಮಲಿಂಗ ಮಾತನಾಡಿ, ಯೋಜನೆಯು ಇಲಾಖೆಯಿಂದ ಫಲಾನುಭವಿಗಳಿಗೆ ಅನುಕೂಲವಾಗುವುದರ ಬಗ್ಗೆ ಮಾತನಾಡಿದರು.