ಮಂಗಳೂರು:- ಮಂಗಳೂರು ಧರ್ಮಪ್ರಾಂತ್ಯದ ಸಿ.ಒ.ಡಿ.ಪಿ (ರಿ) ಸರ್ಕಾರೇತರ ಸಂಸ್ಥೆ ಮತ್ತು ಪೆರ್ಮನ್ನೂರು ಧರ್ಮಕೇಂದ್ರದ ಜಂಟಿ ಆಶ್ರಯದಲ್ಲಿ ಉಳ್ಳಾಲ ಹೊೈಗೆಯ ಸಂತ ಪೇತ್ರರ ಪ್ರಾರ್ಥನಾ ಮಂದಿರಕ್ಕೆ ಒಳಪಡುವ 9 ವಾಳೆಯ ಸರ್ವ ಧರ್ಮದವರಿಗೆ ಆರೋಗ್ಯ ಮಾಹಿತಿ ಮತ್ತು ಪರಿಹಾರ ವಿತರಣಾ ಕಾರ್ಯಕ್ರಮವು ದಿನಾಂಕ 27.08.2020 ರಂದು ಸಂತ ಪೇತ್ರರ ಪ್ರಾರ್ಥನಾ ಮಂದಿರ, ಉಳ್ಳಾಲ ಹೊೈಗೆಯಲ್ಲಿ ಜರುಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾ| ಪೀಟರ್ ಪೌಲ್ ಸಲ್ಡಾನಾ, ಪೆರ್ಮನ್ನೂರು ಧರ್ಮಕೇಂದ್ರದ ಧರ್ಮಗುರುಗಳಾದ ಅತೀ ವಂದನೀಯ ಡಾ| ಜೆ.ಬಿ. ಸಲ್ಡಾನಾ, ಸಿ.ಒ.ಡಿ.ಪಿ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ| ಓಸ್ವಲ್ಡ್ ಮೊಂತೇರೊ, ಸಿ.ಒ.ಡಿ.ಪಿ ಸಂಸ್ಥೆಯ ನಿಯೋಜಿತ ನಿರ್ದೇಶಕರಾದ ವಂದನೀಯ ಫಾ| ವಿನ್ಸೆಂಟ್ ಡಿ ಸೋಜ, ಮಂಗಳೂರು ಮಹಾನಗರ ಪಾಲಿಕೆಯ ಸ್ಥಳೀಯ ವಾರ್ಡಿನ ಸದಸ್ಯೆ ವೀಣಾ ಮಂಗಳ, ಉಳ್ಳಾಲ ಪುರಸಭೆಯ ಕೌನ್ಸಿಲರ್ ವೀಣಾ ಡಿ ಸೋಜರವರು, ಪ್ರಾರ್ಥನಾ ಮಂದಿರದ ಮಾಜಿ ಅಧ್ಯಕ್ಷರಾದ ಡೆಮೆಟ್ರಿಯಸ್ ಡಿ ಸೋಜ, ವಿಶ್ವ ಮಹಾಸಂಘದ ಕಾರ್ಯದರ್ಶಿ ಸರಿತಾ ಡಿ ಸೋಜ, ವಾಳೆಯ ಮುಖ್ಯಸ್ಥೆಯರಾದ ಸಿಂತಿಯಾ ಡಿ ಸೋಜ ಹಾಗೂ ಲವೀನಾ ಫೆರಾವೊ ಮತ್ತು ಚರ್ಚ್ ಪಾಲನಾ ಮಂಡಳಿಯ ಮಾಜಿ ಉಪಾಧ್ಯಕ್ಷರಾದ ಮೆಲ್ವಿನ್ ಸಿ ಡಿ ಸೋಜರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಫಾ| ಓಸ್ವಲ್ಡ್ ಮೊಂತೇರೊರವರು ನೆರೆದಂತಹ ಎಲ್ಲರನ್ನೂ ಸ್ವಾಗತಿಸಿದರು. ಇವರು ತಮ್ಮ ಸ್ವಾಗತ ಭಾಷಣದಲ್ಲಿ ಸಿಒಡಿಪಿ ಸಂಸ್ಥೆಯು ಒಂದು ಕ್ರೈಸ್ತ ಸೇವಾ ಸಂಸ್ಥೆಯಾಗಿದ್ದು, ಇತ್ತೀಚಿನ ಕೋವಿಡ್ -19 ಲಾಕ್‍ಡೌನ್ ದಿನಗಳಲ್ಲಿ ಸುಮಾರು 3500 ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್‍ಗಳನ್ನು ಒದಗಿಸಿದೆ. ಬಡವರ ಬಗ್ಗೆ ಕಾಳಜಿಯಿರಿಸಿ ಸದಾ ಅವರ ಅಭಿವೃದ್ಧಿಗಾಗಿ ದುಡಿಯುತ್ತದೆ. ದಾನಿಗಳಿಂದ ದಾನ ಸಂಗ್ರಹಿಸಿ ಪರಿಹಾರ ವಿತರಣಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಜೊತೆಗೆ ಮಾಹಿತಿಯನ್ನು ನೀಡಿ ಆರೋಗ್ಯ ಜಾಗೃತಿಯನ್ನು ನೀಡುತ್ತದೆ ಎಂದರು.
ಫಾ| ಜೆ.ಬಿ ಸಲ್ಡಾನಾ ರವರು ಇತ್ತೀಚಿನ ದಿನಗಳಲ್ಲಿ ಕೊರೋನಾ ಎಂಬ ರೋಗವು ಪ್ರಪಂಚದಲ್ಲಿ ವಿಪರೀತವಾಗಿ ಹರಡುವುದರಿಂದ ಆಗುವ ಹಾನಿಯ ಬಗ್ಗೆ ಹಾಗೂ ಮುಂಜಾಗ್ರತೆಯಾಗಿ ಈ ರೋಗವನ್ನು ತಟ್ಟೆಗಟ್ಟುವ ಬಗ್ಗೆ ಸೂಕ್ತ ಮಾರ್ಗವನ್ನು ಕೈಗೊಳ್ಳಲು ಕರೆ ನೀಡಿದರು.
ಬಿಷಪ್ ಡಾ| ಪೀಟರ್ ಪೌಲ್ ಸಲ್ಡಾನಾರವರು “ಮಾನೋಸ್ ಊನಿದಾಸ್” ಎಂದರೆ ಸ್ಪೇನಿನ ಬಡ ಮಹಿಳೆಯರ “ಒಗ್ಗಟ್ಟಿನ ಕೈಗಳು” ಎಂಬ ಸಂಸ್ಥೆಯಾಗಿದೆ. ಆ ಸಂಸ್ಥೆಯಲ್ಲಿ ಅನೇಕ ಮಹಿಳೆಯರು ಸ್ವಯಂ ಸೇವಕರಾಗಿ ದಾನ ಸಂಗ್ರಹಿಸಿ ಬಡವರ ಅಭಿವೃದ್ಧಿಗಾಗಿ ಕಳುಹಿಸುತ್ತಾರೆ. ಹಾಗೆಯೇ ನಾವು ನಮ್ಮ ಸಮುದಾಯದಲ್ಲಿ, ನಮ್ಮ ಉದಾರ ಕೈಗಳನ್ನು ಚಾಚಿ ಇತರರಿಗೆ ಆಧಾರ ಕೊಡುವಂತಹ ಕೈಗಳಾಗಬೇಕು. ಈ ರೀತಿ ಹಂಚಿಕೊಳ್ಳುವ ಸೇವಾ ಮನೋಭಾವಕ್ಕೆ ದೇವರು ನೂರರಷ್ಟು ಪ್ರತಿಫಲ ನೀಡುತ್ತಾರೆ ಎಂದು ಸಲಹೆ ನೀಡಿದರು.
ವೀಣಾ ಮಂಗಳ ರವರು ಕೋವಿಡ್ ರೋಗದ ಬಗ್ಗೆ ಜಾಗೃತಿ ಹಾಗೂ ಸರಕಾರದಿಂದ ಬಡವರಿಗೆ ಆರೋಗ್ಯದ ಸಮಸ್ಯೆಗೆ ಸಿಗುವ ಸವಲತ್ತುಗಳನ್ನು ಪಡೆಯಲು ಕರೆ ನೀಡಿದರು.
ಸಿ.ಒ.ಡಿ.ಪಿ ಸಂಸ್ಥೆಯ ಯೋಜನಾಧಿಕಾರಿಯಾದ ಲೆನೆಟ್ ಗೊನ್ಸಾಲ್ವಿಸ್ ರವರು ಕೋವಿಡ್19 ರೋಗದ ಬಗ್ಗೆ ಜಾಗೃತಿ ನೀಡಿ, ಮುಂಜಾಗ್ರತಾ ಕ್ರಮವಾಗಿ ಕೆಲವು ಸೂತ್ರಗಳನ್ನು ಆಳವಡಿಸಿ, ಈ ರೋಗವನ್ನು ದೂರವಾಗಿಸಲು ಸಾಧ್ಯವೆಂದು ತಿಳಿಸಿದರು. ಸಿಒಡಿಪಿಯ ಕ್ಯಾನ್ಸರ್ ಯೋಜನೆಯ ಸಂಯೋಜಕಿಯಾದ ಶಿಲ್ಪ ಡಿ ಸೋಜ ಹಾಗೂ ಸಿ.ಒಡಿ.ಪಿಯ ಕಾರ್ಯಕರ್ತೆಯಾದ ಪುಷ್ಪವೇಣಿಯವರು ಕ್ಯಾನ್ಸರ್ ಕಾಯಿಲೆ, ಅದನ್ನು ತಡೆಗಟ್ಟುವುದು, ಚಿಕಿತ್ಸೆ, ರೋಗಿಗಳಿಗೆ ಆತ್ಮವಿಶ್ವಾಸ ತುಂಬುವ ಬಗ್ಗೆ ಹಾಗೂ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆಯುವುದರ ಬಗ್ಗೆ ವಿವರಿಸಿದರು. ಸಾವಯವ ತರಕಾರಿ ಮತ್ತಿತರ ವಸ್ತುಗಳನ್ನು ಉಪಯೋಗಿಸುವುದರಿಂದ ಆರೋಗ್ಯಕರವಾದ ಜೀವನ ಸಾಗಿಸಬಹುದು ಎಂದು ತಿಳಿಸಿದರು.
ಆರು ಹಂತಗಳಲ್ಲಿ ನಡೆಸಿದ ಈ ಪರಿಹಾರ ಕಾರ್ಯಕ್ರಮದಲ್ಲಿ ಸುಮಾರು 350 ಕ್ಕೂ ಹೆಚ್ಚು ಸ್ಥಳೀಯ ಬಡ ಜನರಿಗೆ ಉಚಿತ ಆಹಾರ ಮತ್ತು ಆರೋಗ್ಯ ಸಾಮಾಗ್ರಿಗಳ ಕಿಟ್ನ್‍ಗಳನ್ನು ವಿತರಿಸಲಾಯಿತು. ಸ್ಥಳೀಯ ವಾಳೆಯ ಮುಖ್ಯಸ್ಥೆ ಮೊಲಿ ಸಿಲ್ವಿನ್ ಮೊಂತೇರೊರವರು ಕಾರ್ಯಕ್ರಮವನ್ನು ನಿರೂಪಿಸಿದರು.