ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 83,883 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 1043 ಮಂದಿ ಸಾವನ್ನಪ್ಪಿದ್ದಾರೆ.  ದೇಶದಲ್ಲಿ ಒಟ್ಟು 38,53,407 ಪ್ರಕರಣಗಳಿವೆ, 8,15,538 ಸಕ್ರಿಯ ಪ್ರಕರಣಗಳಿವೆ. 29,70,493 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 67,3766 ಮಂದಿ ಇದುವರೆಗೆ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಕೊರೊನಾವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವುದಕ್ಕೆ ತಪಾಸಣೆ ವೇಗವನ್ನು ಹೆಚ್ಚಿಸುವುದೇ ಮದ್ದು ಎನ್ನಲಾಗುತ್ತಿದೆ. ಈ ಹಿನ್ನೆಲೆ ದೇಶದಲ್ಲಿ ಕೊರೊನಾವೈರಸ್ ಸೋಂಕಿನ ತಪಾಸಣೆ ವೇಗವನ್ನು ಕ್ಷಿಪ್ರಗತಿಯಲ್ಲಿ ಹೆಚ್ಚಿಸಲಾಗುತ್ತಿದೆ.

ಇದುವರೆಗೆ 4,55,09,380 ಮಾದರಿಯನ್ನು ಪರೀಕ್ಷಿಸಲಾಗಿದೆ. ಸೆಪ್ಟೆಂಬರ್ 2 ರಂದು 11,72,179 ಮಾದರಿಯನ್ನು ಪರೀಕ್ಷಿಸಲಾಗಿದೆ. ಮಾರಕ ಕೊರೊನಾ ವೈರಸ್‌ ಭಾರತದಲ್ಲಿ ತನ್ನ ರೌದ್ರನರ್ತನವನ್ನು ಮುಂದುವರಿಸಿದ್ದು, ಗುರುವಾರ ವಿಶ್ವ ದಾಖಲೆ ಬರೆದಿದೆ. ಒಂದೇ ದಿನ ದೇಶದಲ್ಲಿ ದಾಖಲೆಯ 83,883 ಕೊರೊನಾಸೋಂಕಿತರು ಪತ್ತೆಯಾಗಿದ್ದಾರೆ.

ಇದು ಕೊರೊನಾ ವೈರಸ್‌ ಆರಂಭವಾದ ಬಳಿಕ ಜಗತ್ತಿನ ಯಾವುದೇ ದೇಶದಲ್ಲಿ ದಾಖಲಾದ ದೈನಂದಿನ ಅತಿ ಗರಿಷ್ಠ ಸಂಖ್ಯೆಯ ಸೋಂಕು ಎನಿಸಿಕೊಂಡಿದೆ.

ವಿಶ್ವದ ಯಾವುದೇ ದೇಶದಲ್ಲಿ ಒಂದೇ ದಿನ 83 ಸಾವಿರ ಪ್ರಕರಣಗಳು ದಾಖಲಾದ ನಿದರ್ಶನ ಇಲ್ಲ. ಅಮೆರಿಕದಲ್ಲಿ ಜು.24ರಂದು 78,586 ಕೊರೊನಾ ವೈರಸ್‌ ಪ್ರಕರಣಗಳು ದಾಖಲಾಗಿದ್ದು, ವಿಶ್ವದಲ್ಲೇ ಅತಿ ಗರಿಷ್ಠ ಎನಿಸಿಕೊಂಡಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಅಮೆರಿಕ ಮತ್ತು ಬ್ರೆಜಿಲ್‌ಗಿಂತಲೂ ಹೆಚ್ಚಿನ ಸೊಂಕು ಭಾರತದಲ್ಲೇ ದಾಖಲಾಗುತ್ತಿದೆ.

ದೇಶದಲ್ಲಿ ಕೇವಲ ನಾಲ್ಕು ದಿನಗಳಲ್ಲಿ ಮೂರನೇ ಬಾರಿ 80 ಸಾವಿರಕ್ಕಿಂತ ಅಧಿಕ ಪ್ರಕರಣಗಳು ಒಂದೇ ದಿನ ದೃಢಪಟ್ಟಿರುವುದು, ಸೋಂಕಿನ ತೀವ್ರತೆಗೆ ಹಿಡಿದ ಕನ್ನಡಿಯಾಗಿದೆ.