ನವದೆಹಲಿ: ದೇಶದಲ್ಲಿ ಕೊರೋನಾ ಕಾಣಿಸಿಕೊಂಡು 7 ತಿಂಗಳಾದರೂ ಅದರ ಅಬ್ಬರ ಅಡಗಿಲ್ಲ. ಶರವೇಗದಲ್ಲಿ ಸಾಗುತ್ತಿರುವ ಕೊರೊನಾ ಸೋಂಕು ಈಗ ಪ್ರತಿದಿನ 80 ಸಾವಿರಕ್ಕೂ ಹೆಚ್ಚು‌ ಜನರನ್ನು ಬಾಧಿಸುತ್ತಿದೆ. ಪರಿಣಾಮವಾಗಿ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 39 ಲಕ್ಷ‌ದ ಗಡಿಯನ್ನೂ ದಾಟಿದೆ. ದೇಶದಲ್ಲಿ ಆಗಸ್ಟ್ 6 ನಂತರ ಪ್ರತಿ ದಿನ 60 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕು ಪ್ರಕರಣಗಳು ದಾಖಲಾಗುವ ಟ್ರೆಂಡ್ ಶುರುವಾಗಿತ್ತು. ಆಗಸ್ಟ್‌ 19ರ ನಂತರ ಪ್ರತಿದಿನ ಸುಮಾರು70 ಸಾವಿರ ಪ್ರಕರಣಗಳು ಕಾಣಿಸಿಕೊಳ್ಳಲಾರಂಭಿಸಿದವು. ಆಗಸ್ಟ್ 26ರಿಂದ 75 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು.‌

ಈಗ ಸೆಪ್ಟೆಂಬರ್ 2ರಿಂದ 80 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಸೆಪ್ಟೆಂಬರ್ 2ರಂದು ದಾಖಲೆಯ 83,883 ಪ್ರಕರಣಗಳು ಪತ್ತೆಯಾಗಿದ್ದವು. ಸೆಪ್ಟೆಂಬರ್ 3ರಂದು 83,341 ಪ್ರಕರಣಗಳು ವರದಿಯಾಗಿವೆ‌. ದೇಶದ ಕೊರೋನಾ ಪೀಡಿತರ ಸಂಖ್ಯೆ 39,36,748ಕ್ಕೆ ಏರಿಕೆಯಾಗಿದೆ.

ಇದಲ್ಲದೆ ಗುರುವಾರ 1,096 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 68 ಸಾವಿರದ ಗಡಿ‌ ದಾಟಿದ್ದು 68,472ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೋನಾದಿಂದ ಗುಣ ಆದವರು 30,37,152 ಜನ ಮಾತ್ರ. ಇನ್ನೂ ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 8,31,124 ಎಂದು ಕೇಂದ್ರ ಆರೋಗ್ಯ ಇಲಾಖೆಯು ಮಾಹಿತಿ ಬಿಡುಗಡೆ ಮಾಡಿದೆ.