“ಪ್ರಯತ್ನಿಸಿ ಸಾಧನೆ ಗೈದವರಿಗೆ ಜಾತಿ, ಮತ, ಧರ್ಮ ರಹಿತವಾಗಿ ಸರಸ್ವತಿ ಒಲಿಯುತ್ತಾಳೆ” ಎನ್ನುವ ಕಲಾರತ್ನ ಬಿರುದಾಂಕಿತ ಎರ್ಮಾಳು ಹಿದಾಯತುಲ್ಲಾ ಸಾಹೇಬರು ಬಹಳ ಪ್ರಖ್ಯಾತ ನಾದಸ್ವರ ಮತ್ತು ಸ್ಯಾಕ್ಸೋಫೋನ್ ವಾದಕರು. ಜಾತಿ-ಮತ-ಧರ್ಮದ ಅಡ್ಡ ಗೋಡೆ ಕೆಡವಿ, ಹಿಂದೂ-ಮುಸಲ್ಮಾನ ಬಂಧುಗಳ ಸಾಮರಸ್ಯದ ಕೊಂಡಿಯಾಗಿ ಹಿಂದೂ ದೇವಾಲುಗಳಲ್ಲಿ ಭಕ್ತಿಯಿಂದ ಸೇವೆ ಗೈಯುತ್ತಿರುವ ಎರ್ಮಾಳಿನ ಹಿದಾಯತುಲ್ಲಾ ಸಾಹೇಬರು ಹುಟ್ಟಿದ್ದು 1955 ರಲ್ಲಿ. ತಂದೆ ಅಬ್ದುಲ್ ಖಾದರ್ ಹಾಗೂ ತಾಯಿ ಜುಲೇಖಾರವರ ಮಗ ಹಿದಾಯತುಲ್ಲಾ, 5 ನೇ ತರಗತಿಗೇ ಶಾಲಾ ವಿದ್ಯೆಯಿಂದ ವಿಮುಖರಾಗಿ ಅನುವಂಶಿಕ ವಿದ್ಯೆಯಾದ ಸಂಗೀತ ಸರಸ್ವತಿಯ ಮಡಿಲಿಗೆ ಜಾರಿದವರು.
ನಾಗಸ್ವರದಲ್ಲಿ ತಂದೆಯಿಂದ ಸಾಕಷ್ಟು ಕಲಿತು ತರುವಾಯ ತಂಜಾವೂರಿನ ಕೃಷ್ಣರಾಯಪುರದ ಮೇಲುಸ್ವಾಮಿಯವರ ಶಿಷ್ಯನಾಗಿ ಹತ್ತು ವರ್ಷ ನಿರಂತರ ಸ್ಯಾಕ್ಸೋಫೋನ್ ಕಲಿತು ಈಗಲೂ ಆಗಾಗ ಮೇಲುಸ್ವಾಮಿಯವರಿಂದ ಕಲಿಯುತ್ತಿರುವ ಹಿದಾಯತುಲ್ಲಾ ಸಾಹೇಬರು ಸಾಂದರ್ಭಿಕವಾಗಿ ನಾಗಸ್ವರ ಹಾಗೂ ಸ್ಯಾಕ್ಸೋಫೋನ್ ಎರಡರಲ್ಲೂ ಸೈ ಎನ್ನಿಸಿಕೊಂಡರು. ಭಾರತದಾದ್ಯಂತ ಸಂಚರಿಸಿ ಕಾರ್ಯಕ್ರಮವನ್ನು ನೀಡಿ ಜನಮನಸೂರೆಗೊಂಡು ಸುಮಾರು ಐವತ್ತೈದಕ್ಕೂ ಹೆಚ್ಚು ಚಿನ್ನದ ಪದಕಗಳನ್ನು ದೊರಕಿಸಿಕೊಂಡವರು. 2013 ರಲ್ಲಿ ಹುಟ್ಟೂರಿನಿಂದ ದೊರಕಿದ ಸನ್ಮಾನದಿಂದ ಪ್ರಾರಂಭಗೊಂಡ ಅವರ ಸನ್ಮಾನದ ಪರ್ವ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿಗಳೋಂದಿಗೆ ಮುಂದುವರೆಯುತ್ತಲೇ ಸಾಗುತ್ತಿರುವುದು ಸಾಹೇಬರ ಶ್ರೇಷ್ಠತೆಗೆ ಸಂದ ಖದರ್ ಎಂದರೆ ತಪ್ಪಾಗಲಾರದು. ಇಷ್ಟಾದರೂ ಗರೋಡಿ ಹಾಗೂ ದೇವಾಲಯದ ನಾದ ಕೈಂಕರ್ಯವನ್ನು ಬಿಡದೇ ಮುಂದುವರೆಸುತ್ತಾ ಕಟ್ಟಾ ದೈವ-ದೇವರ ಅಭಿಮಾನಿಯಾಗಿದ್ದಾರೆ ಹಿದಾಯತ್ ಸಾಹೇಬರು.
ತಮ್ಮ ಹನ್ನೆರಡನೇ ಪ್ರಾಯದಲ್ಲಿ ತಂದೆ ಹಾಗೂ ಅಣ್ಣನ ಜೊತೆಯಲ್ಲಿ ಎರ್ಮಾಳು ಗರೋಡಿಯಲ್ಲಿ ನಾಗಸ್ವರ ವಾದನ ಸೇವೆಗೈಯಲು ಪ್ರಾರಂಭಿಸಿದ್ದರು. ಗರೊಡಿಗಳಿಗೆ ವಾದನ ಸೇವೆ ಗೈಯಲು ತೆರಳುವಾಗ ತಮ್ಮ ವಂಶ ಪಾರಂಪರ್ಯದ ಕಟ್ಟುಪಾಡುಗಳನ್ನು ಇಂದಿಗೂ ಇವರೆಲ್ಲರೂ ಆಚರಿಸುತ್ತಿದ್ದಾರೆ. ಇದರಿಂದಾಗಿಯೇ “ಗರೋಡಿಗಳಲ್ಲಿ ವಾದ್ಯ ನುಡಿಸುವಾಗ ನಮಗೆ ಬೇಕಾದ ಲಯ ಸಿಗುತ್ತದೆ ಎಂದು ಇಂದಿಗೂ ನಂಬಿದ್ದಾರೆ. ಇಂತಹ ಲಯ ದೊರಕಿದಾಗ ಬಹಳ ಖುಷಿಯಾಗುತ್ತದೆ. ವೃತ್ತಿಗೆ ಪೂರಕವಾದ ತಾಳ, ಮೇಳ, ಲಯದ ವಾತಾವರಣ ದೊರಕಿ ಒಂದಕ್ಕೊಂದು ತಾದಾತ್ಮ್ಯ ಹೊಂದಿ ವಿಶಿಷ್ಟ ಅನುಭವವನ್ನು ಅನುಭವಿಸುತ್ತೇವೆ-ಎನ್ನುತ್ತಾರೆ ಸಾಹೇಬರು.
ನಾವು ಗರೋಡಿಗೆ ಬಂದ ತಕ್ಷಣ ಕೋಟಿ-ಚೆನ್ನಯರಿಗೆ ನಮಿಸಿ ಹಂಸಧ್ವನಿ ರಾಗದಲ್ಲಿ ವಾತಾಪಿ ಗಣಪತಿಯಿಂದ ವಾದನದ ಪ್ರಾರಂಭದ ನುಡಿ. ತರುವಾಯ ಗರೋಡಿಯಲ್ಲಿ ದೀಪ ಬೆಳಗಿಸಿ ದೀಪಕ್ ರಾಗ-ನಾಟ್ಯ ರಾಗ ವಾದಿಸುತ್ತಾರೆ. ದರುಶನ ಪಾತ್ರಿಗಳಿಗೆ ಆವೇಶ ಬರುವ ಸಂದರ್ಭದಲ್ಲಿ ಕಟ್ ವಾದ್ಯ, ಮೋಹನ ರಾಗ, ಕಲ್ಯಾಣ್, ಪೂರ್ವ ಕಲ್ಯಾಣ್ ರಾಗ ನುಡಿಸುತ್ತಾರೆ. ನರ್ತನ ಪಟುಗಳು ಕುಣಿಯುವಾಗ ಕಲ್ಯಾಣಿ ರಾಗವೇ ಉತ್ತಮ. ರಾತ್ರಿ ಸುಮಾರು ಹನ್ನೊಂದು ಗಂಟೆ ತರುವಾಯ ಆನಂದ ಭೈರವಿ, ತೋಡಿ ರಾಗ, ಜನಮನ ಸೂರೆಗೊಳ್ಳುತ್ತದೆ, ಹೊಸ ಲೋಕವೇ ತೆರೆದಿಟ್ಟಂತಾಗುತ್ತದೆ. ಹೀಗಾಗಿ ಜನ ತಮ್ಮ ಜಂಜಡ-ಚಿಂತೆ ಮರೆತು ನೇಮೋತ್ಸವ ಪ್ರಕ್ರಿಯೆಯಲ್ಲಿ ಸಂಪೂರ್ಣ ತೊಡಗುತ್ತಾರೆ. ದರುಶನದ ಉತ್ಕಟಾವಸ್ಥೆಯಲ್ಲಿ ದರುಶನ ಪಾತ್ರಿಗಳು ‘ಸುರಿಯ’ವನ್ನು ಇರಿದುಕೊಳ್ಳುವಾಗ ಚಕ್ರ ಸುತ್ತು ರಾಗ ಸರಿ ಹೊಂದುತ್ತದೆ. ಈ ಪ್ರಕಾರ ಗರೊಡಿಯ ಧಾರ್ಮಿಕ ಭಾವನೆಗೆ ನಾದ ಧರ್ಮದ ಭಾವ ನೀಡಿ ಶ್ರೇಷ್ಠತೆಯನ್ನು ಹೆಚ್ಚಲು ಪ್ರಯತ್ನಿಸುತ್ತಾರಂತೆ ಎರ್ಮಾಳು ದೇವಾಲಯ ಹಾಗೂ ಗರೊಡಿಯ ವಂಶ ಪಾರಂಪರ್ಯ ನಾದ ವಾದಕ ಹಿದಾಯತುಲ್ಲಾರವರು ಹಾಗೂ ಅವರ ಮಕ್ಕಳು. ಅವರ ಇಬ್ಬರು ಮಕ್ಕಳೂ ಇವರಿಗೆ ಸಾಥ್ ಕೊಡುತ್ತಿದ್ದಾರೆ. ನಾದ ಸರಸ್ವತಿಗೆ ಇವರ ಸೇವೆ ಇನ್ನಷ್ಟು ದೊರಕಿ ಇವರಿಗೆ ಆಯುರಾರೋಗ್ಯ ವೃದ್ಧಿಸಲಿ ಎಂದು ನಮ್ಮೆಲ್ಲರ ಹಾರೈಕೆ.
ಲೇಖನ: ರಾಯೀ ರಾಜ ಕುಮಾರ್, ಮೂಡುಬಿದಿರೆ.
(ಲೇಖಕರು: ಹಿರಿಯ ಶಿಕ್ಷಕರು, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರು, ಸಂಪನ್ಮೂಲ ವ್ಯಕ್ತಿ, ಸಮಾಜ ಚಿಂತಕರು, ಲೇಖಕರು,