ಉಡುಪಿ,(ಸೆಪ್ಟೆಂಬರ್, 1): ಕಕ್ಷಕಿದಾರರು ನ್ಯಾಯಾಲಯಕ್ಕೆ ಆಗಮಿಸಿದೇ ತಾವು ಇರುವಲ್ಲಿಂದಲೇ, ಸೆಪ್ಟಂಬರ್ 19 ರಂದು ನಡೆಯುವ ಮೇಘಾ ಇ ಲೋಕ್ ಅದಾಲತ್ ಮೂಲಕ ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರವಾಗಿ ಪರಿಹರಿಸಿಕೊಳ್ಳುವಂತೆ ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಬ್ರಮಣ್ಯ ಜೆ.ಎನ್ ತಿಳಿಸಿದ್ದಾರೆ.
ಅವರು ಮಂಗಳವಾರ ಉಡುಪಿ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಸಾರ್ವಜನಿಕರು ತಮ್ಮ ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯಕ್ಕೆ ಆಗಮಿಸುವುದು ಕಷ್ಟವಾಗಿದ್ದು, ಇ ಲೋಕ್ ಅದಾಲತ್ ಮೂಲಕ ತಮ್ಮ ಪ್ರಕರಣಗಳಿಗೆ ಸಂಬoದಿಸಿದoತೆ ಶೀಘ್ರದಲ್ಲಿ ಪರಿಹಾರ ಪಡೆಯುವಂತೆ ತಿಳಿಸಿದರು.
ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು, ಚೆಕ್ಕು ಅಮಾನ್ಯದ ಪ್ರಕರಣಗಳು, ಉದ್ಯೋಗದಲ್ಲಿ ಪುನತ್ ಸ್ಥಾಪಿಸಲ್ಪಡುವ ಪ್ರಕರಣಗಳು ಸೇರಿದಂತೆ , ಕಾರ್ಮಿಕ ವಿವಾದಗಳು ಹಾಗೂ ಕೈಗಾರಿಕ ಕಾರ್ಮಿಕರ ವೇತನಕ್ಕೆ ಸಂಬoದಿಸಿದ ಕ್ಲೇಮುಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ವೈವಾಹಿಕ/ಕುಟುಂಬ ನ್ಯಾಯಾಲಯ ಪ್ರಕರಣಗಳು (ವಿಚ್ಚೇದನವನ್ನು ಹೊರತುಪಡಿಸಿ), ವೇತನ ಮತ್ತು ಭತ್ಯೆಗಳಿಗೆ ಸಂಬoದಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ ಪ್ರಕರಣಗಳು ಹಾಗೂ ಸಿವಿಲ್ ಪ್ರಕರಣಗಳನ್ನು ರಾಜೀ ಮುಖಾಂತರ ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ಜಿಲ್ಲಾ ನ್ಯಾಯಾಧೀಶರು ಹೇಳಿದರು.
ಮೋಟಾರು ಅಪಘಾತ ಪ್ರಕರಣಗಳನ್ನು ರಾಜೀ ಮಾಡಲು ವಿಮಾ ಕಂಪನಿಯ ವಕೀಲರು ಹಾಗೂ ಅಧಿಕಾರಿಗಳು ಹೆಚ್ಚಿನ ಸಹಕಾರ ನೀಡಬೇಕು, ಇದರಿಂದಾಗಿ ಸಂಕಷ್ಠದಲ್ಲಿರುವವರು ಪರಿಹಗಾರದ ಹಣವನ್ನು ಶೀಘ್ರದಲ್ಲಿ ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ಇತರೆ ಕೇಸ್ ಗಳನ್ನು ಲೋಕ್ ಅದಾಲತ್ ದಲ್ಲಿ ಇತ್ಯರ್ಥ ಪಡಿಸಲು ವಕೀಲರು ಮುಂದಾಗಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ, ಹಿರಿಯ ಸಿವಿಲ್ ನ್ಯಾಯಾಧೀಶರುಗಳಾದ ವಿವೇಕಾನಂದ ಎಸ್ ಪಂಡಿತ್, ಲಾವಣ್ಯ, ಭವಾನಿ ಉಪಸ್ಥಿತರಿದ್ದರು.