ಮಂಗಳೂರು (ಅಕ್ಟೋಬರ್ 28):- ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಅಕ್ಟೋಬರ್ 27 ರಿಂದ ನವೆಂಬರ್ 2 ರವರೆಗೆ ಕರ್ನಾಟಕ ರಾಜ್ಯ ಸೇರಿದಂತೆ ರಾಷ್ಟ್ರದಾದ್ಯಾಂತ ‘ಜಾಗೃತ ಭಾರತ-ಸಮೃದ್ಧ ಭಾರತ’ ಎಂಬ ಶೀರ್ಷಿಕೆಯಡಿಯಲ್ಲಿ ಜಾಗೃತಿ ಅರಿವು ಸಪ್ತಾಹ-2020ಅನ್ನು ಆಚರಿಸಲಾಗುತ್ತಿದೆ.
ನಮ್ಮ ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ಭ್ರಷ್ಟಾಚಾರವು ಒಂದು ಪ್ರಮುಖ ಅಡಚಣೆಯಾಗಿದ್ದು, ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸರ್ಕಾರ, ನಾಗರಿಕರು, ಮತ್ತು ಖಾಸಗಿ ವಲಯದ ಎಲ್ಲಾ ಪಾಲುದಾರರು ಒಟ್ಟಾಗಿ ಕೆಲಸ ಮಾಡಬೇಕಾಗಿರುತ್ತದೆ. ಪ್ರತಿ ನಾಗರಿಕರು ಜಾಗರೂಕನಾಗಿದ್ದು, ಎಲ್ಲಾ ಸಮಯದಲ್ಲಿ ಉನ್ನತ ಗುಣಮಟ್ಟದ ಪ್ರಾಮಾಣಿಕ ಮತ್ತು ನಿಷ್ಠೆಗೆ ಬದ್ಧರಾಗಿರಬೇಕು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಬೆಂಬಲಿಸಬೇಕು. ಸಾರ್ವಜನಿಕ ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಭ್ರಷ್ಟಾಚಾರವನ್ನು ತೊಲಗಿಸಿ ಉತ್ತಮ ಆಡಳಿತಕ್ಕಾಗಿ ಪಾರದರ್ಶಕ ನೀತಿಗಳನ್ನು ರೂಪಿಸಿ ಪರಿಣಾಮಕಾರಿಯಾಗಿ ಅವುಗಳನ್ನು ಜಾರಿಗೊಳಿಸಲು ಮತ್ತು ಇಂದಿನ ವ್ಯವಸ್ಥೆಯನ್ನು ಸುಧಾರಿಸಲು ಸಂಬಂಧಪಟ್ಟವರೆಲ್ಲರನ್ನು ಒಗ್ಗೂಡಿಸಿ ಜಾಗೃತಿ ಮೂಡಿಸುವುದು ಈ ಸಪ್ತಾಹದ ಉದ್ದೇಶವಾಗಿರುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಸರ್ಕಾರಿ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಆಗಬೇಕಾದ ಕೆಲಸದಲ್ಲಿ ವಿಳಂಬವಾಗಿದ್ದರೆ ಅಥವಾ ಅಧಿಕಾರಿಗಳು ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ತೊಂದರೆ ಕೊಡುವುದು ಅಥವಾ ಇನ್ಯಾವುದೇ ತರಹದ ದುರಾಡಳಿತದಲ್ಲಿ ತೊಡಗಿದ್ದರೆ, ಆದರಿಂದ ತೊಂದರೆಗೊಳಗಾದ ಸಾರ್ವಜನಿಕರು ತಮ್ಮ ಅಹವಾಲನ್ನು ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ದೂರು ಅರ್ಜಿಯ ನಮೂನೆ 1 ಮತ್ತು 2 ರಡಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಯಾವುದೇ ದುರುದ್ದೇಶದಿಂದ ಕೂಡಿದ ದೂರುಗಳನ್ನಾಗಲಿ, ವ್ಯರ್ಥ ವಾಗ್ವಾದಗಳನ್ನಾಗಲಿ, ಅನಾಮಧೇಯ ಅರ್ಜಿಗಳನ್ನಾಗಲಿ, ನ್ಯಾಯಾಲಯದಲ್ಲಿ ಈಗಾಗಲೇ ವಿಚಾರಣೆಯಲ್ಲಿರುವ ದೂರುಗಳನ್ನಾಗಲಿ ಮಾನ್ಯ ಮಾಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಯಾವುದೇ ಸಂದೇಹಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ಪೊಲೀಸ್ ಅಧೀಕ್ಷಕರು (ಪ್ರಭಾರ) ಭಾಸ್ಕರ್. ವಿ.ಬಿ ದೂ. ಸಂ. 0824-2950997, 9945900778, ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕಿನ ಪೊಲೀಸ್ ಉಪಾಧೀಕ್ಷಕರು-1 ಎಸ್.ವಿಜಯ ಪ್ರಸಾದ್ ದೂ. ಸಂ 0824-2453420, ಮಂಗಳೂರು, ಮೂಡಬಿದ್ರೆ, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ ಪೊಲೀಸ್ ಉಪಾಧೀಕ್ಷಕರು-2 ಕಲಾವತಿ.ಕೆ ದೂ.ಸಂ. 7026994128, ಮಂಗಳೂರು ಹಾಗೂ ಮೂಡಬಿದ್ರೆ ತಾಲೂಕು ಪೊಲೀಸ್ ನಿರೀಕ್ಷಕರು-1 ಭಾರತಿ.ಜಿ ದೂ.ಸಂ 9449044377, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕು ಪೊಲೀಸ್ ನಿರೀಕ್ಷಕರು-2 ಅಮಾನುಲ್ಲಾ ದೂ.ಸಂ 9448461816, ಕಚೇರಿ ದೂ.ಸಂ 0824-2427237 ಸಂಪರ್ಕಿಸಬಹುದು ಎಂದು ಮಂಗಳೂರು ಲೋಕಾಯುಕ್ತ ದ ಪೊಲೀಸು ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.