ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಮೂಡುಬಿದಿರೆ ಸಮಾಜ ಮಂದಿರದಲ್ಲಿ ಕಳೆದ 61 ವರ್ಷಗಳಿಂದ ಆಚರಿಸಲ್ಪಡುತ್ತಿರುವ ಸಾರ್ವಜನಿಕ ಗಣೇಶೋತ್ಸವವು 62ನೇ ವರ್ಷದಲ್ಲಿ ಅಗೋಸ್ಟ್ 27ರಿಂದ 31 ರ ತನಕ ಸಮಾಜ ಮಂದಿರದಲ್ಲಿ ಜರುಗಲಿದೆ. ತತ್ಸಂಬಂಧಿ ಕರೆಯೋಲೆಯ ಬಿಡುಗಡೆ ಸಮಾರಂಭ ಸಮಾಜ ಮಂದಿರದಲ್ಲಿ ಜುಲೈ 25 ರಂದು ನಡೆಯಿತು.
ಕರೆಯೋಲೆಯ ಬಿಡುಗಡೆಯನ್ನು ಆಳ್ವಾಸ್ ಹೆಲ್ತ್ ಸೆಂಟರ್ ನ ಡಾ. ಹರೀಶ್ ನಾಯಕ್, ಡಾ. ಮುರಳಿ ಕೃಷ್ಣ, ಡಾ. ನಾಗರಾಜ್ ಜಂಟಿಯಾಗಿ ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಈ ಸಂದರ್ಭ ನಡೆದ ಟ್ಯಾಬ್ಲೋ ಹಾಗೂ ಇತರ ಪ್ರದರ್ಶನಗಳ ಆಯೋಜಕರ ಸಭೆಯಲ್ಲಿ ಹಲವಾರು ವಿಷಯಗಳು ಚರ್ಚಿಸಲ್ಪಟ್ಟವು. ಎಲ್ಲರ ಅಭಿಪ್ರಾಯಕ್ಕೆ ಉತ್ತರಿಸಿದ ಮೂಡುಬಿದಿರೆ ವೃತ್ತ ನಿರೀಕ್ಷಕ ಸಂದೇಶ ಪಿ ಜಿ ಅವರು ಮಾತನಾಡಿ ದಿನಾಂಕ 31 ರಂದು ರಾತ್ರಿ ಗಂಟೆ ಎಂಟಕ್ಕೆ ಸರಿಯಾಗಿ ಸಮಾಜ ಮಂದಿರದಿಂದ ಗಣೇಶನ ವಿಸರ್ಜನಾ ಮೆರವಣಿಗೆ ಪ್ರಾರಂಭಗೊಳ್ಳಬೇಕು. ಇಲಾಖೆಯ ಮೇಲಾಧಿಕಾರಿಗಳ ನಿರ್ದೇಶನದಂತೆ 11:30ಕ್ಕೆ ಮೊದಲು ಅಲಂಗಾರಿನಲ್ಲಿ ವಿಸರ್ಜನೆ ಮುಗಿಯಬೇಕು. ಟ್ಯಾಬ್ಲೊ ಹಾಗೂ ವೇಷಗಳಿರುವ ವಾಹನಗಳಿಗೆ ಸಮರ್ಪಕವಾದ ಇನ್ಸೂರೆನ್ಸ್, ಚಾಲನಾ ಪರವಾನಿಗೆ, ಕುಡಿತ ಇರದ ಚಾಲಕ, ಇತ್ಯಾದಿ ವಾಹನದ ಎಲ್ಲವೂ ಸರಿಯಾಗಿರಲಿ. ಡಿಜೆ ಗಳಿಗೆ ಖಂಡಿತ ಅವಕಾಶ ಇಲ್ಲ ಎಂದೂ ಸಾರಿದರು. ಪ್ರತಿ ಟ್ಯಾಬ್ಲೋ ಒಟ್ಟಿಗೆ ಓರ್ವ ಪೊಲೀಸ್ ಇರುತ್ತಾರೆ. ಯಾವುದೇ ವೇಷಗಳಿಗೂ ಮಧ್ಯದಲ್ಲಿ ಸೇರ್ಪಡೆಗೆ ಅವಕಾಶ ಇರುವುದಿಲ್ಲ. ಎಲ್ಲವೂ ನಿಯಮ ಪ್ರಕಾರದಲ್ಲಿ ಮುಂದುವರಿಯುತ್ತಾ ಹೋಗುವಂತೆ ಎಲ್ಲಾ ಟ್ಯಾಬ್ಲೊ ಆಯೋಜಕರು ಸಹಕರಿಸಬೇಕು ಎಂದು ಕೇಳಿಕೊಂಡರು.
ಸಭೆಯನ್ನುದೇಶಿಸಿ ಮಾತನಾಡಿದ ಗಣೇಶೋತ್ಸವ ಟ್ರಸ್ಟ್ ಅಧ್ಯಕ್ಷ, ಉದ್ಯಮಿ ನಾರಾಯಣ ಪಿ ಎಂ ಊರಿನ ಜಾತ್ರೆಯಂತೆ ಸಂಭ್ರಮ ಸಡಗರದಿಂದ ಕಾರ್ಯಕ್ರಮವನ್ನು ಸಮಯಕ್ಕೆ ಸರಿಯಾಗಿ ಮುಗಿಸಲು ಪ್ರತಿಯೊಬ್ಬರು ಸಹಕರಿಸಬೇಕೆಂದು ಕೇಳಿಕೊಂಡರು. ಟ್ಯಾಬ್ಲೊ ಹಾಗೂ ಇತರ ವೇಷಗಳಲ್ಲಿಯೂ ಕೂಡ ಉತ್ತಮ ವಿಷಯವನ್ನು ಹೊಂದಿರುವದಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿ. ಪ್ರತಿಯೊಬ್ಬರಿಗೂ ಆಮಂತ್ರಣ ಪತ್ರಿಕೆ ಸಿಗುವಂತೆ ಎಲ್ಲರೂ ಖುದ್ದಾಗಿ ವಿತರಿಸಬೇಕು. ಶಾಲಾ ಮಕ್ಕಳಿಗೆ ಪ್ರತ್ಯೇಕ ಊಟದ ಕೌಂಟರ್ ಕೂಡ ತೆರೆಯಲಾಗುವುದು ಎಂದು ತಿಳಿಸಿದರು. ಒಟ್ಟಾರೆ ಸಂತೋಷ ಸಂಭ್ರಮದಿಂದ ಎಲ್ಲರೂ ಭಾಗಿಗಳಾಗಿ ಕಾರ್ಯಕ್ರಮ ಚಂದಗೊಳ್ಳಬೇಕೆಂದು ಮನವಿ ಮಾಡಿಕೊಂಡರು.
ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಶ್ರೀಪತಿ ಭಟ್, ಅರಮನೆಯ ಕುಲದೀಪ್ ಎಂ, ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಮ್. ಹಾಜರಿದ್ದರು. ಸಮಿತಿಯ ಅಧ್ಯಕ್ಷ ನಾರಾಯಣ ಪಿ ಎಂ ಸ್ವಾಗತಿಸಿದರು. ದಿವಾಕರ ಶೆಟ್ಟಿ ವಂದಿಸಿದರು.