ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಕಳೆದ ಐದಾರು ತಿಂಗಳುಗಳಿಂದ ಮೂಡುಬಿದಿರೆ ತಾಲೂಕಿನ ಎಲ್ಲಾ ಗ್ರಾಮಗಳ ಗ್ರಾಮ ಸಭೆಗಳಲ್ಲಿ ಲೋಕೋಪಯೋಗಿ ಇಲಾಖೆಯ ಯಾವುದೇ ಅಧಿಕಾರಿಯು ಕೂಡ ಭಾಗವಹಿಸಿರುವುದಿಲ್ಲ. ಮೂಡುಬಿದಿರೆಯನ್ನು ಸಂಪರ್ಕಿಸುವ ಎಲ್ಲಾ ಕಡೆಯ ರಸ್ತೆಗಳು ಹೊಂಡ ಗುಂಡಿಗಳಿಂದ ಆವೃತವಾಗಿದ್ದು ನಡೆದಾಡುವುದೇ ದುಸ್ತರವಾಗಿದೆ. ಈಗಾಗಲೇ ಹಲವಾರು ಬಾರಿ ಈ ಬಗ್ಗೆ ಚಿತ್ರ ಸಹಿತ ವರದಿ ಪ್ರಕಟವಾಗಿದ್ದರೂ ಕೂಡ ಲೋಕೋಪಯೋಗಿ ಇಲಾಖೆಯಾಗಲಿ, ಶಾಸಕರಾಗಲಿ ಗಮನಹರಿಸುವುದು ಕಂಡುಬಂದಿರುವುದಿಲ್ಲ. ಇದರಿಂದಾಗಿ ಸ್ವತಹ ಈ ವರದಿಗಾರರೆ "ಲೋಕೋಪಯೋಗಿ ಇಲಾಖೆ ಲೋಕ ಸಂಚಾರಕ್ಕೆ ತೆರಳಿದೆ" ಎಂಬ ಶಿರೋನಾಮೆಯಲ್ಲಿ ಒಮ್ಮೆ ವರದಿಯನ್ನು ಪ್ರಕಟಿಸಿರುವುದು ನೆನಪಿಸಿಕೊಳ್ಳಬಹುದು. ಹೆಚ್ಚಿನ ಪಕ್ಷ ಮಂಗಳೂರು ಶಿವಮೊಗ್ಗಗಳಲ್ಲಿ ನಡೆದ ರಸ್ತೆ ಅಪಘಾತದ ಪುನರಾವರ್ತನೆಯನ್ನು ಮೂಡುಬಿದಿರೆಯಲ್ಲಿ ಅಪೇಕ್ಷಿಸುತ್ತಿದ್ದಾರೆಯೇ??
ಮೂಡುಬಿದಿರೆಯಲ್ಲಿರುವ ರಾಜ್ಯ ಹೆದ್ದಾರಿಯ ಬದಿಗಳಲ್ಲಿ ಸೂಕ್ತ ಚರಂಡಿಯ ವ್ಯವಸ್ಥೆ ಗಳಿಲ್ಲ. ಹಳೆ ಬಸ್ಸು ನಿಲ್ದಾಣ ಹಾಗೂ ಹೊಸ ಹೊಸ ನಿಲ್ದಾಣದ ನಡುವಿನ ಮುಖ್ಯ ರಸ್ತೆಯ ಒಳ ಚರಂಡಿಯ ಚಪ್ಪಡಿ ಕಲ್ಲುಗಳು ಮುರಿದು, ಎರಡು ವರ್ಷಗಳೇ ಕಳೆದುವು ಈ ಬಗ್ಗೆ ಹಲವಾರು ಸಲ ನಿರೀಕ್ಷಣಾ ಮಂದಿರದಲ್ಲಿ ಆಗಮಿಸುತ್ತಾರೆ ಎನ್ನುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಯನ್ನು ಸಂಪರ್ಕಿಸುವ ಪ್ರಯತ್ನ ಮಾಡಿದರೆ ಅವರು ಅಲ್ಲಿ ಲಭ್ಯವೇ ಇಲ್ಲ. ಅವರು ಆಗಮಿಸುವ ದಿನದ ಬಗ್ಗೆ ಆಗಲಿ, ವಾರದ ಬಗ್ಗೆ ಆಗಲಿ, ಯಾವುದೇ ಮಾಹಿತಿಗಳು ಅಲ್ಲಿರುವ ದಿನಗೂಲಿ ನೌಕರರಿಗೆ ತಿಳಿದಿಲ್ಲ. ಆ ಬಗ್ಗೆ ವಿವರಿಸುವ ಬೋರ್ಡ್ ಕೂಡ ಅಲ್ಲಿ ಲಭ್ಯವಿಲ್ಲ. ಅವರನ್ನು ಸಂಪರ್ಕಿಸುವ ಮಾಹಿತಿಯೂ ಇಲ್ಲ. ಹಾಗಾದರೆ ನಿರೀಕ್ಷಣ ಮಂದಿರದ ಜವಾಬ್ದಾರಿಯನ್ನು ಯಾರು ನೋಡಿಕೊಳ್ಳುತ್ತಾರೆ??
ಈಗಾಗಲೇ ಮೂಡುಬಿದಿರೆ ಸಂಪರ್ಕಿಸುವ ಎಲ್ಲಾ ರಸ್ತೆಗಳು ವಾಹನ ಚಲಿಸಲು ಅಯೋಗ್ಯವಾಗಿವೆ. ಶಾಸಕರು, ಜನಪ್ರತಿನಿಧಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು????