ಮುಂಬಯಿ: ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶರಾಗಿದ್ದು ಶ್ರೀ ಕೃಷ್ಣೈಕ್ಯರಾದ ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ನಾಲ್ಕನೇ ಆರಾಧನಾ ಮಹೋತ್ಸವವು ಕಳೆದ ಭಾನುವಾರ ಸಾಂತಾಕ್ರೂಜ್ ಪೂರ್ವದ ಮಧ್ವ ಭವನದ (ಪೇಜಾವರ ಮಠ) ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ ಪೇಜಾವರಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಮಾರ್ಗದರ್ಶನದಂತೆ ಬೆಳಗ್ಗಿನಿಂದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಸಲ್ಪಟ್ಟಿತು.

ಶ್ರೀ ಪೇಜಾವರ ಮಠದ ಪ್ರಧಾನ ವ್ಯವಸ್ಥಾಪಕ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಅವರು ಗುರುಗಳ ಸಂಸ್ಮರಣೆ, ಉಪನ್ಯಾಸ ನೀಡುತ್ತಾ ಹಿಂದೂ ಧರ್ಮದ ಧಾರ್ಮಿಕ ಗುರುಗಳು ಅಲ್ಲಲ್ಲಿ ಮಠಗಳನ್ನು ಕಟ್ಟಿರಬಹುದು ಆದರೆ ಸಮರ್ಥ ರೀತಿಯಲ್ಲಿ ತನ್ನ ಉತ್ತರಾಧಿಕಾರಿಯಾಗಿ ನೇಮಿಸುವುದರೊಂದಿಗೆ ದೊಡ್ಡ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಾ ಅದರಲ್ಲಿ ಧಾರ್ಮಿಕ ವಿಧಿಗಳನ್ನು ನಡೆಸುವ ಅವಕಾಶವನ್ನು ನೀಡಿದ ಗುರುಗಳೆಂದರೆ ಅದು ಪೇಜಾವರ ವಿಶ್ವೇಶತೀರ್ಥರು. ದೇಶದ ಎಲ್ಲಾ ಕಡೆ ದೀಪದ ಜ್ಞಾನವನ್ನು ಪಸರಿಸಿದ ಅವರು ನಿಜಕ್ಕೂ ದೇವರಿಗೆ ಸಮಾನರಾದವರು. ಶ್ರೀ ವಿಶ್ವೇಶತೀರ್ಥ ಅವರ ನಾಲ್ಕನೆಯ ಆರಾಧನಾ ಮಹೋತ್ಸವ ಸಾಧಕ ಸಂತನ ಸ್ಮರಣೆಯಾಗಿದೆ. ಅರ್ವತ್ತು ವರ್ಷಗಳ ಕಾಲ ನಮ್ಮ ಭಾರತ ದೇಶದಲ್ಲಿ ಪೇಜಾವರ ಸ್ವಾಮಿಗಳ ಎದುರು ನಿಂತು ವಾದ ಮಾಡುವ ವ್ಯಕ್ತಿಗಳು ಇರಲಿಲ್ಲ. ವಾದ ಮಾಡುವ ಧೈರ್ಯವೂ ಯಾರಿಗೂ ಇರಲಿಲ್ಲ. ಹಿಂದೂ ಪರಂಪರೆಯನ್ನು ಉಳಿಸುವ ಕೆಲಸವನ್ನು ಮಾಡಿದ್ದು ಮಾತ್ರವಲ್ಲದೆ ನಮ್ಮ ಸಮಾಜದ ಪರಂಪರೆಯನ್ನು ಉಳಿಸುವ ಹೊಣೆಗಾರಿಕೆಯನ್ನು ನೆರವೇರಿಸಿದ್ದಾರೆ. ಇದು ನಮ್ಮ ಪರಂಪರೆಗೆ ಕೊಟ್ಟ ದೊಡ್ದ ಕೊಡುಗೆ ಎಂದರು. ಹಾಗೂ ಮಧ್ಯಾಹ್ನ ಮಹಾಪೂಜೆ ನೆರವೇರಿಸಿ ತೀರ್ಥ ಪ್ರಸಾದ ವಿತರಿಸಿ ನೆರೆದ ಸದ್ಭಕ್ತರನ್ನು ಹರಸಿದರು. 

ಬೃಹನ್ಮುಂಬಯಿಯಲ್ಲಿನ ಪೇಜಾವರ ಯತಿವರೇಣ್ಯರ ಶಿಷ್ಯವೃಂದ ಮತ್ತು ವಿಪ್ರ ವೃಂದದ ಸಹಯೋಗದಿಂದ ವಿಷ್ಣು ಸಾಯುಜ್ಯ ಪೂಜೆ ನಡೆಸಲಾಗಿದ್ದು, ಮದ್ದೇಶ ಭಜನಾ ಮಂಡಳಿ ಪೇಜಾವರ ಮಠದವರಿಂದ ಭಜನೆ ನಡೆಸಿತು.

ಈ ಸಂದರ್ಭದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ  ಗೌರವಾಧ್ಯಕ್ಷ ಡಾ| ಎ.ಎಸ್ ರಾವ್, ಕಾರ್ಯದರ್ಶಿ ಬಿ.ಆರ್ ಗುರುಮೂರ್ತಿ, ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ, ಪೇಜಾವರ ಮಠ ಮುಂಬಯಿ ಶಾಖಾ ವ್ಯವಸ್ಥಾಪಕರಾದ ವಿದ್ವಾನ್ ಪ್ರಕಾಶ ಆಚಾರ್ಯ ರಾಮಕುಂಜ, ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಗುರುಭಕ್ತರು ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿದರು