ಮಂಗಳೂರು:- "ಸ್ವರ್ಗಕ್ಕಿಂತ ತಾಯ್ನಾಡು ನನಗೆ ಮುಖ್ಯ ಎಂದ ಶ್ರೀ ರಾಮನ ಅಯೋಧ್ಯೆಯ ಮಂದಿರ ನಿರ್ಮಾಣದಲ್ಲಿ ನಿಮ್ಮೆಲ್ಲರ ಪಾಲ್ಗೊಳ್ಳುವಿಕೆ ಅತ್ಯಗತ್ಯ" ಎಂದು ಪೇಜಾವರ ಸ್ವಾಮೀಜಿ ವಿಶ್ವ ಪ್ರಸನ್ನ ತೀರ್ಥರು ಕರೆ ನೀಡಿದರು. 

ವಿಶ್ವ ಹಿಂದೂ ಪರಿಷತ್ತಿನ ಕದ್ರಿಯ ವಿಶ್ವಶ್ರೀಯಲ್ಲಿ ರಾಮಭೂಮಿ ತೀರ್ಥ ಕ್ಷೇತ್ರನ ಪರವಾಗಿ ನಿಧಿ ಸಮರ್ಪಣಾ ಅಭಿಯಾನದ ಕಚೇರಿ ಉದ್ಘಾಟಿಸಿ ವಿಶ್ವ ಪ್ರಸನ್ನ ತೀರ್ಥರು ಆಶೀರ್ವಚನ ನೀಡಿದರು. "ರಾಮ ಮಂದಿರ ಸಿರಿವಂತರು ಕಟ್ಟಬಹುದು, ಆದರೆ ಅದು ಎಲ್ಲರದಾಗಿರಬೇಕು. ಕನಿಷ್ಠ ರೂ. 10 ಆದರೂ ಜನ ನೀಡಿದರೆ ಅದು ಎಲ್ಲರ ಮಂದಿರ ಆಗುತ್ತದೆ. ನಿಮ್ಮ ಶಕ್ತ್ಯಾನುಸಾರ ಅಳಿಲು ಸೇವೆ ಸಲ್ಲಿಸಿ" ಎಂದು ಸ್ವಾಮೀಜಿ ಕರೆ ನೀಡಿದರು. 

ಆರಂಭದಲ್ಲಿ ಶಿವಾನಂದ ಮೆಂಡನ್ ಸ್ವಾಗತಿಸಿದರು. ಪ್ರೊ. ಎಂ. ಬಿ. ಪುರಾಣಿಕ್ ಪ್ರಾಸ್ತಾವಿಕವಾಗಿ ರಾಮ ಜನ್ಮ ಭೂಮಿಯ ಹೋರಾಟದ ಬಗ್ಗೆ ಹೇಳಿ, "ಮಂದಿರ ನಿರ್ಮಾಣದ ಟ್ರಸ್ಟ್ ನಲ್ಲಿ ಇರುವ ಏಕೈಕ ಸದಸ್ಯರೆಂದರೆ ನಮ್ಮ ಸ್ವಾಮೀಜಿ ಎಂಬುದು ಭಾಗ್ಯ "ಎಂದರು. 

ವಾಮನ ಶೆಣೈ, ಗೋಪಾಲ ಚೆಟ್ಟಿಯಾರ್, ಶರಣ್ ಪಂಪ್ ವೆಲ್ ವೇದಿಕೆಯಲ್ಲಿ ಇದ್ದರೆ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್ ಮೊದಲಾದ ಬಿಜೆಪಿ ನಾಯಕರು ಇದರಲ್ಲಿ ಭಾಗವಹಿಸಿದ್ದರು.