ಭಾರತ ದೇಶದ ಆಂತರಿಕ ಭದ್ರತೆಯನ್ನು ರಕ್ಷಿಸಲು ನೆರವಾಗುವ ನಾಗರಿಕರ ಸುಸಂಘಟಿತ ಸ್ವಯಂಸೇವಕ ದಳ. ಇದು ಮುಂಬಯಿಯಲ್ಲಿ 1946 ರ ಡಿಸೆಂಬರ್ ನಲ್ಲಿ ಶುರುವಾಯಿತು. ಮುಂಬಯಿಯಲ್ಲಿ  ಗಲಭೆ ಹೆಚ್ಚಾಗಿ ತತ್ತರಿಸುತ್ತಿದ್ದಾಗ ಕೆಲವು ನಾಗರಿಕ ಪ್ರಜ್ಞೆ ಇರುವ ಹಾಗೂ ಸಮಾಜ ಸೇವಾ ಮನೋಭಾವ ಇರೋ ಯುವಕರು ಜನರ ಮಾನ, ಪ್ರಾಣ, ಆಸ್ತಿ ಅಂತಸ್ತು ರಕ್ಷಣೆ ಮಾಡಲು ಮುಂದೆ ಬಂದರು. ಇಂತವರನ್ನು ಮಹಾರಾಷ್ಟ್ರ ಸರಕಾರ ಒಂದು ಸ್ವಯಂ ಸೇವಕ ದಳದ ಅಗತ್ಯತೆಯನ್ನು ಮನಗೊಂಡು ಮುಂಬಯಿ ಗೃಹ ರಕ್ಷಕ ದಳದ ಖಾಯಿದೆಯನ್ನು ಜಾರಿಗೆ ತಂದರು. ನಂತರ ಇದನ್ನು ಶಾಸನ ಬದ್ಧ ದಳವನ್ನಾಗಿ ಪರಿವರ್ತಿಸಿತು. ತದನಂತರ ಎಲ್ಲಾ ರಾಜ್ಯಗಳಲ್ಲೂ ಈ ಖಾಯಿದೆಯನ್ನು ಜಾರಿಗೆ ತಂದರು. ಮೊದಲು ಪೊಲೀಸ್ ರ ಜೊತೆ ತುರ್ತು ಪರಿಸ್ಥಿತಿಯಲ್ಲಿ  ಮಾತ್ರ ಇವರನ್ನು ಉಪಯೋಗಿಸಿಕೊಳ್ಳುತ್ತಿದ್ದರು. ಕ್ರಮೇಣ ಗೃಹ ರಕ್ಷಕ ದಳದ ಸೇವೆಯನ್ನು ಎಲ್ಲಾ ರೀತಿಯ ಪರಿಸ್ಥಿತಿಗಳಲ್ಲಿ ಪೋಲೀಸರ ಮತ್ತು ರಾಷ್ಟ್ರ ರಕ್ಷಣಾ ಪಡೆಗಳ ಜೊತೆ ಉಪಯೋಗಿಸಿಕೊಳ್ಳಲಾಗುತಿತ್ತು.

Source: TOI

ಗೃಹರಕ್ಷಕ ದಳಕ್ಕೆ ಸೇರಲು ವಯಸ್ಸು 20-50ರ ಅಂತರದಲ್ಲಿರಬೇಕು. ಯಾವ ರೀತಿಯಿಂದಲೂ ನ್ಯಾಯಾಲಯದಿಂದ ಅವರು ಶಿಕ್ಷೆಗೆ ಒಳಗಾಗಿರಬಾರದು. ಸಮಾಜಕಂಟಕ ವ್ಯಕ್ತಿಗಳಾಗಿರಬಾರದು. ಅಂಟು ರೋಗ-ರುಜಿನಗಳೂ ಅಂಗ ನ್ಯೂನತೆಯೂ ಇರಬಾರದು. ನಿರ್ದಿಷ್ಟ ದೇಹದ ಅಳತೆಯಿಂದ ಕೂಡಿ ದೃಢಕಾಯ ರಾಗಿರಬೇಕು. ಓದು ಬರಹ ತಿಳಿದಿರಬೇಕು. ಇವರಿಗೆ ಸಮವಸ್ತ್ರ ಭುಜಕೀರ್ತಿ ಉಚಿತವಾಗಿ ನೀಡಲಾಗುವುದು. ಭಾರತಾದ್ಯಂತ ಸಮವಸ್ತ್ರ ಒಂದೇ ರೀತಿ ಇರುವುದರಿಂದ ಹಾಗೂ ಒಂದೇ ರೀತಿಯ ಶಿಕ್ಷಣ ನೀಡುವುದರಿಂದ ಗೃಹರಕ್ಷಕ ದಳ ನಿಜಕ್ಕೂ ಇತರ ರಾಷ್ಟ್ರೀಯ ಬಲಗಳಾದ ರಕ್ಷಣಾಬಲಗಳು ಮತ್ತು ಪ್ರಾದೇಶಿಕ ಸೇನೆಗಳಂತೆ ಅಖಿಲ ಭಾರತೀಯವಾಗಿ ಇರುವುದು.

ಗೃಹ ರಕ್ಷಕ ದಳ ಕೇಂದ್ರದ ಗೃಹ ಮಂತ್ರಾಲಯ ವಿಭಾಗಕ್ಕೆ ಸೇರಿದ್ದಾಗಿದೆ. ನಾಗರಿಕ ರಕ್ಷಣಾ ಪ್ರಧಾನ ಕಾರ್ಯನಿರ್ವಹಣ ಅಧಿಕಾರಿಗಳು (ಡೈರೆಕ್ಟರ್-ಜನರಲ್, ಸಿವಿಲ್ ಡಿಫೆನ್ಸ್‌) ಕೇಂದ್ರದಿಂದ ಇಡೀ ರಾಷ್ಟ್ರದ ಗೃಹರಕ್ಷಕ ದಳವನ್ನು ನಿಯಂತ್ರಿಸುತ್ತಾರೆ. ರಾಜ್ಯಗಳ ಪ್ರಮುಖ ಜಿಲ್ಲೆಗಳಲ್ಲಿ ಜಿಲ್ಲಾ ಕಮಾಂಡೆಂಟರವರು ಇದ್ದು, ಡೆಪ್ಯುಟಿ ಕಮಾಂಡೆಂಟ್, ಅಡ್ಜ್ಯುಟೆಂಟ್ ಸ್ಟಾಫ್ ಆಫೀಸರ್ಸ್‌ ಇವರುಗಳ ನೆರವಿನಿಂದ ಜಿಲ್ಲಾ ಗೃಹರಕ್ಷಕ ದಳದ ತರಬೇತಿ, ನಿಯಂತ್ರಣ ಮತ್ತು ಆಡಳಿತವನ್ನು ನೋಡಿಕೊಳ್ಳುತ್ತಾರೆ.

ಎಲ್ಲ ಗೃಹರಕ್ಷಕ ಸದಸ್ಯರಿಗೆ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ತರಬೇತು ನೀಡಲಾಗುವುದು. ವಾರಕ್ಕೆ 3 ರಿಂದ 4 ದಿವಸಗಳು ಬೆಳಗ್ಗೆ ನಿಯಮಿತ ಪೆರೇಡ್ ಇರುತ್ತದೆ. ದೈಹಿಕ ಆರೋಗ್ಯ, ದೃಢತೆ ಮತ್ತು ಶ್ರಮದಾಯಕ ಕೆಲಸಕ್ಕೆ ಸಹಾಯಕವಾಗುವ ರೀತಿ ಈ ಶಿಕ್ಷಣ ಇರುತ್ತದೆ . ಇದರ ಜೊತೆಗೆ  ಪ್ರಥಮ ಚಿಕಿತ್ಸೆ, ಅಗ್ನಿಶಮನ ಮತ್ತು ರಕ್ಷಣೆ, ಲಾಠಿ, ಬಂದೂಕು ಇವನ್ನು ಉಪಯೋಗಿಸುವ ವಿಧಾನ ಮುಂತಾದವನ್ನು ಪರಿಣತರಿಂದ ಹೇಳಿಕೊಡಲಾಗುವುದು. ಶಸ್ತ್ರಸಹಿತ ಕವಾಯತಿ, ಜನರ ಗುಂಪಿನ ಹತೋಟಿ ಮತ್ತು ಹದ್ದುಮೀರಿದ ಗುಂಪನ್ನು ಶಾಂತಿರಕ್ಷಣೆಗಾಗಿ ಚದುರಿಸುವುದು ಮುಂತಾದವನ್ನು ಸಹ ಕಲಿಸುತ್ತಾರೆ.

ಗೃಹ ರಕ್ಷಕ ದಳದವರಿಗೆ ಸರಿಯಾದ ಸರ್ಕಾರಿ ಸಂಬಳವಿಲ್ಲ.  ಭತ್ಯಗಳು ಮಾತ್ರ ದೊರೆಯುತ್ತವೆ. ಸೇನಾದಳಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದಂಥವರಿಗೂ ಮಧ್ಯದಲ್ಲೇ ಸೇನೆಯಿಂದ ನಿವೃತ್ತಗೊಂಡ ಸೈನಿಕರಿಗೂ ಗೃಹರಕ್ಷಕ ದಳದಲ್ಲಿ ವಿಶೇಷ ಸ್ಥಾನಮಾನ ಕೊಡಲಾಗುವುದು. ಮಹಿಳೆಯರೂ ಗೃಹರಕ್ಷಕ ದಳದಲ್ಲಿ ಸೇವೆ ಮಾಡುತ್ತಿರುವರು.

ಕೇಂದ್ರ ಮತ್ತು ರಾಜ್ಯಗಳ ಮಹತ್ವಪುರ್ಣ ಪೆರೇಡುಗಳಲ್ಲಿ ಗೃಹರಕ್ಷಕ ದಳ ಭಾಗವಹಿಸುತ್ತದೆ. ಪೋಲಿಸ್ ಸೈನಿಕರ ಜೊತೆಗೂಡಿ ಪ್ರವಾಹಗಳ ಹಾವಳಿಗೆ ಸಿಕ್ಕಿದ ಜನರ ಪ್ರಾಣ ಆಸ್ತಿ ಇವುಗಳ ರಕ್ಷಣಾ ಕಾರ್ಯದಲ್ಲಿ ನೆರವಾಗುತ್ತದೆ. ರಾಜ್ಯ ಮತ್ತು ಕೇಂದ್ರ ಚುನಾವಣೆಗಳಲ್ಲಿ ಇದು ಸೇವೆ ಸಲ್ಲಿಸುತ್ತದೆ. ರಸ್ತೆಯಲ್ಲಿ ಜನ ಹಾಗೂ ವಾಹನ ನಿಯಂತ್ರಣ ಮಾಡಲಿಕ್ಕೂ ಗಲಭೆ ದೊಂಬಿ ಮುಂತಾದವನ್ನು ಹತ್ತಿಕ್ಕಿ ಶಾಂತಿಪಾಲಿಸಲಿಕ್ಕೂ ಇದರ ಉಪಯೋಗ ಪಡೆಯುತ್ತಾರೆ. ಗೃಹರಕ್ಷಕ ದಳದ ಸೇವೆಯನ್ನು ಇಂದು ಪೋಲಿಸರ ಬದಲಾಗಿ ಅಲ್ಲದೇ ಅವರ ಸಂಖ್ಯೆ ಸಾಲದೆ ಬಂದಾಗ ಕೂಡ ಉಪಯೋಗಿಸಿಕೊಳ್ಳುವುದಿದೆ. ಗೃಹ ರಕ್ಷಕ ದಳದ ಸೇವೆ ಅಪಾರ. ಆದರೆ ಅವರಿಗೆ ಸಿಗಬೇಕಾದ ಗೌರವ ಸವಲತ್ತುಗಳು ಸಿಗುವುದಿಲ್ಲ ಎಂಬ ಕೊರಗು ಸದಸ್ಯರಲ್ಲಿ ಬಲವಾಗಿ ಇದೆ. ಪ್ರತಿಯೊಬ್ಬ ಭಾರತ ದೇಶದ ಪ್ರಜೆ ದೇಶ ಸೇವಾ ಮನೋಭಾವದಿಂದ ದಳದಲ್ಲಿ ಸೇರದೆ ಕೂಡಾ ಕಾರ್ಯಪ್ರವೃತ್ತರಾದರೆ ದೇಶವು ಪ್ರಗತಿ ಪಥದಲ್ಲಿ ನಡೆಯುವುದು. 

ಗೃಹ ರಕ್ಷಕರ ಜೀವಕ್ಕೆ ಬೆಲೆ ಇಲ್ಲವೇ. ಅವರಿಗೂ ಕುಟುಂಬವಿಲ್ಲವೇ. ಕೋಟಿ ಕೋಟಿ ಹಣ ಯಾವ ಯಾವುದೋ ವ್ಯವಸ್ಥೆಗೆ ವ್ಯಯ ಮಾಡುತ್ತಿದ್ದಾರೆ. ಇಂತಹ ಹಣವನ್ನು ಇಲ್ಲಿಯೂ ಉಪಯೋಗಿಸಿದರೆ ಎಷ್ಟೋ ಕುಟುಂಬಗಳು ಆರ್ಥಿಕ ವಾಗಿ ಸದೃಢವಾಗಬಹುದಲ್ಲವೇ. ಕರ್ನಾಟಕ ಘನ ಸರಕಾರ ಈ ಕಡೆ ಗಮನ ಹರಿಸಿದರೆ ತುಂಬ ಉತ್ತಮ ಅನ್ನೋದು ನನ್ನ ಅನಿಸಿಕೆ. ತಮ್ಮಿಂದಾದ ದೇಶ ಸೇವೆ ಮಾಡಲು ಮುಂದಾಗೋಣ ದೇಶದ ಪ್ರಗತಿಯಲ್ಲಿ ನಾವು ಪಾಲುದಾರರಾಗೋಣ.