ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ 

ಸತ್ಯಂ, ಶಿವಂ, ಸುಂದರಂ ಆದ ಸೃಷ್ಟಿಯನ್ನು ನೋಡಲು ಆಸ್ವಾದಿಸಲು ಭಗವಂತ ನಮಗೆ ವಿವಿಧ ಇಂದ್ರಿಯಗಳನ್ನು ನೀಡಿದ್ದರೂ ಅವೆಲ್ಲದರ ಪರಿಚಯವಾಗ ಬೇಕಿದ್ದರೆ ಸೂಕ್ತ ಮಾರ್ಗದರ್ಶನ ಅತೀ ಅಗತ್ಯ. ಅಂತಹ ಮಾರ್ಗ ದರ್ಶನ ಮಾಡಿ ಶಬ್ದ, ಸ್ಪರ್ಶ, ರೂಪ, ಗಂಧಗಳ ತಿಳಿವಳಿಕೆಯನ್ನು ನೀಡುವ ಮಹಾನುಭಾವರು ಮಾತೃ-ಪಿತೃ ಸಮಾನರಾದ ಆಚಾರ್ಯರು, ಗುರುಗಳು.

ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಆಚಾರ್ಯರು, ಗುರುಗಳಿಗೆ ಇರುವ ಪೂಜ್ಯ, ಗೌರವದ ಸ್ಥಾನ, ಭಾವನೆಯನ್ನು ಹೊಂದಲು ಬೇರಾರಿಂದಲೂ ಸಾಧ್ಯವಿಲ್ಲ. ಇಂದಿಗೂ ಅಂತಹ ಶ್ರೇಷ್ಠ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಶ್ರಿಂಗೇರಿ ಪೀಠ, ಪೀಠಾಧೀಶರು ಬೆಳ್ಗೊಡೆಯಿಂದ ರಾರಾಜಿಸಲ್ಪಡುವ ಏಕಮೇವ ಜಗದ್ಗುರುಗಳು. 

ಸ್ವಾಮಿ ವಿವೇಕಾನಂದರು ಯಾವುದಕ್ಕೂ ಉತ್ತರಿಸದ, ಕೇವಲ ತನ್ನ ಪಾರಮಾರ್ಥಿಕ ಕೈಂಕರ್ಯವನ್ನು ಮಾಡುತ್ತ ದೇವಿಯನ್ನು ಒಲಿಸಿಕೊಂಡು ನಲಿದಾಡುವ ರಾಮಕೃಷ್ಣ ಪರಮಹಂಸರ ಪರಮ ಶಿಷ್ಯರಾದರು. ಅಂಗ ಊನಗಳಿದ್ದೂ ಯಾರು ಸಮಾಜಕ್ಕೆ ಬೆಳಕು ನೀಡುವ ಕೆಲಸ ಮಾಡುವವರೇ, ತನ್ನದೆಲ್ಲವನ್ನೂ ಸಮಾಜಕ್ಕೆ ಅರ್ಪಿಸಿ ನಿಜ ಬೈರಾಗಿಯಂತೆ, ಸಾಧು-ಸನ್ಯಾಸಿಯಂತೆ ಬದುಕುವವರೇ ಆಚಾರ್ಯರು. ಜೀವನವನ್ನು ಇದ್ದಂತೆಯೇ ಸ್ವೀಕರಿಸಿ, ತಿಳಿವಳಿಕೆಯ ಸಾಮರ್ಥ್ಯವನ್ನು ವೃದ್ಧಿಸಿಕೊಂಡು, ಶಿಷ್ಯರಿಗೆ ಕಾರ್ಯತಃ ಸಾಧನೆಗೆ ಪ್ರೇರೇಪಿಸುವ ವನೇ ನಿಜವಾದ ಗುರು. 

ಇದೆಲ್ಲವೂ ಹಿಂದಿನ ಗುರುಕುಲದಲ್ಲಿ ಸಾಧ್ಯವಿತ್ತು. ಆದರೆ ಇಂದು ಗುರುವಿಗೆ ಆ ಪೂಜ್ಯತೆಯಾಗಲೀ, ಗೌರವವಾಗಲೀ ಲಭ್ಯವಾಗುತ್ತಿಲ್ಲ. ಇದಕ್ಕೆ ಬಹಳಷ್ಟು ಕಾರಣಗಳಿರ ಬಹುದು. ಧರ್ಮ ಯಾವತ್ತೂ ಸದಾಚಾರ ಸಂಪನ್ನತೆಯನ್ನೇ ಎತ್ತಿ ಹಿಡಿಯುತ್ತದೆ. ಸತ್ ಆಚಾರದ ಎಲ್ಲಾ ಕೆಲಸಗಳೂ ಎಲ್ಲಾ ಭಗವಂತರಿಗೂ ಪ್ರಿಯದಾಯಕ. ಶಿಷ್ಯನಿಗೆ ಅಂತರಂಗದ ಬೆಳಕು ತೋರಿ ಆತ್ಮೋನ್ನತಿಗೆ ದಾರಿ ತೋರಲು ಗುರುವಿನಿಂದ ಮಾತ್ರ ಸಾಧ್ಯ. ಅಂತಹ ಅಮೃತತ್ವದ ಗುರುವಿಗೆ ಗುರು ಪೂರ್ಣಿಮೆಯ ಶುಭಾವಸರದಲ್ಲಿ ನೂರಾರು ನಮನಗಳು.