ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕೊರೊನಾ ಕರ್ಫ್ಯೂ ಸಂದರ್ಭ ಮಾಧ್ಯಮದಲ್ಲಿ ಕರ್ತವ್ಯ ನಿರ್ವಹಿಸಿ ಮನೆಗೆ ತೆರಳುವ ಸಿಬ್ಬಂದಿಗೆ ವಿನಾಯಿತಿ ನೀಡಿ ಸಹಕರಿಸುವಂತೆ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಸೂಚನೆ ನೀಡಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದರು.
ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕಮಿಷನರ್ ಅವರನ್ನು ಪತ್ರಕರ್ತರ ನಿಯೋಗ ಭೇಟಿ ಮಾಡಿ ಕೊರೊನಾ ಕರ್ಫ್ಯೂ ಅವಧಿಯಲ್ಲಿ ಪತ್ರಕರ್ತರಿಗೆ ತೊಂದರೆಯಾಗುತ್ತಿರುವ ಬಗ್ಗೆ ವಿವರಿಸಿ, ವಿನಾಯಿತಿ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಪೊಲೀಸ್ ಕಮಿಷನರ್ ಈ ಬಗ್ಗೆ ಕೂಡಲೇ ಅಧಿಕಾರಿಗಳು, ಸಿಬ್ಬಂದಿಗೆ ಸೂಚನೆ ನೀಡಲಾಗುವುದು. ತಪಾಸಣೆ ನಡೆಸುವ ಪೊಲೀಸರಿಗೆ ಮಾಧ್ಯಮ ಸಿಬ್ಬಂದಿ ತಮ್ಮ ಸಂಸ್ಥೆಯ ಗುರುತು ಚೀಟಿ (ಐಡಿ) ತೋರಿಸಿದಲ್ಲಿ ಅವರಿಗೆ ವಿಶೇಷ ವಿನಾಯಿತಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ಮಂಗಳೂರು ನಗರ ಕಾನೂನು ಸುವ್ಯವಸ್ಥಾ ವಿಭಾಗದ ಉಪಪೊಲೀಸ್ ಆಯುಕ್ತ ಹರಿರಾಮ್ ಶಂಕರ್ ಉಪಸ್ಥಿತರಿದ್ದರು. ಪತ್ರಕರ್ತರ ನಿಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಸತ್ಯಾವತಿ ಕೆ., ವಿಜಯ್ ಕೋಟ್ಯಾನ್ ಪಡು, ಭಾಸ್ಕರ್ ರೈ ಕಟ್ಟ, ಹರೀಶ್ ಮೋಟುಕಾನ, ಪತ್ರಕರ್ತರಾದ ಸುಖಪಾಲ್ ಪೊಳಲಿ, ನಿಖಿಲ್ ಉಪಸ್ಥಿತರಿದ್ದರು.