ಮಂಗಳೂರು:- ಕೇರಳದಲ್ಲಿ ಎಪಿಎಂಸಿ ಕಾಯ್ದೆಯೇ ಇಲ್ಲ, ಅವರು ಬೆಂಬಲಿಸಿರುವ ರೈತರ ಹೋರಾಟ ಮತ್ತು ಭಾರತ ಬಂದ್ ರಾಜಕೀಯ ಷಡ್ಯಂತ್ರದ ಭಾಗವಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆರೋಪ ಮಾಡಿದರು. 

ಪಕ್ಷದ ಕಚೇರಿಯಲ್ಲಿ ಮಾತನಾಡಿದ ‌ಅವರು ಲೋಕ ಸಭೆಯ ಕೃಷಿ ಸ್ಥಾಯಿ ಸಮಿತಿಯಲ್ಲಿ ಎಲ್ಲ ಪಕ್ಷದ ಸದಸ್ಯರು ಇದ್ದರು. ಕಾಂಗ್ರೆಸ್‌ನ ಕಮಲನಾಥ್, ಅಮರೀಂದರ್ ಸಿಂಗ್ ರಂಥ ಈಗಿನ ರೈತ ಹೋರಾಟ ಬೆಂಬಲಿಸುವವರೂ ಇದ್ದರು. ಅದರ ಶಿಫಾರಸಿನಂತೆ ನೂತನ ಕೃಷಿ ಕಾಯ್ದೆಯನ್ನು ಮೋದಿ ಸರಕಾರ ತಂದಿದೆ. ಇದರ ಮುಖ್ಯ ಉದ್ದೇಶ ಎಪಿಎಂಸಿ ದಲ್ಲಾಳಿಗಳಿಂದ ರೈತರನ್ನು ಪಾರು ಮಾಡುವುದಾಗಿದೆ. ಆದರೆ ಪ್ರತಿ ಪಕ್ಷದವರು ರೈತರ ದಾರಿ ತಪ್ಪಿಸಿ ಹೋರಾಟಕ್ಕೆ ಹಚ್ಚಿದ್ದಾರೆ. ನಾಳಿನ ಬಂದ್ ದೇಶದ ಹಿತಕ್ಕೆ ವಿರೋಧವಾದುದಾಗಿದ್ದು ಅದಕ್ಕೆ ಯಾರೂ ಬೆಂಬಲ ನೀಡಬಾರದು ಎಂದು ಬಿಜೆಪಿ ವಕ್ತಾರರು ಮನವಿ ಮಾಡಿಕೊಂಡರು.

ಮೋದಿ ಮತ್ತು ಯಡಿಯೂರಪ್ಪ ಅವರುಗಳ ಸರಕಾರಗಳು ರೈತರ ಖಾತೆಗೆ ನೇರ ಧನ ಸಹಾಯದ ನೆರವಿನಿಂದ ಹಿಡಿದು, ರೈತರು ಬೆಳೆದುದಕ್ಕೆ ಸೂಕ್ತ ‌ಬೆಲೆ, ದೇಶದ ಯಾವುದೇ ಮೂಲೆಯ ಮಾರುಕಟ್ಟೆಗೆ ಸಂಪರ್ಕ, ಕೃಷಿ ವಿಮೆ, ಉಚಿತ ಮಣ್ಣು ಪರೀಕ್ಷೆ, ಯೂರಿಯಾ ದುರುಪಯೋಗ ತಡೆ, ಬೇವಿನ‌ ಯೂರಿಯಾ ಎಂದು ರೈತರ ಪರ ಹತ್ತಾರು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಹಿಂದಿನ ಸರಕಾರಗಳು ತಾವು ಮಾಡಲಿಲ್ಲ, ಈಗಿನ ಸರಕಾರಕ್ಕೆ ಮಾಡಲು ಬಿಡದಿರುವುದು ಸರಿಯಲ್ಲ ಎಂದು ಕಾರ್ಣಿಕ್ ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ದ. ಕ. ಜಿಲ್ಲಾ ವಕ್ತಾರರು, ರವಿಶಂಕರ್ ಮಿಜಾರ್, ಜಗದೀಶ್ ಶೇಣವ, ಕೌನ್ಸಿಲರ್ ಸುಧೀರ್ ಶೆಟ್ಟಿ ಕಣ್ಣೂರು ಇದ್ದರು.