ಹಣ್ಣಿನ ಹೊರಗೆ ವಾಣಿಜ್ಯ ಮಹತ್ವದ ದ್ವಿದಳ ಧಾನ್ಯ ಜಾತಿಯ ಬೀಜ ಕೊಡುವ ಗೇರು  ಹಣ್ಣು ಎಲ್ಲಿಂದಲೋ ಬಂದರೂ ಭಾರತದ ಎರಡನೆಯ ಪ್ರಮುಖ ಹಣಕಾಸು ಬೆಳೆಯಾಗಿದೆ.

ಹದಿನಾರನೇ ಶತಮಾನದಲ್ಲಿ ಪೋರ್ಚುಗೀಸರು ಸಂಕಣ (ಈಶಾನ್ಯ) ಬ್ರೆಜಿಲ್ ದೇಶದಿಂದ ತಂದ ಫಲವಿದು. ತಂದ‌ ಉದ್ದೇಶ ನದಿ ಮತ್ತು ಕಡಲ ಕೊರೆತ ತಡೆಯಲು ನೀರ ದಡಗಳಲ್ಲಿ ನೆಡುವುದು. ಇನ್ನೂರು ವರುಷಗಳಷ್ಟು ಕಾಲ ಗೋವಾದಲ್ಲಿ ನೆಲ ಸವಕಳಿ ತಡೆಯುವ ಮರ ಎಂಬುದಕ್ಕಿಂತ ಹೆಚ್ಚಿನ ವಾಣಿಜ್ಯ ಮಹತ್ವವೇನೂ ಇದಕ್ಕೆ ‌ಇರಲಿಲ್ಲ.

ಜನಸಾಮಾನ್ಯರು ಹಣ್ಣು ತಿಂದರು, ಬೀಜ ಸುಟ್ಟು ತಿಂದರು. ಅದರ ಹೊರತು ಅದನ್ನು ಗಂಭೀರವಾಗಿ ಯಾರೂ ಪರಿಗಣಿಸಿರಲಿಲ್ಲ.

ಕ್ರಿಶ್ಚಿಯನ್ನರು ಇದನ್ನು ತಮ್ಮ ತೋಟಗಳಲ್ಲಿ ನೆಡುವುದರ ಜೊತೆಗೆ ಇದರ ವ್ಯಾಪ್ತಿ ವಿಸ್ತರಿಸಿತು. ಹಣ್ಣುಗಳು ಮದ್ಯ‌ ತಯಾರಿಕೆಗೆ ಆಗುತ್ತದೆ ಎಂದು ತಿಳಿದಾಗ ಅದನ್ನು ತಾವು ಹೋದಲ್ಲೆಲ್ಲ ಒಯ್ದು ನೆಡತೊಡಗಿದರು. ಕೊಂಕಣಿ ಮತ್ತು ಬ್ಯಾರಿ ವ್ಯಾಪಾರಿಗಳು ಇದರ ಬೀಜದ ವ್ಯಾಪಾರ ಲಾಭಕರ ಎಂಬುದನ್ನು ನಿಧಾನವಾಗಿ ಗ್ರಹಿಸಿದರು. ಕಷ್ಟದ ಕೆಲಸವಾದರೂ ಅದು ನಷ್ಟದ ಕೆಲಸವಾಗಲಿಲ್ಲ. ಸಮುದ್ರ ದಂಡೆಯಿಂದ‌ ತೋಟ,  ತೋಟದಿಂದ ಗುಡ್ಡ, ಗುಡ್ಡದಿಂದ‌ ಪರ್ವತದವರೆಗೂ ಇದು ಬೆಳೆ‌ ವ್ಯಾಪ್ತಿ ಪಡೆಯಿತು.

ಇಂದು ಭಾರತದಲ್ಲಿ ‌ಒಂದು ಲಕ್ಷ ಜನ ನೇರವಾಗಿ ಗೇರುಬೀಜ ಕೆಲಸ ಪಡೆದಿದ್ದು, ಅದಕ್ಕಿಂತಲೂ ಹೆಚ್ಚು ಜನ ಇದರ ಉಪಕಸುಬು ಹೊಂದಿದ್ದಾರೆ. ಭಾರತದಲ್ಲಿ ಪ್ರತಿ  ವರುಷ 55,000 ಟನ್‌ ಗೇರು ಬೀಜ ಉತ್ಪಾದನೆ ಆಗುತ್ತಿದೆ. ಸೆಣಬಿನ ಬಳಿಕದ ಭಾರತದ ಎರಡನೇ ವಾಣಿಜ್ಯ ಬೆಳೆ ‌ಎನಿಸಿದೆ ಗೋಡಂಬಿ.

ಈ ಸದಾ ಹಸಿರು ಮರದ ಪಾಲನೆ ಪೋಷಣೆ ಕೆಲಸ‌ ಏನೂ ಇರುವುದಿಲ್ಲ. ಮಳೆಗಾಲಕ್ಕೆ ಮೊದಲು ಗುಂಡಿ ತೋಡಿ, ಗೊಬ್ಬರ ಹಾಕಿ ನೆಟ್ಟು ಬಿಟ್ಟರೆ ಅದು ಮುಂದೆ ಉಳಿದರೆ ತಾನೇ ತನ್ನ ಪೋಷಣೆ ಮಾಡಿಕೊಳ್ಳುತ್ತದೆ. ಸಣ್ಣ ಆಕಾರದ‌ ಈ ಮರ‌ ಅಡ್ಡಾದಿಡ್ಡಿ ‌ಬೆಳೆಯುವುದೇ ಹೆಚ್ಚು.

ಗೋವಾದಿಂದ ಇದನ್ನು ಕಾರವಾರ, ಬಾರಕೂರು, ಉಡುಪಿ, ಮಂಗಳೂರು ಎಂದು  ತಂದು ನೀಡಲಾಯಿತು. ಹಾಗಾಗಿ ಇದನ್ನು ಗೋವೆದ ಕುಕ್ಕು > ಗೋಂಕು ಎಂದು ತುಳುವರು ಕರೆದರು. ಗೋವಿಕಾಯಿ> ಗೋಯಿಕಾಯಿ ಎಂದು ಬಾರಕೂರು ಕಡೆಯವರು ಕರೆದರು.

ಗೋವೆಯ ಅಡ ಗೋಡಂಬಿ ಆಯಿತು. ಇದು ಮಾವಿಗೆ ಹತ್ತಿರದ ಜಾತಿಯ ಮರವಾಗಿದೆ.

ಮಂಗಳೂರಿನಲ್ಲಿ ಒಂದು ಸುತ್ತು ಹೊಡೆದರೆ ನಿಮಗೆ ಸಾಕಷ್ಟು ಕಡೆ ಈಗ ಗೇರುಹಣ್ಣು ಹೂ ಬಿಟ್ಟಿರುವುದರಿಂದ ಹಿಡಿದು ಹಣ್ಣಾಗಿರುವುದರವರೆಗಿನ ಫಲ ಭರಿತ ಮರಗಳನ್ನು ನೋಡಬಹುದು. ಚಿತ್ರದಲ್ಲಿ ಮಂಗಳೂರು ಪದವು ಪ್ರದೇಶದಲ್ಲಿ ಕಾಣಿಸಿದ ಗೋಂಕುಗಳನ್ನು ಕಾಣಬಹುದು.

ಮಂಗಳೂರು, ಕಾರವಾರ,ಪುತ್ತೂರು, ಕುಂಬಳೆ ಮೊದಲಾದವು ಹಿಂದೆ ಕರ್ನಾಟಕದ ಗೇರು ಬೀಜದ ಕೇಂದ್ರಗಳಾಗಿದ್ದವು. ಇಂದು ಭಾರತದೆಲ್ಲೆಡೆ ಬೆಳೆಸುವಂತೆ ಕರ್ನಾಟಕದ ಉದ್ದಗಲಕ್ಕೂ ‌ಕೂಡ ಇದನ್ನು ಬೆಳೆಸುತ್ತಾರೆ. ಚಿಂತಾಮಣಿ ಇನ್ನೊಂದು ಪ್ರಮುಖ ಗೋಡಂಬಿ ಕೇಂದ್ರವಾಗಿದೆ. ಕರಾವಳಿಯಲ್ಲಿ ಈಗ ಗೇರುಬೀಜ ಕಿಲೋಗೆ ರೂ.  8,000 ಇದೆ. ಚಿಂತಾಮಣಿಯಲ್ಲಿ ಸಾಮಾನ್ಯವಾಗಿ ಇಲ್ಲಿಗಿಂತ ರೂಪಾಯಿ 500ರಷ್ಟು ಕಡಿಮೆಗೆ‌ ದೊರೆಯುತ್ತದೆ.

ಬ್ರೆಜಿಲ್ ದೇಶದ ಈಶಾನ್ಯದ ಸ್ಥಳೀಯರು ಇದನ್ನು ಅಕಾಜು ಎನ್ನುತ್ತಿದ್ದರು. ಅದರ ಮೇಲೆ ‌ಪೋರ್ಚುಗೀಸರು ಇದನ್ನು ಕಾಜು ಎಂದರು. ಅದನ್ನೇ ಹಲವರು ಬಳಸುತ್ತಾರೆ. ಕಾಜು ಎಂಬುದರಿಂದಲೇ ಇಂಗ್ಲೀಷಿನ ಕ್ಯಾಶ್ಶೂ ಶಬ್ದ ಬಂದಿದೆ.

ಇದು ಅನಕಾರ್ಡಿಯೇಸೀ ಕುಟುಂಬದ ಹಣ್ಣು. ಆ ಹೆಸರು ಯಾಕೆ ಗೊತ್ತೆ? ಕಾರ್ಡಿಯಾ ಅಂದರೆ ಹೃದಯದ ಆಕಾರದ ಹಣ್ಣು ಬಿಡುವವುಗಳನ್ನೆಲ್ಲ ಈ ಕುಟುಂಬದಲ್ಲಿ ಹಿಡಿದಿಡಲಾಗಿದೆ.

ಗೋಡಂಬಿಯಲ್ಲಿ ವಾಣಿಜ್ಯ ಮಹತ್ವ ಬೀಜಕ್ಕಾದರೂ ಹಣ್ಣು ಕೂಡ ನಾನಾ‌ ಸತ್ವಗಳನ್ನು ಹೊಂದಿರುವುದರಿಂದ ಸಿಕ್ಕಾಗ ತಿನ್ನದುಳಿಯಬೇಡಿ. ಹಣ್ಣನ್ನು ಜಾಂ, ಸಿಹಿ ತಿಂಡಿ, ಸಲಾಡ್ ಮೊದಲಾದ ಬಗೆಯಲ್ಲಿ ಸಹ ಬಳಸಬಹುದು.    


-By ಪೇಜಾ