ಗೋಕರ್ಣ : ಲಕ್ಷ್ಮಿಯಿಂದ ಸಂಪತ್ತು, ಕ್ರೋಧದಿಂದ ಆಪತ್ತು. ಲಕ್ಷ್ಮಿಯನ್ನು ಗೆಲ್ಲಬೇಕಿದ್ದರೆ ನಾವು ಕ್ರೋಧವನ್ನು ಗೆಲ್ಲಬೇಕು. ಸಿಟ್ಟು, ಕ್ರೋಧ, ಹಿಂಸೆಯನ್ನು ಬಿಟ್ಟು, ಸಂತೋಷ ಪಟ್ಟು, ಸಂತೋಷ ಕೊಟ್ಟು ಬಾಳ್ವೆ ನಡೆಸೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ಕರೆ ನೀಡಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಶುಕ್ರವಾರನಡೆದ ಧರ್ಮಸಭೆಯಲ್ಲಿ ಪರಮಪೂಜ್ಯರು ಆಶೀರ್ವಚನ ನೀಡಿದರು. ಕ್ರೋಧ ಮತ್ತು ಹಿಂಸೆ ಅಕ್ಕ- ತಂಗಿ ಇದ್ದಂತೆ. ಇದು ಪಾಪಸಂಬಂಧ. ನೀತಿಬಾಹಿರ ಸಂಬಂಧ. ಲಕ್ಷ್ಮಿ ಎಂದರೆ ಸಮೃದ್ಧಿ. ಕ್ರೋಧದಿಂದ ಸಂಪತ್ತು ನಾಶವಾಗುತ್ತದೆ. ವರಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಲ್ಲಿ ಕ್ರೋಧ- ಸಿಟ್ಟನ್ನು ತ್ಯಜಿಸುವ ಸಂಕಲ್ಪ ಮಾಡೋಣ ಎಂದರು.

ಕ್ರೋಧದಿಂದ ಒಳಿತು ಕೆಡುಕುಗಳ ವಿವೇಚನೆ ಕಳೆದು ಹೋಗುತ್ತದೆ. ಇದರಿಂದ ನಮ್ಮಸಂಸ್ಕೃತಿಯೇ ನಾಶವಾಗುತ್ತದೆ. ನಮ್ಮ ಜೀವನಾನುಭವ, ತಿಳಿವಳಿಕೆಯೇ ಇಲ್ಲವಾಗುತ್ತದೆ. ನೆನಪು ನಾಶವಾಗುತ್ತಿದ್ದಂತೆ ಬುದ್ಧಿನಾಶವಾಗುತ್ತದೆ. ಸಿಟ್ಟು ನಮ್ಮ ಸರ್ವನಾಶದಲ್ಲಿ ಪರ್ಯವಸಾನಗವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೆ ಜೀವನದಲ್ಲಿ ಸಿಟ್ಟಿಗೆ ಅವಕಾಶ ನೀಡಬಾರದು ಎಂದು ಕಿವಿಮಾತು ಹೇಳಿದರು.

ಯಾರದೋ ಮೇಲಿನ ಸಿಟ್ಟನ್ನು ಇನ್ನೊಬ್ಬರ ಮೇಲೆ ತೀರಿಸಿಕೊಳ್ಳಬಾರದು. ಬದುಕಿನಲ್ಲಿ ಯಾರೆಲ್ಲ ನಮ್ಮ ಬಳಿ ಬರುತ್ತಾರೋ ಅವರೆಲ್ಲ ದೇವರು ಕಳುಹಿಸಿಯೇ ಬರುವವರು. ಅವರು ಒಳಿತು ಮಾಡಲಿ, ಕೆಡುಕು ಮಾಡಲಿ, ದೇವರು ಅವರಿಂದ ಆ ಕಾರ್ಯ ಮಾಡಿಸುವ ಉದ್ದೇಶವೇ ಬೇರೆ ಇರುತ್ತದೆ. ಜಗತ್ತಿನಲ್ಲಿ ಹುಲ್ಲುಕಡ್ಡಿ ಅಲುಗಾಡಿದರೂ ಅದರ ಹಿಂದೆ ದೇವರ ಕೈವಾಡ ಇದೆ. ನಾವು ಸಕಾರಾತ್ಮಕವಾಗಿ ಇದ್ದು, ಭಗವಂತನಲ್ಲಿ ವಿಶ್ವಾಸ ಇದ್ದರೆ, ಜೀವನದಲ್ಲಿ ನಮಗೆ ಒಳ್ಳೆಯದೇ ಆಗುತ್ತದೆ ಎಂಬ ಭರವಸೆ ನಮಗೆ ಇರಬೇಕು ಎಂದು ಅಭಿಪ್ರಾಯಪಟ್ಟರು.

ತಂದೆಯಾಗಿ, ತಾಯಿಯಾಗಿ, ಸಖನಾಗಿ, ಸ್ವಾಮಿಯಾಗಿ, ಸೇವಕನಾಗಿ ರಾಮ ನಮ್ಮಲ್ಲಿಗೆ ಬರುತ್ತಾನೆ. ಆದರೆ ಅದನ್ನು ಗುರುತಿಸುವ ಕಣ್ಣು ನಮಗಿಲ್ಲ. ಯಾವುದೂ ಕೆಟ್ಟದಲ್ಲ. ಎಲ್ಲವೂ ಭಗವಂತನ ಸಂಕಲ್ಪ ಎನ್ನುವ ಅಚಲ ನಂಬಿಕೆ ನಮಗೆ ಬೇಕು. ಮಹಾತ್ಮನನ್ನು ಗುರುತಿಸುವ ಸಂಸ್ಕಾರ ನಮ್ಮಲ್ಲಿರಬೇಕು. ಬರುವವರೆಲ್ಲರೂ ದೇವರೇ; ಆಗುವುದೆಲ್ಲ ಒಳ್ಳೆಯದಕ್ಕೇ ಎನ್ನುವ ನಂಬಿಕೆ ನಮ್ಮಲ್ಲಿದ್ದರೆ ನಾವು ಯಾರಲ್ಲೂ ಸಿಟ್ಟು ಮಾಡಿಕೊಳ್ಳುವ ಪ್ರಮೇಯವೇ ಬರುವುದಿಲ್ಲ. ಬದುಕಿನಲ್ಲಿ ಬರುವವರನ್ನು ಕೂಡಾ ಪ್ರೀತಿ, ಗೌರವ, ಆದರಗಳಿಂದ ನೋಡಿಕೊಳ್ಳಬೇಕು. ಕಾರಣವಿಲ್ಲದೆ ಯಾರ ಮೇಲೂ ಸಿಟ್ಟು ಮಾಡಿಕೊಳ್ಳಬಾರದು ಎಂದು ಸಲಹೆ ಮಾಡಿದರು.