ಸೆಪ್ಟಂಬರ್: ಗ್ರಾಮ ಪಂಚಾಯತಿ ಮಟ್ಟದಲ್ಲಿ ಜನ ಸಾಮಾನ್ಯರಿಗೆ ಉತ್ತಮ ಸೇವೆಗಳು ಲಭಿಸಿದರಷ್ಟೇ ವಿಧಾನ ಸೌಧದ ಮಟ್ಟದಲ್ಲೂ ತ್ವರಿತಗತಿಯಲ್ಲಿ ಕೆಲಸಗಳಾಗುತ್ತವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಅಭಿಪ್ರಾಯಪಟ್ಟರು.
ಅವರು ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಕಾರ್ಕಳ ತಾಲೂಕು ಪಂಚಾಯತ್ ವತಿಯಿಂದ ಮಹಿಳಾ ಸ್ನೇಹಿ ನೀರೆ ಗ್ರಾಮ ಪಂಚಾಯತ್ ನ ನೂತನ ಕಟ್ಟಡ, ಸಭಾಭವನ, ಸಂಜೀವಿನಿ ಸಭಾಭವನ ಹಾಗೂ ಗ್ರಾಮ ಆಡಳಿತ ಅಧಿಕಾರಿಯವರ ಕಚೇರಿಯನ್ನು ಉದ್ಘಾಟಿಸಿ, ಮಾತನಾಡಿ, , ಭ್ರಷ್ಟಚಾರವನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಿತ್ತುಹಾಕಬೇಕು, ಆಗಷ್ಟೇ ಜನ ಸಾಮಾನ್ಯರಿಗೆ ನ್ಯಾಯ ಸಿಗುತ್ತದೆ ಎಂದರು.
ಉಡುಪಿ ಜಿಲ್ಲೆಯ ಜನರು ಸಾಂಸ್ಕೃತಿಕ ರಾಯಭಾರಿಗಳು, ಬೇರೆ ಊರುಗಳಲ್ಲಿ ನೆಲೆಸಿದ್ದರೂ ಊರ ದೇವಸ್ಥಾನಗಳು, ಶಾಲೆಗಳ, ಹಾಗೂ ಗ್ರಾಮ ಪಂಚಾಯತಿ ಕಟ್ಟಡಗಳ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ಸರ್ಕಾರದ ಅನುದಾನಕ್ಕೆ ಕಾಯದೇ ಖಾಸಗಿಯವರ ನೆರವಿನಿಂದ ಗ್ರಾಮಗಳು ಅಭಿವೃದ್ಧಿ ಕಾಣುವಂತಗಾಬೇಕು ಎಂದು ಹೇಳಿದರು.
ನೂತನವಾಗಿ ನಿರ್ಮಾಣಗೊಂಡಿರುವ ಗ್ರಾಮ ಪಂಚಾಯಿತಿಯ ಮಳಿಗೆಗಳ ಹಂಚಿಕೆಯಲ್ಲಿ, ಎಲ್ಲ ಸೌಲಭ್ಯಗಳ ವಿತರಣೆಯಲ್ಲಿ, ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡುತ್ತಿರುವುದು ನನಗೆ ಬಹಳ ಖುಷಿ ನೀಡುವ ಸಂಗತಿಯಾಗಿದೆ. ರಾಜ್ಯದ ಬೇರೆ ಗ್ರಾಮ ಪಂಚಾಯಿತಿಗಳಿಗೆ ಮಾದರಿಯಾಗಿ ನೀರೆ ಗ್ರಾಮ ಪಂಚಾಯಿತಿ ಮಹಿಳಾ ಸ್ವಾವಲಂಬನೆಗೆ ಕ್ರಮ ತೆಗೆದುಕೊಂಡಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ಇದೊಂದು ಕೇವಲ ಕಟ್ಟಡ ಎನ್ನುವುದಕ್ಕಿಂತ ಇಡೀ ಗ್ರಾಮದ ಅಭಿವೃದ್ಧಿಯ ಸಂಕೇತ ಎಂದು ನಾನು ಪರಿಗಣಿಸುತ್ತೇನೆ. ಗಾಂಧೀಜಿಯವರ ಗ್ರಾಮ ಸ್ವರಾಜ್ ಕಲ್ಪನೆ ಸಾಕಾರವಾಗುವುದು ಇಲ್ಲಿಂದಲೇ. ಈ ಕಟ್ಟಡವು ಸ್ಥಳೀಯ ಆಡಳಿತ, ಸಮುದಾಯದ ಸಹಭಾಗಿತ್ವ ಮತ್ತು ಸಾರ್ವಜನಿಕ ಸೇವೆಗಳಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಮಹಾತ್ಮಗಾಂಧಿಯವರಿಗೆ ದೂರದೃಷ್ಠಿ ಇರುವುದರಿಂದಲೇ ಗ್ರಾಮಗಳ ಸುಧಾರಣೆಯಿಂದ ಮಾತ್ರ ದೇಶದ ಅಭಿವೃದ್ದಿ ಎಂದಿದ್ದರು ಎಂದು ಸಚಿವೆ ಹೇಳಿದರು.
ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸುಧಾರಣೆ ತರುವಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಮುಂದಿದೆ. ಆಧುನಿಕ ಭಾರತದ ನಿರ್ಮಾತೃ, ನಮ್ಮ ಪ್ರಧಾನಿ ಆಗಿದ್ದ ರಾಜೀವ್ ಗಾಂಧಿ ಅವರಿಗೆ ಪಂಚಾಯತ್ ರಾಜ್ ವ್ಯವಸ್ಥೆ ವಿಕೇಂದ್ರೀಕರಣಗೊಳಿಸಿದ ಕೀರ್ತಿ ಸಲ್ಲುತ್ತದೆ. ದೆಹಲಿಯಲ್ಲಿ ಬಿಡುಗಡೆ ಮಾಡಿದ ಹಣ ನೇರವಾಗಿ ಹಳ್ಳಿಗೆ ತಲುಪಬೇಕೆಂದರೆ ವಿಕೇಂದ್ರೀಕರಣ ವ್ಯವಸ್ಥೆ ಅಗತ್ಯ ಎಂದು ಅವರು ಪ್ರತಿಪಾದಿಸಿದ್ದರು. ನರೇಗಾ ಯೋಜನೆ ಬಂದ ನಂತರ ಗ್ರಾಮ ಪಂಚಾಯಿತಿಗಳ ಬಲವರ್ಧನೆಯಾಗಿದೆ ಎಂದರು.
ಬೀದಿ ದೀಪಗಳ ಬಿಲ್ ತುಂಬುವ ಶಕ್ತಿಯೂ ಇಲ್ಲದ ಪಂಚಾಯಿತಿಗಳು ಇಂದು ಸಾಕಷ್ಟು ಅನುದಾನ ಪಡೆಯುತ್ತಿವೆ. ಗ್ರಾಮಗಳ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರ ಅತ್ಯಂತ ಮಹತ್ವದ್ದು. ಈ ಹಿಂದೆ ಗ್ರಾಮ ಪಂಚಾಯಿತಿ ಕಚೇರಿಗೆ ಯಾವುದೇ ಕೆಲಸ ಅರಸಿ ಬರುವವರ ಸಂಖ್ಯೆ ತುಂಬಾ ಕಡಿಮೆಯಾಗಿತ್ತು. ಆದರೆ, ಈಗ ಗ್ರಾಮ ಪಂಚಾಯಿತಿ ಕಾರ್ಯಾಲಯದಿಂದಲೇ ಕೋಟ್ಯಾಂತರ ರೂಪಾಯಿಗಳ ಕಾಮಗಾರಿಗಳು ನಡೆಯುತ್ತಿವೆ. ಗ್ರಾಮಗಳ ಅಭಿವೃದ್ಧಿ ಮತ್ತು ಗ್ರಾಮೀಣ ಪ್ರದೇಶದ ಜನರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.
ಐವರು ಗರ್ಭಿಣಿಯರಿಗೆ ಸೀಮಂತ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಕಳ ಶಿಶು ಅಭಿವೃದ್ಧಿ ಯೋಜನೆಯ ಪೆÇೀಷಣ್ ಅಭಿಯಾನ ಯೋಜನೆಯಡಿ ಸಮುದಾಯ ಆಧಾರಿತ ಕಾರ್ಯಕ್ರಮದಲ್ಲಿ ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗರ್ಭಿಣಿಯರಿಗೆ ಸಾಂಕೇತಿಕವಾಗಿ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಐವರು ಮಹಿಳೆಯರಿಗೆ ಸಿಹಿ ತಿನಿಸುವ ಮೂಲಕ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.
ಶಾಸಕ ಸುನೀಲ್ ಕುಮಾರ್ ಮಾತನಾಡಿ, ಸಾಮಾನ್ಯ ಜನರು ತಮ್ಮ ಬೇಕು ಬೇಡಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಗಳಿಗೆ ಭೇಟಿ ನೀಡಿದಾಗ ಸುವ್ಯವಸ್ಥೆಯಿಂದ ಕಾರ್ಯ ಮಾಡುವ ಗ್ರಾಮ ಪಂಚಾಯ್ತಿ ಗಳಿದ್ದರೆ ಸರಕಾರದ ಕೆಲಸ ಕಾರ್ಯ ಸುಲಲಿತವಾಗಿ ನಡೆಯುತ್ತವೆ. ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳೂ ಆಧುನಿಕ ಸೌಲಭ್ಯ ಹೊಂದಿ ಸುವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ತಾಲೂಕಿನ ಎಲ್ಲಾ ಸರಕಾರಿ ಕಟ್ಟಡಗಳನ್ನು ಇದೇ ರೀತಿ ಮೇಲ್ದರ್ಜೆಗೆ ಏರಿಸಲು ಕ್ರಮ ವಹಿಸಲಾಗಿದೆ. ಎಲ್ಲರ ಸಹಕಾರದಿಂದ ನೀರೆ ಗ್ರಾಮ ಪಂಚಾಯಿತಿ ಕಟ್ಟಡವನ್ನು ಅತ್ಯಾಧುನಿಕ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ ಇದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕೆಂಪು ಕಲ್ಲು ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು ಈ ಬಗ್ಗೆ ಈಗಾಗಲೇ ಸರಕಾರದ ಗಮನ ಸೆಳೆಯುವ ಪ್ರಯತ್ನ ನಡೆದಿದೆ. ಸರಕಾರದ ನಿಯಮಾವಳಿ ಬದಲಾದರೆ ಕಾರ್ಮಿಕರು ಬದುಕು ಕಟ್ಟಿಕೊಳ್ಳಲು ಅನುಕೂಲ ಆಗುವುದು. ಸರಕಾರದ ಗ್ಯಾರಂಟಿ ಯೋಜನೆ ಜನರ ಬದುಕು ಕೊಟ್ಟಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಜಿಲ್ಲೆಯಲ್ಲಿ ಎಡೆ ಬಿಡದೆ ಸುರಿದ ಮಳೆಯ ಪರಿಣಾಮ ರಸ್ತೆಗಳು ಹದಗೆಟ್ಟಿದ್ದು ರಸ್ತೆಗಳ ನಿರ್ವಹಣಾ ವೆಚ್ಚ ಭರಿಸಲು ಅನುದಾನ ಬಿಡುಗಡೆ ಮಾಡುವಂತೆ ಸಚಿವರನ್ನು ಒತ್ತಾಯಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ರಾಜ್ಯದಲ್ಲಿ 5950 ಗ್ರಾಮ ಪಂಚಾಯಿತಿಗಳಿದ್ದು ಎಲ್ಲ ಗ್ರಾಮ ಪಂಚಾಯತಿಗಳಿಗೂ ನೀರೆ ಗ್ರಾಮ ಪಂಚಾಯಿತಿ ಮಾದರಿಯಾಗಿದೆ. ಪ್ರೀತಿ ಶ್ರದ್ಧೆ ನಂಬಿಕೆ ಪರಸ್ಪರ ಹೊಂದಾಣಿಕೆ ಇದ್ದಾಗ ಮಾದರಿ ಗ್ರಾಮಗಳು ರೂಪುಗೊಳ್ಳುತ್ತವೆ ಎನ್ನುವುದಕ್ಕೆ ನೀರೆ ಗ್ರಾಮ ಪಂಚಾಯಿತಿ ಸಾಕ್ಷಿಯಾಗಿದೆ. ಗ್ರಾಮ ಪಂಚಾಯತ್ ಗಳು ಸರ್ಕಾರದ ರೀತಿ ಕೆಲಸ ಮಾಡುವ ಅವಕಾಶ ಹೊಂದಿವೆ. ಸರಕಾರದ 29 ಇಲಾಖೆಗಳು ಗ್ರಾಮ ಪಂಚಾಯಿತಿ ಜೊತೆ ಸಮನ್ವಯ ಸಾಧಿಸಿ ಕೆಲಸ ಮಾಡಿ ಜನಪರ ಕಾರ್ಯಕ್ರಮಗಳನ್ನು ಕೈಗೊಂಡರೆ ಪಂಚಾಯತ್ ರಾಜ್ ವ್ಯವಸ್ಥೆ ಸಾರ್ಥಕತೆ ಕಾಣುತ್ತದೆ ಎಂದರು.
ಜಿಲ್ಲೆಯಲ್ಲಿ 9/11 ಸಮಸ್ಯೆಗಳಿಂದ ಬಡ ಜನರಿಗೆ ಮನೆ ಕಟ್ಟಲು ತೀವ್ರ ತೊಂದರೆ ಆಗುತ್ತಿದ್ದು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾವಣೆ ಗೊಂಡಿರುವ 9/11 ಅನ್ನು ಮರಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಒಳಗೆ ತರುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಬೇಕು ಎಂದು ಅವರು ಸಚಿವರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಹಾಗೂ ನೀರೆ ಗ್ರಾಮಪಂಚಾಯತ್ ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ ಎಸ್.ಪ್ರಭು ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷ ಮುನಿಯಲು ಉದಯ ಕುಮಾರ್ ಶೆಟ್ಟಿ , ಕಾರ್ಕಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ.ಟಿ.ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿ ರಾಮ್ ಶಂಕರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎಸ್ ಎಸ್ ಕಾದ್ರೋಳ್ಳಿ, ಉಡುಪಿ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಹಾಗೂ ಕಾರ್ಕಳ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಸುಬ್ರಹ್ಮಣ್ಯ ಶೆಟ್ಟಿ, ಕಾರ್ಕಳ ತಹಸೀಲ್ದಾರ್ ಪ್ರದೀಪ್,ಆರ್, ಕಾರ್ಕಳ ತಾಲೂಕು ಪಂಚಾಯತ್ ಇಒ ಪ್ರಶಾಂತ್ ರಾವ್,ಉದ್ಯಮಿ ಉದಯ್ ಕುಮಾರ್ ಶೆಟ್ಟಿ, ದಾನಿ ದಾಮೋದರ ಕಾಮತ್, ಸಂತೋಷ್ ವಾಗ್ಳೆ, ಕಡಾರಿ ರವೀಂದ್ರ ಪ್ರಭು ಹಾಗೂ ಮತ್ತಿತರರು ಉಪಸ್ಥಿತರಿದ್ದರು
ಪಂಚಾಯತ್ ಅಭಿವೃದ್ದಿ ಅಧಿಕಾರಿ ಅಂಕಿತಾ ನಾಯಕ್ ಸ್ವಾಗತಿಸಿ, ರಮೇಶ್ ಕಲ್ಲೊಟ್ಟೆ ನಿರೂಪಿಸಿ, ವಿದ್ಯಾ ಶೆಟ್ಟಿ ವಂದಿಸಿದರು.