ಉಡುಪಿ: ಸಣ್ಣ, ಸೂಕ್ಷ್ಮ ಹಾಗೂ ಮಧ್ಯಮ ಕೈಗಾರಿಕೆಗಳ ಉತ್ಪನ್ನಗಳ ತಯಾರಿಕೆ ಮತ್ತು ಗುಣಮಟ್ಟ ಪರಿಸರ ಸ್ನೇಹಿ ಹಾಗೂ ಆರೋಗ್ಯದಾಯಕವಾಗಿರುವುದಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಉದ್ದಿಮೆದಾರರಿಗೆ ಕರೆ ನೀಡಿದರು.

ಅವರು  ನಗರದ ಕಡಿಯಾಳಿಯ ದಿ ಓಷ್ಯನ್ ಪರ್ಲ್ ಹೋಟೆಲ್‍ನಲ್ಲಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಎಂ.ಎಸ್.ಎಂ.ಇ ನಿರ್ದೇಶನಾಲಯ, ಕೆ.ಸಿ.ಟಿ.ಯು ಟೆಕ್ಸಾಕ್ ಬೆಂಗಳೂರು ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಮಣಿಪಾಲ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಎಂ.ಎಸ್.ಎಂ.ಇ ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು (ರ್ಯಾಂಪ್) ಯೋಜನೆಯಡಿಯಲ್ಲಿ ಒಂದು ದಿನದ ಝೆಡ್ ಮತ್ತು ಲೀನ್ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

ಸಣ್ಣ, ಸೂಕ್ಷ್ಮ ಹಾಗೂ ಮಧ್ಯಮ ಕೈಗಾರಿಕೆಗಳು ಕೇವಲ ಆರ್ಥಿಕತೆಯ ಲಾಭಕ್ಕೆ ಹೆಚ್ಚು ಒತ್ತು ನೀಡುವ ಜೊತೆಗೆ ಪರಿಸರ ಸ್ನೇಹಿ ಹಾಗೂ ಆರೋಗ್ಯದಾಯಕ ಉತ್ಪನ್ನಗಳ ತಯಾರಿಕೆಗೆ ಮುಂದಾಗಬೇಕು. ಇದರಿಂದಾಗಿ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಕೈಗಾರಿಕೆಗಳು ಸುಧೀರ್ಘವಾಗಿ ನಡೆಯುವುದರ ಜೊತೆಗೆ ದೇಶದ ಆರ್ಥಿಕತೆಗೂ ಸಹಕಾರಿಯಾಗುತ್ತದೆ ಎಂದರು.

ನಮ್ಮ ದೇಶಕ್ಕೆ ಯೂರೋಪಿಯನ್ನರು ವ್ಯಾಪಾರವನ್ನು ಅರಿಸಿ, ಬರುವುದಕ್ಕೂ ಮುನ್ನ ಸಣ್ಣ ಹಾಗೂ ಗುಡಿ ಕೈಗಾರಿಕೆಗಳು ಹೆಚ್ಚು ಇದ್ದವು. ಅವರು ತಯಾರಿಸುತ್ತಿದ್ದ ಕರಕುಶಲ ವಸ್ತುಗಳು, ಆಹಾರ ಪದಾರ್ಥಗಳು ಸೇರಿದಂತೆ ಮತ್ತಿತರ ಉತ್ಪನ್ನಗಳು ವಿಶ್ವದಲ್ಲಿಯೇ ಹೆಚ್ಚಿನ ಬೇಡಿಕೆ ಹೊಂದಿದ್ದವು. ವ್ಯಾಪಾರವನ್ನು ಅರಸಿ ದೇಶಕ್ಕೆ ಬಂದವರು ತಮ್ಮ ಕೈಗಾರಿಕಾ ಉತ್ಪನ್ನಗಳ ಮಾರುಕಟ್ಟೆಯಿಂದ ನಮ್ಮ ಸಾಂಪ್ರದಾಯಿಕ ಉತ್ಪನ್ನಗಳ ತಯಾರಿಕೆ ಬಹುತೇಕ ಕುಂಠಿತಗೊಂಡು ಸಾಂಪ್ರದಾಯಿಕ ಕುಶಲಕರ್ಮಿಗಳು ಕೃಷಿಯತ್ತ ಸಾಗಿದರು. ಗಾಂಧೀಜಿಯವರು ಸ್ವದೇಶಿ ಉತ್ಪನ್ನಗಳ ತಯಾರಿಕೆಗೆ ಒತ್ತು ನೀಡಬೇಕು, ವಿದೇಶಿ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಕರೆ ನೀಡಿದ್ದರು ಎಂದರು. 

ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳು ಸಾಮಾಜಿಕ ಹೊಣೆಗಾರಿಯೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದ ಅವರು, ಮುಂದಿನ 2050 ರ ವೇಳೆಗೆ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸಣ್ಣ ಕೈಗಾರಿಕೆಗಳು ಮಹತ್ವದ ಪಾತ್ರ ವಹಿಸಲು ಕೈಗಾರಿಕೋದ್ಯಮಿಗಳು ಮುಂದಾಗಬೇಕು ಎಂದರು. 

ಬೆಂಗಳೂರು ಟೆಕ್ಸಾಕ್ ಸಿ.ಇ.ಓ ಸಿದ್ಧರಾಜು ಪ್ರಾಸ್ತಾವಿಕವಾಗಿ ಮಾತನಾಡಿ, 2019-20 ನೇ ಅವಧಿಯ ಕೊರೋನಾ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಸ್ಥಿರವಾಗಿ ನಿಲ್ಲಲು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದ ಸಣ್ಣ ಕೈಗಾರಿಕೆಗಳಿಗೆ ರ್ಯಾಂಪ್ ಯೋಜನೆಯನ್ನು ಜಾರಿ ಮಾಡುವ ಮೂಲಕ ಕೇಂದ್ರ, ರಾಜ್ಯ ಸರ್ಕಾರಗಳ ಜೊತೆಗೆ ವಿಶ್ವ ಬ್ಯಾಂಕ್‍ಗಳು ಆರ್ಥಿಕ ಬಲ ನೀಡಿದವು. ಯಾವುದೇ ಉತ್ಪನ್ನಗಳ ಗುಣಮಟ್ಟ ಉತ್ತಮವಾಗಿವೆ ಎಂದು ತಿಳಿಸಲು ಪ್ರಮಾಣಪತ್ರ ಅಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಶೂನ್ಯ ದೋಷ, ಶೂನ್ಯ ಪರಿಣಾಮದೊಂದಿಗೆ ಉತ್ಕ್ರಷ್ಟ  ಗುಣಮಟ್ಟದ ಉತ್ಪನ್ನಗಳನ್ನು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಉತ್ಪಾದಿಸಲು ಝಡ್.ಇ.ಡಿ ಪ್ರಮಾಣಪತ್ರಗಳು ಪ್ರಮುಖಪಾತ್ರ ವಹಿಸಲಿದ್ದು, ಇದರಲ್ಲಿ ಕಂಚು, ಬೆಳ್ಳಿ, ಚಿನ್ನದಂತಹ ಪ್ರಮಾಣೀಕರಣ ಪತ್ರವನ್ನು ಪಡೆಯಬಹುದು. ಅದನ್ನು ಪಡೆಯುವ ಕುರಿತು ಕಾರ್ಯಾಗಾರದಲ್ಲಿ ಅರಿವು ಮೂಡಿಸಲಾಗುವುದು ಎಂದ ಅವರು, ಸಣ್ಣ ಕೈಗಾರಿಕೋದ್ಯಮಗಳ ವ್ಯರ್ಥವನ್ನು ಕಡಿಮೆ ಮಾಡಲು, ಗುಣಮಟ್ಟ, ಉತ್ಪಾದಕತೆ ಹಾಗೂ ಅವರುಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ಲೀನ್ ಕುರಿತ ಮಾಹಿತಿ ಕಾರ್ಯಕ್ರಮವು ಉದ್ಯಮಿಗಳಿಗೆ ಪ್ರಯೋಜನಕಾರಿಯಾಗಲಿದೆ ಎಂದರು. 

ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಎಂ.ಎಸ್.ಎಂ.ಇ ನ ಗೋಪಿನಾಥ್ ಝೆಡ್ ಮತ್ತು ಲೀನ್ ಯೋಜನೆಗಳ ಕುರಿತು ಉದ್ಯಮಿಗಳಿಗೆ ಮಾಹಿತಿ ನೀಡಿದರು. 

ಇದೇ ಸಂದರ್ಭದಲ್ಲಿ ಝೆಡ್.ಇ.ಡಿ ಯೋಜನೆಯಡಿ ಅರ್ಹ ಉದ್ಯಮಿಗಳಿಗೆ ಸಿಲ್ವರ್ ಸರ್ಟಿಫಿಕೇಟ್ ಅನ್ನು ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ಎಂ.ಎಸ್.ಎಂ.ಇ ಜಂಟಿ ನಿರ್ದೇಶಕ ಸುಂದರ್ ಶೇರಿಗಾರ್, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ವಸಂತ ಕಿಣಿ, ಲೀಡ್ ಬ್ಯಾಂಕ್ ಮ್ಯಾನೆಜರ್ ಹರೀಶ್, ಜಿಲ್ಲೆಯ ಕೈಗಾರಿಕೋದ್ಯಮಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. 

ಟೆಕ್ಸಾಕ್ ಅಸೋಸಿಯೇಟ್ ಕನ್ಸಲ್ಟೆಂಟ್ ಅರವಿಂದ್ ಡಿ ಬಾಳೇರಿ ಸ್ವಾಗತಿಸಿ, ಶ್ರುತಿ ನಿರೂಪಿಸಿ, ಕೈಗಾರಿಕೆ ಇಲಾಖೆಯ ಉಪನಿರ್ದೇಶಕ ಸೀತಾರಾಮ ಶೆಟ್ಟಿ ವಂದಿಸಿದರು.