39 ವರುಷಕ್ಕೆ ದುರಂತ ಅಂತ್ಯ ಕಂಡ ಕಲ್ಪನಾಳು ಶರತ್ ಲತಾ ಆಗಿದ್ದಾಗ ಕುಣಿದು ಹೋದ ಜಾಗ ಗಣಪತಿ ಹೈಸ್ಕೂಲ್.

ಶರತ್ ಲತಾ ಮಂಗಳೂರಿನ ತುಳು ಕನ್ಯೆ. ಮಾಸ್ಟರ್ ವಿಠ್ಠಲ್ ಬಳಿ ನೃತ್ಯ ಕಲಿತ ಈಕೆ ಗಣಪತಿ ಹೈಸ್ಕೂಲಿನಲ್ಲಿ ಆಗಾಗ ನೃತ್ಯ ಪ್ರದರ್ಶನ ನೀಡುತ್ತಿದ್ದಳು. ಮಾಸ್ಟರ್ ವಿಠ್ಠಲರ ನಿರ್ದೇಶನದಲ್ಲಿ ಶರತ್ ಲತಾ ಇಲ್ಲಿ ನರ್ತಿಸಿದ ಶಿಲಾಬಾಲಿಕೆ ಎಂಬ ನರ್ತನ ಬಹಳ ಪ್ರಸಿದ್ಧಿ ಪಡೆದಿದ್ದುದಾಗಿ ಹಿರಿಯರು ನೆನಪಿಸಿಕೊಳ್ಳುತ್ತಾರೆ.

ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿ ಬಳಗ ತಾರುಣ್ಯದಲ್ಲಿ ನಾಟಕ ಆಡುತ್ತಿದ್ದಾಗ ಶರತ್ ಲತಾ ಪಾತ್ರ ಕೇಳಿದ್ದರಂತೆ. ಆದರೆ ಅವರ ನಾಟಕಗಳಲ್ಲಿ ಗಂಡಸರೆ ಹೆಂಗಸರ ಪಾತ್ರ ಮಾಡುತ್ತಿದ್ದರಂತೆ. ಈ ನಡುವೆ ಗಣಪತಿ ಹೈಸ್ಕೂಲಿನಲ್ಲಿ ನರ್ತಿಸಿದ ಶರತ್ ಲತಾರನ್ನು ಪುಟ್ಟಣ್ಣ ಕಣಗಾಲ್ ಮೈಸೂರು ನಾಟಕಕ್ಕೆ ಪರಿಚಯಿಸಿದರು.

ಬಿ. ಆರ್. ಪಂತುಲು ಅವರಿಗೆ ಸಹಾಯಕ ನಿರ್ದೇಶಕರಾದ ಪುಟ್ಟಣ್ಣ ಆಕೆಯನ್ನು ಅವರಿಗೆ ಪರಿಚಯಿಸಿದ ಪರಿಣಾಮ 1963ರ ಸಾಕು ಮಗಳು ಚಿತ್ರದಲ್ಲಿ ಅವಕಾಶ ಪಡೆದರು. ಆಗ ಅವಕಾಶದ ಜೊತೆಗೆ ಶರತ್ ಲತಾ ಪಡೆದ ಹೆಸರು ಕಲ್ಪನಾ.

ಮುಂದೆ 15 ವರುಷ ನಾಯಕಿಯಾಗಿ ‌ಕನ್ನಡದಲ್ಲಿ ಮೆರೆದ ಕಲ್ಪನಾ ಅನಂತರದ 4 ವರುಷ ಪಡಬಾರದ ಅವಸ್ಥೆ ಪಟ್ಟು ಗೋಟೂರು ಪ್ರವಾಸಿ ಬಂಗಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು.

ಪುಟ್ಟಣ್ಣ, ವಿಶ್ವನಾಥ ಗೌಡ, ಗುಡಿಗೇರಿ ಬಸವರಾಜ ಎಲ್ಲೂ ಆಕೆಗೆ ಸಂಸಾರ ಸಲ್ಲದೆ ಹೋದುದರಿಂದ ಹಾಗೂ ಕಾಯಿಲೆ ಕಾಡತೊಡಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡರು ಎನ್ನಲಾಗಿದೆ.

ಶರತ್ ಲತಾ ಕುಣಿದು ಹೋದ ಮಂಗಳೂರಿನ ಗಣಪತಿ ಹೈಸ್ಕೂಲಿನ ಹಾಲ್ ಮಂಗಳೂರಿನ ಅತಿ ಹಳೆಯ ಹಾಲ್. ಅದು ಇಂದಿಗೂ ಲ್ಯಾಂಡ್ ಮಾರ್ಕ್ ಆಗಿ ಇದೆ.


-By ಪೇಜಾ