ಜೀವನದಲ್ಲಿ ಎಲ್ಲರೂ ಹಲುಬುವುದು ಹಿಡಿ ಸಂತಸ ಮತ್ತು ನೆಮ್ಮದಿಗಾಗಿ. ಹೌದು..ಆದರೆ ಅದನ್ನು ಹುಡುಕುತ್ತಾ ಬದುಕ ಪರಿಷೆಯೊಳಗೆ ಅಲೆದಲೆದು ಇರುವ ಅಲ್ಪಸ್ವಲ್ಪ ನೆಮ್ಮದಿಯನ್ನೂ ಕಳೆದುಕೊಳ್ಳುವವರೆ ಹೆಚ್ಚಾಗಿರುವುದು ವಿಪರ್ಯಾಸ !

ದೈನೇಸಿ ಬದುಕಿಗಾಗಿ ಎಷ್ಟೆಲ್ಲಾ ಹೋರಾಟ ಮಾಡುತ್ತಾರೆ..! ಯಾರಿಗೋ ತಿನ್ನಲು ಅನ್ನವಿರುವುದಿಲ್ಲ, ಕನಿಷ್ಟ ಸೌಜನ್ಯಕ್ಕೆ ಅವರೆಡಿಗೆ ತಿರುಗಿಯೂ ನೋಡದೆ ಇರುವ ಯಾರದೋ ವರ್ತನೆ, ಆ ಮನುಷ್ಯನೊಳಗೆ ಸಮಾಜದ ಮೇಲೊಂದು ದ್ವೇಷದ ಕಿಡಿಯೊತ್ತಿಸುತ್ತದೆ. ಹಸಿವು ಇಂಗಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲು ಹೊರಟಾಗ ದರಿದ್ರದ್ದು ಒಂದು ಕೆಲಸ, ನಾಕಾಣೆ ಸಂಪಾದನೆಯು ಹುಟ್ಟೋದಿಲ್ಲ. ಯಾರದೋ ಪರ್ಸು ಕದಿಯುತ್ತಾನೆ, ಮತ್ಯಾರದೊ ತಲೆ ಹೊಡೆಯಲು, ದರೋಡೆ ಮಾಡಲು, ಹೊರಡುತ್ತಾನೆ. ಸಿಕ್ಕಿಹಾಕಿಕೊಂಡರೆ..! ಮೊಂಡುತನದಿಂದ ಆ ಭಯವನ್ನು ಕಳೆದುಕೊಳ್ಳುತ್ತಾನೆ. after all ಸಿಕ್ಕಬಿದ್ದರೆ ಏನಾದೀತು ? ಪೋಲಿಸರಿಂದ ಒಂದೆರಡು ಏಟು ! ನನ್ನ ಬರಡು ಜೇಬು ನೋಡಿ ಅವರೂ ಬಿಟ್ಟು ಕಳಿಸಿಬಿಡುತ್ತಾರೆಂದು fix ಆಗಿಬಿಡುತ್ತಾನೆ. ಹೇಗಾದರೂ collection ಚೆನ್ನಾಗಿ ಆಗಿಬಿಟ್ಟರೆ, ಆ ದಿನ ಅವನಿಗೆ ಸ್ವರ್ಗಕ್ಕೆ ಮೂರೆ ಗೇಣು !! ಅಸಲಿಗೆ ನಾವು ಹುಡುಕಿ ಹೊರಡುವ ಸಂತೋಷ ಇದೆಯಾ ??

ಆಗ ತಾನೆ ಕಾಲೇಜ್ ಮುಗಿಸಿ, ಇನ್ನೇನು ಕೆಲಸ ಸಿಕ್ಕೇ ಬಿಡುತ್ತದೆ. ನಾನು graduate. rank ಪಡೆದಿದ್ದೇನೆ ಪದವಿಯಲ್ಲಿ. ತಂಗಿ ಮದುವೆ ಮಾಡಿ, ಸಾಲ ತೀರಿಸಿ ಕೊಂಚ ಸುಧಾರಿಸಿಕೊಂಡರೆ, ಆಮೇಲೆ life settle ಆಗಿಬಿಡುತ್ತದೆ..ಮದ್ಯಮ ವರ್ಗದ ಹುಡುಗನ ಮನದ ಮಾತುಗಳಿವು. ಅಯ್ಯೋ..ಎಷ್ಟು ಅಲೆದರೂ ಓದಿಗೆ ತಕ್ಕ ಕೆಲಸ ಸಿಗುತ್ತಿಲ್ಲವಲ್ಲ. ಕೊನೆಗೆ ಜೀವನ ಸಾಗಿಸಲು ಯಾವುದೇ ಕೆಲಸ ಸಿಕ್ಕರೂ ಸಾಕು ಮಾಡಿಬಿಡೋಣ ಎನ್ನುವಲ್ಲಿಗೆ ಬಂದು ನಿಂತಿರುತ್ತಾನೆ. ಹುಮ್ಮಸ್ಸು ಪಾತಾಳಕ್ಕಿಳಿದು ಅಸಹನೆ, ಅಸಹಾಯಕತೆ ಜನ್ಮವೆತ್ತಿರುತ್ತದೆ. ಕೊನೆಗೆ ಸಿಕ್ಕ ಯಾವುದೋ ಒಂದು ಸಣ್ಣ ಕೆಲಸವನ್ನು ಒಳಗೊಳಗೆ ತಿರಸ್ಕರಿಸುತ್ತಲೆ ಮಾಡುತ್ತಾ ಹೆಗಲೇರಿರುವ ಜವಾಬ್ದಾರಿಗಳನ್ನು ಇಳಿಸಿಕೊಳ್ಳುವ ಪ್ರಯತ್ನದಲ್ಲಿರುತ್ತಾನೆ. ಬಲವಂತವಾಗಿಯಾದರು ಮುಖದಲ್ಲೊಂದು ಮುಗುಳ್ನಗೆ ಧರಿಸಿಕೊಳ್ಳುತ್ತಾನೆ. ಪದವಿ ಅವನೊಳಗೊಂದ ಸಣ್ಣ ಅಹಂಕಾರ ಹುಟ್ಟಿಸಿರುತ್ತದೆ..ಏನು ಗೊತ್ತಾ, ನಾನು ಆಫೀಸ್‌ ನಲ್ಲಿ ಕೂತು computer keyboard ಕುಟ್ಟುವುದೆ ನನಗೆ ಸರಿಯಾಗಿ match ಆಗುವುದು ಎನ್ನುವ ಆಸೆ. ಈ ಮನೋಭಾವದಿಂದ atleast ಇರುವ ಕೆಲಸವನ್ನಾದರು ಪ್ರೀತಿಸುವುದನ್ನು ಮರೆತಿರುತ್ತಾನೆ. ಎಂದೋ ಒಂದು ದಿನ ಬೀದಿಯಲ್ಲಿ ಯಾರೊ ಮಲಗಿರುವವರನ್ನೋ ಅಥವಾ ಭಿಕ್ಷೆಯವರನ್ನೋ ನೋಡಿ ನೆಮ್ಮದಿ ಪಟ್ಟುಕೊಳ್ಳುತ್ತಾನೆ. ಸಧ್ಯ..ಇವರಂತೆ ನಾನಿಲ್ಲವಲ್ಲ ಎಂದು. ಅಸಲಿಗೆ ನಾವು ಹುಡುಕುವ ಸಂತೋಷ ಇದಾ !?

ಇನ್ನೂ highclass ಜನರದ್ದು ಬೇರೆಯದ್ದೇ ಕತೆ. ಬಯಸಿದ್ದೆಲ್ಲ ಕಾಲಬಳಿ ಬಿದ್ದಿರುತ್ತದೆ. ಆದರೂ ಏನೋ ಅಸಂತೃಪ್ತಿ..ಇನ್ನಷ್ಟು ಮತ್ತಷ್ಟು adventure ಅನ್ನಿಸುವಂತದ್ದೇನಾದರು ಬೇಕು. ಮತ್ತೆಂತದ್ದೊ ಸ್ಪಷ್ಟತೆ ಇರದ ಹುಡುಕಾಟ. ಆ ಹುಡುಕಾಟದಲ್ಲೆ ವೃದ್ದಾಪ್ಯ ಬಂದುಬಿಟ್ಟಿರುತ್ತದೆ. ಅರೆ..! ನಂಗೆ ವಯಸ್ಸಾಯ್ತು, ನಾನಿನ್ನೂ ನನ್ನ ಸಂತೋಷದ ಹುಡುಕಾಟದಲ್ಲೇ ಇದ್ದೇನಾ. ಯಾವುದೋ parkನ ಕಲ್ಲು ಮೇಜಿನ ಮೇಲೆ, ಅಥವಾ form house ನ ಕುರ್ಚಿಯ ಮೇಲೊ ಕನ್ನಡಕ ಸರಿಪಡಿಕೊಳ್ಳುತ್ತಾ ಯೋಚಿಸುತ್ತಿರುತ್ತಾರೆ.

ಅಸಲಿಗೆ ಎಲ್ಲ ವರ್ಗದ ಎಲ್ಲ ಜನರ ಹುಡುಕಾಟ ಹಿಡಿ ನೆಮ್ಮದಿಯ ನಿಟ್ಟುಸಿರಿಗಾಗಿ !! ಹೌದು, ನಮ್ಮ ಬಗಲಲ್ಲೇ ಇರುವ ಸಂತೋಷಕ್ಕೆ ಇಡೀ ಊರು ಸುತ್ತುತ್ತೇವೆ. ಆದರೆ ಮನುಷ್ಯನನ್ನು ಹೊರತುಪಡಿಸಿ ಇತರೆ ಜೀವಿಗಳೆ ಹೆಚ್ಚು ಸಂತಸವಾಗಿರುತ್ತವಂತೆ.! ಯಾಕೆಂದರೆ ಅವುಗಳ ಬಯಕೆಯ ಪಟ್ಟಿ ಸಣ್ಣದಿರುತ್ತದೆ ನೋಡಿ ! ಬರಿ ಹೊಟ್ಟೆ ತುಂಬಿಸಿಕೊಳ್ಳಲೊ ಅಥವಾ ಮಳೆ ಬಂದಾಗ ಅವಿತುಕೊಳ್ಳಲು ಸಣ್ಣ ಗೂಡು..ಇಷ್ಟರ ಸುತ್ತವೇ ಇರುತ್ತದೆ ಅವುಗಳ ಹುಡುಕಾಟ. ಅವು ಯಾವುದೇ ಹೆಸರು ಮಾಡುವ ಅಥವಾ ರೂಪ ಲಾವಣ್ಯಗಳ ಹಿಂದೆ ಬಿದ್ದಿರುವುದಿಲ್ಲವಲ್ಲ. ಹೂವು ಅರಳುವುದನ್ನು ಕಾಣೊ ಕಂಪಲ್ಲು, ಜಾತಿಭೇದವಿಲ್ಲದೆ ನಗುವ ಮಗುವಲ್ಲು, ಬೀಸುವ ತಂಗಾಳಿಯೊಳಗು ಸಂತೋಷ, ಸಂಭ್ರಮ ಅಡಕವಾಗಿದೆ. ಆದರೆ ಕಂಡುಕೊಳ್ಳುವ ಮನಃಸ್ಥಿತಿಯನ್ನು ಕಳೆದುಕೊಂಡಿರುವುದು ನಾವು ! ಹೌದಲ್ಲವೆ ? ಈಗ ಹೇಳಿ ಸಂತೋಷಕ್ಕೆ ಮಾನದಂಡಗಳಿದೆಯಾ ??

-ಪಲ್ಲವಿ ಚೆನ್ನಬಸಪ್ಪ