ವರದಿ ರಾಯಿ ರಾಜಕುಮಾರ ಮೂಡುಬಿದಿರೆ 


ಸಾರ್ವಜನಿಕ ಸಂಪರ್ಕ ಸಾರಿಗೆಗೆ ಉಪಯೋಗಕರವಾದ ರಸ್ತೆಗಳನ್ನು ಅಭಿವೃದ್ಧಿಪಡಿಸುವರು ರಾಜ್ಯ,ಜಿಲ್ಲೆ, ತಾಲೂಕು ಹೆದ್ದಾರಿಗಳು, ವಿವಿಧ ಹಂತದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕಾಗಿ ಪ್ರತಿ ಜಿಲ್ಲೆಗಳಲ್ಲಿ ಲೋಕೋಪಯೋಗಿ ಇಲಾಖೆಯನ್ನು ಕೂಡ ಸರಕಾರ ರಚನೆ ಮಾಡಿರುತ್ತದೆ. 

ಆದರೆ ಲೋಕೋಪಯೋಗಿ ಇಲಾಖೆ, ಅಧಿಕಾರಿಗಳು ಒಂದೋ ಬೆಚ್ಚಗೆ ಕಚೇರಿಯಲ್ಲಿ ಕುಳಿತಿದ್ದಾರೆ. ಅಥವಾ ಲೋಕೋಪಕಾರಕ್ಕಾಗಿ ಪ್ರಪಂಚ ವೀಕ್ಷಣೆಗೆ ತೆರಳಿರಬಹುದು.

ಈ ವಿವಿಧ ಹಂತದ ಅಧಿಕಾರಿಗಳು, ಎಲ್ಲಿರುತ್ತಾರೆ, ಏನು ಮಾಡುತ್ತಾರೆ ಎಂಬುದು ಯಾರಿಗೂ ತಿಳಿಯದ ವಿಷಯ. ಇಲ್ಲವಾದಲ್ಲಿ ರಸ್ತೆಯ ಉಸ್ತುವಾರಿಯನ್ನು ನೋಡಿಕೊಳ್ಳಬೇಕಾದ ಲೋಕೋಪಯೋಗಿ ಇಲಾಖೆ ಹಾಗೂ ಅದರ ಅಧಿಕಾರಿಗಳನ್ನು ಸಾರ್ವಜನಿಕರು ಭೂತಗನ್ನಡಿ ಹಿಡಿದು ಹುಡುಕಬೇಕಾದ ಪರಿಸ್ಥಿತಿ ಬಂದಿರುತ್ತದೆ. 

ರಾಜ್ಯ ಹೆದ್ದಾರಿಯ ರಸ್ತೆಗಳನ್ನು ಗಮನಿಸಿದರೆ ಈ ಪರಿಸ್ಥಿತಿ ಸಹಜ ಎನ್ನುವುದು ಯಾರಿಗೂ ಅರ್ಥವಾಗುವ ಸಂಗತಿ. ಕುದ್ಕೋಳಿಯಿಂದ ಬಂಟ್ವಾಳ ತನಕದ ಮಾರ್ಗ, ಸಂಪಿಗೆಯಿಂದ ಕಿನ್ನಿಗೋಳಿ ತನಕದ ಮಾರ್ಗ, ಪುತ್ತಿಗೆಯಿಂದ ಬೆಳ್ಮಣ್ ತನಕದ ರಸ್ತೆಯಲ್ಲಿ ಆ ಅಧಿಕಾರಿಗಳನ್ನು ಪ್ರತೀ ದಿನ ಎಂಬಂತೆ ಬಸ್ಸಿನಲ್ಲಿ ತಿರುಗುವಂತೆ ಮಾಡಬೇಕು. ಆಗ ಅವರೆಲ್ಲರಿಗೂ ಸಾಮಾನ್ಯ ಜನರ ಸಂಕಷ್ಟ ಅರ್ಥವಾಗುತ್ತದೆ. 

ಇಲ್ಲದಿದ್ದಲ್ಲಿ ಈ ಚಿತ್ರಗಳಲ್ಲಿ ಕಾಣಿಸುವಂತೆ ಬಸ್ಸುಗಳು ಚಲಿಸುವಾಗ ಪ್ರಯಾಣಿಕರಿಗೆ ಈ ರೀತಿಯ ಪರಿಸ್ಥಿತಿ ಬರಲು ಸಾಧ್ಯವಿಲ್ಲ. ಈ ಮೇಲ್ಕಂಡ ಎಲ್ಲ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಸಾರ್ವಜನಿಕ ವಾಹನಗಳನ್ನೇ ಉಪಯೋಗಿಸುವಂತೆ ಮಾಡಬೇಕು. ಈ ರೀತಿ ಮಾಡಿದರೆ ಅನಗತ್ಯವಾಗಿ ಸರಕಾರಿ ವಾಹನಗಳನ್ನು ಉಪಯೋಗಿಸುವುದನ್ನು ತಡೆಗಟ್ಟಬಹುದು, ಸಾರ್ವಜನಿಕರ ಸಂಕಷ್ಟಗಳು ಅರ್ಥವಾಗುವುದಕ್ಕೆ ಸಾಧ್ಯವಾಗುತ್ತದೆ. ಐಷಾರಾಮಿ ಕಾರುಗಳಲ್ಲಿ, ಜೀಪುಗಳಲ್ಲಿ ತಿರುಗಾಡುವುದನ್ನು ಸರಕಾರ ಕನಿಷ್ಠ ಪಕ್ಷ ಒಂದು ತಿಂಗಳ ಮಟ್ಟಿಗಾದರೂ ಮಳೆಗಾಲದಲ್ಲಿ ನಿರ್ಬಂಧಿಸಬೇಕು. ಮಾತ್ರವಲ್ಲ ಕಾರು ಜೀಪುಗಳಲ್ಲಿ ತಿರುಗಾಡುವುದಿದ್ದರೆ, ಅಂತಹ ಅಧಿಕಾರಿಗಳು ಅವರ ಸ್ವಂತ ಖರ್ಚಿನಲ್ಲಿ ತಿರುಗಾಡುವಂತೆ ಮಾಡಬೇಕು. 

ಆದರೆ ಸರಕಾರದ ಮಟ್ಟದಲ್ಲಿ ಇಂತಹ ಬದ್ಧತೆ ಖಂಡಿತವಾಗಲೂ ಕಾರ್ಯರೂಪಕ್ಕೆ ಬರುವುದು ಅಸಾಧ್ಯ. ಆದುದರಿಂದ ಸಾರ್ವಜನಿಕರೇ ಅಂತಹ ಅಧಿಕಾರಿಗಳನ್ನು ಅಲ್ಲಲ್ಲಿಯ ರಸ್ತೆಗಳಲ್ಲಿಯೇ ಅಡ್ಡಗಟ್ಟಿ, ಚಲಿಸುವುದನ್ನು ನಿರ್ಬಂಧಿಸಿ, ಆಗಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಈ ವಿಚಾರದಲ್ಲಿ ಸ್ಥಳೀಯ ಯುವಕ ಮಂಡಲಗಳು, ಯುವತಿ ಮಂಡಲಗಳು, ಸಾರ್ವಜನಿಕ ಉಪಯೋಗಿ ಸೇವಾ ಸಂಸ್ಥೆಗಳು ಎಚ್ಚರಗೊಳ್ಳಬೇಕಾಗಿದೆ.

ವಾಹನಗಳಿಂದ ಪ್ರತಿದಿನವೂ ರಾಜಸ್ವವನ್ನು ಸಂಗ್ರಹಿಸುವ ರಾಜ್ಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ರಾಜ್ಯ ರಸ್ತೆ ಸಾರಿಗೆ ನಿಗಮ ಇತ್ಯಾದಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ರಸ್ತೆಗಳ ಪರಿಸ್ಥಿತಿ ಈ ರೀತಿ ಆಗುತ್ತಿರಲಿಲ್ಲ. ಉತ್ತಮ ಗುಣಮಟ್ಟದ ಡಾಮರು ರಸ್ತೆಗೆ ಬೀಳುತ್ತಿಲ್ಲ. ಹಳೆಯ ರಸ್ತೆಯ ಮೇಲೆ ಗುಣಮಟ್ಟದ ಡಾಮರು ಹಾಕದ ಪರಿಣಾಮವಾಗಿ ರಸ್ತೆಯ ನಡುವೆಯೇ ಹೊಂಡ ಗುಂಡಿ ನಿರ್ಮಾಣವಾಗುತ್ತಿದೆ. ಡಾಮಾರೀಕರಣದ ಸಂದರ್ಭದಲ್ಲಿ ಅಧಿಕಾರಿಗಳು ಡಾಮಾರಿನ, ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸದಿರುವದೇ ಮುಖ್ಯ ಕಾರಣವಾಗಿದೆ.